ಪಾಕಿಸ್ತಾನ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾ ಸ್ತುತಿಯನ್ನೊಳಗೊಂಡಿದ್ದ ಜಸ್ವಂತ್ ಸಿಂಗ್‌ರ ಪುಸ್ತಕ ವಿವಾದ ಮುಗಿದ ಅಧ್ಯಾಯ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಬಣ್ಣಿಸಿದ್ದು, ಅವರಂತಹ ಹಿರಿಯ ನಾಯಕರ ಪುನರಾಗಮನದಿಂದ ಪಕ್ಷಕ್ಕೆ ಹೆಚ್ಚಿನ ಬಲ ಬಂದಂತಾಗಿದೆ ಎಂದಿದ್ದಾರೆ.
ಜಸ್ವಂತ್ ಸಿಂಗ್ ಮತ್ತು ರಾಮ್ ಜೇಠ್ಮಲಾನಿಯಂತಹ ನಾಯಕರನ್ನು ಬಿಜೆಪಿ ಮರಳಿ ಸೇರಿಸಿಕೊಂಡಿರುವುದರ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಕ್ಷಕ್ಕೆ ಜನರನ್ನು ಸೇರಿಸಿಕೊಳ್ಳುವುದು ಹೆಚ್ಚು ಶಕ್ತಿಯನ್ನು ಕ್ರೋಢೀಕರಿಸಿಕೊಳ್ಳಲು. ಇದು ಪಕ್ಷಕ್ಕೆ ಉತ್ತಮ ಹಾದಿಯನ್ನು ಒದಗಿಸುತ್ತದೆ ಎಂದರು.
ಜಿನ್ನಾರನ್ನು ಹೊಗಳಿದ ಪುಸ್ತಕ ಬರೆದು ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದ ಮಾಜಿ ರಕ್ಷಣಾ, ವಿತ್ತ ಹಾಗೂ ವಿದೇಶಾಂಗ ಸಚಿವರು ಕನಿಷ್ಠ ಕ್ಷಮೆಯನ್ನೂ ಯಾಚಿಸದಿದ್ದರೂ ಮರಳಿ ಸೇರಿಸಿಕೊಂಡದ್ದಕ್ಕೆ, ಅವೆಲ್ಲ ಹಳೆ ವಿಚಾರಗಳು. ಆ ಪ್ರಕರಣಗಳು ಯಾವತ್ತೋ ಮುಗಿದು ಹೋಗಿವೆ. ಅವರ ದೃಷ್ಟಿಕೋನಗಳಿಗಿಂತ, ಅವರು ಪಕ್ಷಕ್ಕೆ ನಿಷ್ಠರಾಗಿದ್ದಾರೆ ಎನ್ನುವುದು ಮುಖ್ಯ ಎಂದು ಗಡ್ಕರಿ ಹೇಳಿದರು.
ಒಬ್ಬ ವ್ಯಕ್ತಿಯಾಗಿ ಜಸ್ವಂತ್ ಸಿಂಗ್ ಶ್ರೇಷ್ಠ. ಅವರು ಹಿರಿಯ ಮತ್ತು ಅನುಭವಿ ನಾಯಕ. ಪಕ್ಷವು ಅಸ್ತಿತ್ವಕ್ಕೆ ಬರುವ ಹೊತ್ತಿನಲ್ಲಿ ಜತೆಗಿದ್ದವರು ಅವರು. ನಾನು ಅವರನ್ನು ಅಪಾರವಾಗಿ ಗೌರವಿಸುತ್ತೇನೆ. ಅವರ ಪುಸ್ತಕವನ್ನು ಹೊರತುಪಡಿಸಿ, ಅವರು ಪಕ್ಷಕ್ಕೆ ಸಂಪೂರ್ಣವಾಗಿ ನಿಷ್ಠರಿದ್ದಾರೆ ಎಂದು ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
ಅದೇ ಹೊತ್ತಿಗೆ ಪಕ್ಷದಲ್ಲಿನ ಪ್ರತಿಯೊಬ್ಬನೂ ತನ್ನ ನಿಲುವನ್ನು ವ್ಯಕ್ತಪಡಿಸಲು ಅವಕಾಶವಿದೆ, ಅದು ಅವರ ಹಕ್ಕು. ನಮ್ಮದು ಪ್ರಜಾಪ್ರಭುತ್ವವಿರುವ ಪಕ್ಷ ಎಂದೂ ಹೇಳಿಕೊಂಡಿದ್ದಾರೆ.
ಒಂದು ದೊಡ್ಡ ಪಕ್ಷವೆಂದರೆ ಅದು ದೊಡ್ಡ ರಾಜಕೀಯ ನಾಯಕರಿಂದ ಕೂಡಿದ್ದಾಗಿರುತ್ತದೆ. ಹಾಗಾಗಿ ಅಲ್ಲಿ ಕೆಲವು ಸ್ವತಂತ್ರ ಮತ್ತು ಭಿನ್ನ ಅಭಿಪ್ರಾಯಗಳು ಸಾಮಾನ್ಯ. ಎಲ್ಲರ ಅಭಿಪ್ರಾಯಗಳೂ ಒಂದೇ ರೀತಿಯಾಗಿರಲು, ಮನೋಭಾವಗಳು ಶೇ. 100ರಷ್ಟು ಜತೆಗೇ ಹೋಗಲು ಸಾಧ್ಯವಿಲ್ಲ ಎಂದು ಗಡ್ಕರಿ ವಿವರಿಸಿದ್ದಾರೆ.