ಬೆಲೆಯೇರಿಕೆ ವಿರೋಧಿಸಿ ಪ್ರತಿಪಕ್ಷಗಳು ಕರೆ ನೀಡಿರುವ ಜುಲೈ ಐದರ ರಾಷ್ಟ್ರವ್ಯಾಪಿ ಬಂದ್ ಅನಗತ್ಯವಾಗಿತ್ತು, ಇದರಿಂದ ಜನರು ತೊಂದರೆಗೆ ಸಿಲುಕಲಿದ್ದಾರೆ. ಬದಲಿಗೆ ಸಂಸತ್ತಿನಲ್ಲಿ ಪ್ರತಿಭಟನಾಕಾರರು ಧ್ವನಿಯೆತ್ತಬಹುದಿತ್ತು ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.
ಭಾರತ ಬಂದ್ ಮಾಡುವ ಅಗತ್ಯವಿಲ್ಲ. ಇದರಿಂದ ದೇಶದಾದ್ಯಂತದ ಜನರಿಗೆ ತೊಂದರೆಯಾಗುತ್ತದೆ. ಜುಲೈ 26ರಿಂದ ಸಂಸತ್ ಅಧಿವೇಶನ ಆರಂಭವಾಗುತ್ತಿದೆ. ವಿರೋಧ ಪಕ್ಷಗಳು ತಮ್ಮ ನಿಲುವುಗಳನ್ನು ಸಂಸತ್ತಿನಲ್ಲಿ ಪ್ರಶ್ನಿಸಬಹುದಿತ್ತು ಎಂದು ಕಾಂಗ್ರೆಸ್ ವಕ್ತಾರ ಮೋಹನ್ ಪ್ರಕಾಶ್ ಅಭಿಪ್ರಾಯಪಟ್ಟರು.
ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಬೆಲೆಯೇರಿಕೆಯನ್ನು ವಿರೋಧಿಸಿ ಬಿಜೆಪಿ, ಜೆಡಿಯು, ಸಿಪಿಐಎಂ, ಸಿಪಿಐ, ಆರ್ಎಸ್‌ಪಿ, ಫಾರ್ವರ್ಡ್ ಬ್ಲಾಕ್, ಸಮಾಜವಾದಿ ಪಕ್ಷ, ಎಐಎಡಿಎಂಕೆ, ಟಿಡಿಪಿ, ಬಿಜೆಡಿ, ಶಿರೋಮಣಿ ಅಕಾಲಿ ದಳ, ಶಿವಸೇನೆ ಮತ್ತು ಇಂಡಿಯನ್ ನ್ಯಾಷನಲ್ ಲೋಕದಳ್ ಸೇರಿದಂತೆ ಹಲವು ಪಕ್ಷಗಳು ಜುಲೈ ಐದರಂದು ಸೋಮವಾರ ರಾಷ್ಟ್ರವ್ಯಾಪಿ ಮುಷ್ಕರ ನಡೆಸುವಂತೆ ಕರೆ ನೀಡಿವೆ.
ಬೆಲೆಯೇರಿಕೆಯನ್ನು ನಿಯಂತ್ರಿಸಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ವಿಫಲವಾಗಿದೆ ಎಂಬ ಪ್ರತಿಪಕ್ಷಗಳ ಆರೋಪ ಕುರಿತು ಪ್ರಕಾಶ್ ಅವರಲ್ಲಿ ಪ್ರಶ್ನಿಸಿದಾಗ, ಏರಿಕೆಯಾಗಿರುವ ಬೆಲೆ ಕಡಿಮೆಯಾಗುತ್ತಿದ್ದಂತೆ ಬಿಜೆಪಿಯಂತಹ ಪ್ರತಿಪಕ್ಷಗಳು ಸುಖಾಸುಮ್ಮನೆ ಆರೋಪ ಮಾಡುತ್ತಿವೆ ಎಂದರು.
ಪ್ರತಿ ಬಾರಿ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗುತ್ತಿದ್ದಂತೆ ವಿರೋಧಪಕ್ಷಗಳು, ಅದರಲ್ಲೂ ಪ್ರಮುಖವಾಗಿ ಬಿಜೆಪಿ ಬೆಲೆಯೇರಿಕೆ ಕುರಿತು ಧ್ವನಿಯೆತ್ತುತ್ತದೆ. ಆ ಮೂಲಕ ವಿವಾದ ಸೃಷ್ಟಿಸಿ ಲಾಭ ಮಾಡಿಕೊಳ್ಳುವುದು ಅದರ ಉದ್ದೇಶ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಅದಕ್ಕೂ ಮೊದಲು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸರಕಾರದ ದರಯೇರಿಕೆ ನಿರ್ಧಾರವನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿತ್ತು. ಜನಪ್ರಿಯತೆ ಕಳೆದುಕೊಳ್ಳಲು ಯಾವುದೇ ಸರಕಾರ ಬಯಸುವುದಿಲ್ಲವಾಗಿರುವುದರಿಂದ ಸರಕಾರಕ್ಕೆ ಈ ನಿರ್ಧಾರ ಅನಿವಾರ್ಯವಾಗಿತ್ತು ಎಂದು ಕಾಂಗ್ರೆಸ್ ಹೇಳಿತ್ತು.