ತೈಲ ಬೆಲೆ ಏರಿಕೆ ವಿರೋಧಿಸಿ ಎನ್‌ಡಿಎ ಮತ್ತು ಎಡಪಕ್ಷಗಳು ನೀಡಿರುವ ಭಾರತ ಬಂದ್‌ಗೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ವ್ಯಾಪಕ ಬೆಂಬಲ ದೊರೆತಿದ್ದು, ಹಲವೆಡೆ ಬಸ್ಸು, ರೈಲುಗಳಿಗೆ ಕಲ್ಲು ತೂರಾಟ ಹಾಗೂ ಟೈರುಗಳಿಗೆ ಬೆಂಕಿ ಹಚ್ಚಲಾಗಿದೆ. ಬಿಜೆಪಿ ಸೇರಿದಂತೆ ಇತರ ಪಕ್ಷಗಳು ಭಾರೀ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಹಲವು ನಾಯಕರನ್ನು ಈಗಾಗಲೇ ಬಂಧಿಸಲಾಗಿದೆ. ಬಹುತೇಕ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ವರದಿಗಳು ಹೇಳಿವೆ.
ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಬೆಲೆಯೇರಿಕೆಯನ್ನು ವಿರೋಧಿಸಿ ಬಿಜೆಪಿ, ಜೆಡಿಎಸ್, ಜೆಡಿಯು, ಸಿಪಿಐಎಂ, ಸಿಪಿಐ, ಆರ್ಎಸ್‌ಪಿ, ಫಾರ್ವರ್ಡ್ ಬ್ಲಾಕ್, ಸಮಾಜವಾದಿ ಪಕ್ಷ, ಎಐಎಡಿಎಂಕೆ, ಟಿಡಿಪಿ, ಬಿಜೆಡಿ, ಶಿರೋಮಣಿ ಅಕಾಲಿ ದಳ, ಶಿವಸೇನೆ ಮತ್ತು ಇಂಡಿಯನ್ ನ್ಯಾಷನಲ್ ಲೋಕದಳ್ ಸೇರಿದಂತೆ ಹಲವು ಪಕ್ಷಗಳು ಇಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸುವಂತೆ ಕರೆ ನೀಡಿದ್ದವು.
ಭಾರೀ ಪ್ರತಿಭಟನೆ, ರ‌್ಯಾಲಿ ಹಿನ್ನೆಲೆಯಲ್ಲಿ ಬಿಜೆಪಿಯ ಅರುಣ್ ಜೇಟ್ಲಿ, ಮುಖ್ತಾರ್ ಅಬ್ಬಾಸ್ ನಖ್ವಿ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ರಾಜಕೀಯ ನಾಯಕರುಗಳನ್ನು ಬಂಧಿಸಲಾಗಿದೆ.
ಅವಶ್ಯಕ ಸೇವೆಗಳು ಅಬಾಧಿತ... ಹಾಲು ಪೂರೈಕೆ, ಆಸ್ಪತ್ರೆಗೆ ಹೋಗುವ ವಾಹನಗಳು, ತುರ್ತು ಸೇವೆಗಳು ಮತ್ತು ಮಾಧ್ಯಮಗಳ ವಾಹನಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಬಂದ್‌ಗೆ ಕರೆ ನೀಡಿರುವ ಎಲ್ಲಾ ಪಕ್ಷಗಳೂ ಹೇಳಿಕೊಂಡಿವೆ.
ಕಂಪನಿಗಳಿಗೆ ರಜೆ... ಬಂದ್‌ನಿಂದ ತೊಂದರೆ ಎದುರಾಗಬಹುದು ಎಂದು ಮುನ್ನೆಚ್ಚೆರಿಕಾ ಕ್ರಮವಾಗಿ ಪ್ರಮುಖ ನಗರಗಳಲ್ಲಿನ ಕೆಲವು ಕಾರ್ಖಾನೆಗಳು, ಸಾಫ್ಟ್‌ವೇರ್ ಕಂಪನಿಗಳು ತಮ್ಮ ನೌಕರರಿಗೆ ರಜೆ ಘೋಷಿಸಿವೆ. ಇದರಿಂದಾಗಿ ವಾರದಲ್ಲಿ ಐದೇ ದಿನ ಕೆಲಸ ಮಾಡುವ ಕಂಪನಿಗಳ ನೌಕರರಿಗೆ ನಿರಂತರ ಮೂರು ದಿನಗಳ ರಜೆ ಸಿಕ್ಕಿದಂತಾಗಿದೆ.
ಕರ್ನಾಟಕ ಬಂದ್... ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಎಡಪಕ್ಷಗಳು ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಕೆಲವೆಡೆ ಸಣ್ಣ ಪ್ರಮಾಣದ ಹಿಂಸಾಚಾರಗಳು ನಡೆದಿರುವ ವರದಿಗಳೂ ಬಂದಿವೆ.
ರಾಜ್ಯದಾದ್ಯಂತ 30ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ. ಹಲವು ಬಸ್ಸುಗಳು ಜಖಂಗೊಂಡಿವೆ. ಇದರಿಂದಾಗಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದಾದ್ಯಂತ ಬಿಎಂಟಿಸಿ, ಕೆಎಸ್ಆರ್‌ಟಿಸಿ ಸೇರಿದಂತೆ ಸರಕಾರಿ ಬಸ್ಸುಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಾರಿಗೆ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಪ್ರತಿಭಟನಾಕಾರರ ಸೆರೆ.. ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ನೂರಾರು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ. ಶೋಭಾ ಕರಂದ್ಲಾಜೆ, ಸಿಟಿ ರವಿ ಮುಂತಾದವರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬೆಂಗಳೂರು ರೈಲ್ವೇ ನಿಲ್ದಾಣ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೇಂದ್ರ ಸರಕಾರದ ಕಚೇರಿಗಳಿಗೂ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಬೆಂಗಳೂರಿನ ಕ್ರೈಸ್ಟ್ ಕಾಲೇಜಿಗೆ ದಾಳಿ ಮಾಡಿ ರಜೆ ನೀಡುವಂತೆ ಆಗ್ರಹಿಸಿರುವ ವರದಿಗಳು ಬಂದಿವೆ.
ಮಂಗಳೂರು, ಮೈಸೂರು, ಹುಬ್ಬಳ್ಳಿ, ಉಡುಪಿ, ಕುಂದಾಪುರ, ಗುಲ್ಬರ್ಗಾ, ಬೀದರ್ ಮುಂತಾದೆಡೆಯೂ ಬಿಜೆಪಿ, ಜೆಡಿಎಸ್ ಮತ್ತು ಎಡಪಕ್ಷಗಳು ಪ್ರತಿಭಟನೆ ನಡೆಸಿವೆ. ಹೆಚ್ಚಿನೆಡೆ ರೈಲ್ವೇ ಸೇವೆಗಳಿಗೆ ತಡೆಯೊಡ್ಡಲಾಗಿದೆ.
ಬೆಂಗಳೂರು ಸ್ತಬ್ಧ... ಸದಾ ವಾಹನಗಳಿಂದಲೇ ಗಿಜಿಗುಡುತ್ತಿದ್ದ ಬೆಂಗಳೂರಿನಲ್ಲಿ ಇಂದು ಟ್ರಾಫಿಕ್ ಸಿಗ್ನಲ್ ನಿಷ್ಕ್ರಿಯಗೊಳ್ಳುವಷ್ಟು ತೀವ್ರವಾಗಿ ಬಂದ್ ಪರಿಣಾಮ ಬೀರಿದೆ. ಯಾವುದೇ ಸರಕಾರಿ ಬಸ್ಸುಗಳು ರಸ್ತೆಗಿಳಿಯುತ್ತಿಲ್ಲ. ಪ್ರಯಾಣಿಕರನ್ನು ಸಾಗಿಸುತ್ತಿದ್ದ ಕೆಲವು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ ಕಾರಣ ಎಲ್ಲಾ ಬಸ್ಸುಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ.
ಅಂಗಡಿ-ಮುಂಗಟ್ಟುಗಳೂ ಕಾರ್ಯಾಚರಿಸುತ್ತಿಲ್ಲ. ರೈಲು ಸಂಚಾರರಕ್ಕೂ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸುತ್ತಿದ್ದಾರೆ. ಈಗಾಗಲೇ ಬಿಜೆಪಿ ಕಾರ್ಯಕರ್ತರು ರೈಲು ನಿಲ್ದಾಣಕ್ಕೆ ತೆರಳಿ ರೈಲು ತಡೆ ಮಾಡುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತೆ ವಹಿಸುತ್ತಿದ್ದಾರೆ.
ಶಾಲೆಗಳಿಗೆ ರಜೆ... ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲಾ ಕೇಂದ್ರಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಸರಕಾರಿ ಶಾಲೆಗಳಿಗೆ ರಜೆ ನೀಡುವ ಮೊದಲು ಪರಿಸ್ಥಿತಿಯನ್ನು ಗಮನಕ್ಕೆ ತೆಗೆದುಕೊಳ್ಳಬೇಕು ಎಂಬ ನಿರ್ದೇಶನವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ ನೀಡಿರುವುದರಿಂದ, ಮುಂಚಿತವಾಗಿ ರಜೆ ನೀಡಿರಲಿಲ್ಲ. ಆದರೆ ವಾಹನಗಳು ರಸ್ತೆಗಿಳಿಯದ ಕಾರಣ ಬಹುತೇಕ ಎಲ್ಲಾ ಶಾಲೆಗಳಿಗೂ ರಜೆ ನೀಡಲಾಗಿದೆ.
ಸರಕಾರಿ ಕಚೇರಿಗಳಿಗೆ ರಜೆ ನೀಡಲಾಗಿಲ್ಲ, ಆದರೆ ಸಿಬ್ಬಂದಿಗಳ ಸಂಖ್ಯೆ ವಿರಳವಾಗಿದೆ.
ಚಿತ್ರೋದ್ಯಮವೂ ಸ್ಥಗಿತ... ಬಂದ್ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಎಲ್ಲಾ ಚಿತ್ರಮಂದಿರಗಳನ್ನೂ ಮುಚ್ಚಲಾಗಿದೆ. ಇಂದು ಯಾವುದೇ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿಲ್ಲ ಎಂದು ಥಿಯೇಟರುಗಳು ಬೋರ್ಡುಗಳನ್ನು ನೇತು ಹಾಕಿವೆ.
ಕನ್ನಡ ಚಿತ್ರರಂಗವೂ ಇಂದು ರಾಜ್ಯದಲ್ಲಿ ನಡೆಯುವ ಚಿತ್ರೀಕರಣಕ್ಕೆ ಬ್ರೇಕ್ ಹಾಕಿವೆ. ಅಹಿತಕರ ಘಟನೆಗಳು ಎದುರಾಗಬಹುದು ಎಂಬ ನಿಟ್ಟಿನಲ್ಲಿ ಯಾವುದೇ ಚಿತ್ರಗಳ ಚಿತ್ರೀಕರಣಕ್ಕೆ ಮುಂದಾಗಿಲ್ಲ.
ಲಾರಿ-ರಿಕ್ಷಾಗಳಿಂದಲೂ ಪ್ರತಿಭಟನೆ... ಡೀಸೆಲ್ ಬೆಲೆಯಲ್ಲೂ ಏರಿಕೆ ಮಾಡಿರುವುದರಿಂದ ತಾವು ಬಂದ್‌ಗೆ ಸಂಪೂರ್ಣ ಸಹಕಾರ ನೀಡುವುದಾಗಿ ಕರ್ನಾಟಕ ಲಾರಿ ಮಾಲೀಕರ ಸಂಘಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ. ರಿಕ್ಷಾಗಳಿಗೆ ತಟ್ಟಿರುವುದು ಪೆಟ್ರೋಲ್ ಬೆಲೆಯೇರಿಕೆ ಬಿಸಿ. ನಾಲ್ಕೈದು ಆಟೋ ಮಾಲೀಕರ ಮತ್ತು ಚಾಲಕರ ಸಂಘಗಳು ಅಸ್ತಿತ್ವದಲ್ಲಿದ್ದರೂ, ಇದುವರೆಗೆ ಒಂದೆರಡು ಸಂಘಟನೆಗಳು ಮಾತ್ರ ಬಂದ್‌ಗೆ ಬೆಂಬಲ ನೀಡಿದ್ದವು. ಆದರೆ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಆಟೋ ರಿಕ್ಷಾಗಳು ವಿರಳವಾಗಿ ಕಾಣಿಸುತ್ತಿವೆ.
ದೇಶದ ಇತರೆಡೆಗಳಲ್ಲಿ... ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ತೈಲ ಬೆಲೆಯೇರಿಕೆ ಮಾಡಿರುವುದನ್ನು ವಿರೋಧಿಸಿ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಪ್ರತಿಭಟನೆ ನಡೆಯುತ್ತಿದೆ. ಕೆಲವು ರಾಜ್ಯಗಳಲ್ಲಿ ತೀವ್ರತರವಾಗಿದ್ದರೆ, ಇನ್ನು ಕೆಲವು ರಾಜ್ಯಗಳಲ್ಲಿ ನೀರಸವಾಗಿರುವುದು ಕಂಡು ಬಂದಿದೆ.
ಬಿಹಾರ... ಇಲ್ಲಿ ಬಿಜೆಪಿ ಮತ್ತು ಜೆಡಿಯು ಕಾರ್ಯಕರ್ತರು ರಾಜಧಾನಿ ಪಾಟ್ನಾ ಸೇರಿದಂತೆ ಹಲವು ನಗರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲವು ಕಡೆ ಹಿಂಸಾಚಾರಗಳು ನಡೆದ ಬಗ್ಗೆಯೂ ವರದಿಗಳು ಬಂದಿವೆ.
ಪಾಟ್ನಾದಲ್ಲಿ ಪ್ರತಿಭಟನಾಕಾರರು 10ಕ್ಕೂ ಹೆಚ್ಚು ಎಕ್ಸ್‌ಪ್ರೆಸ್ ರೈಲುಗಳನ್ನು ತಡೆದಿದ್ದಾರೆ. ಹಲವು ಕಡೆ ಟೈರುಗಳಿಗೆ ಬೆಂಕಿ ಹಚ್ಚಲಾಗಿದೆ. ನೂರಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.
ಆಂಧ್ರಪ್ರದೇಶ... ರಾಷ್ಟ್ರವ್ಯಾಪಿ ಬಂದ್ ಆಂಧ್ರಪ್ರದೇಶದ ಜಿಲ್ಲಾ ಸಾರಿಗೆ ವ್ಯವಸ್ಥೆ ಮೇಲೆ ಭಾರೀ ಪರಿಣಾಮ ಬೀರಿದೆ. ಸುಮಾರು 1,200 ಸರಕಾರಿ ಬಸ್ಸುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ನಾಲ್ಕು ಬಸ್ಸುಗಳನ್ನು ಜಖಂಗೊಳಿಸಲಾಗಿದೆ.
ಹೈದರಾಬಾದ್‌ನಲ್ಲಿ ವಾಹನಗಳ ಸಂಚಾರಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಜಿ. ಕಿಶನ್ ರೆಡ್ಡಿಯವರನ್ನು ಬಂಧಿಸಲಾಗಿದೆ. ಇಲ್ಲಿ ತೆಲುಗು ದೇಶಂ ಕೂಡ ಭಾರೀ ಪ್ರತಿಭಟನೆ ನಡೆಸುತ್ತಿದೆ.
ಪಶ್ಚಿಮ ಬಂಗಾಲ... ರಾಜಧಾನಿ ಕೊಲ್ಕತ್ತಾದಲ್ಲಿ ಯಾವುದೇ ಖಾಸಗಿ ವಿಮಾನಗಳು ಹಾರಾಟ ನಡೆಸುತ್ತಿಲ್ಲ. ಆದರೆ ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಚಾರ ಸ್ಥಗಿತಗೊಳಿಸಿಲ್ಲ. ದೆಹಲಿ, ಮುಂಬೈ, ಗುವಾಹತಿಗೆ ತೆರಳುವ ವಿಮಾನಗಳು ಬೆಳಿಗ್ಗೆ ಹಾರಾಟ ನಡೆಸಿವೆ.
ಎಡರಂಗ ಬಂದ್‌ಗೆ ಬೆಂಬಲ ನೀಡಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಸುಮಾರು 16ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಹಲವು ರೈಲುಗಳ ಸಂಚಾರಗಳನ್ನು ರದ್ದುಗೊಳಿಸಲಾಗಿದೆ.
ಮಹಾರಾಷ್ಟ್ರ... ಬಿಜೆಪಿ ಕರೆ ನೀಡಿರುವ ಬಂದ್‌ಗೆ ಶಿವಸೇನೆಯೂ ಬೆಂಬಲ ನೀಡಿದ್ದು, ಬಹುತೇಕ ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂಬೈಯಲ್ಲಿ ಆಟೋರಿಕ್ಷಾಗಳು ಮತ್ತು ಟ್ಯಾಕ್ಸಿಗಳು ರಸ್ತೆಗಿಳಿದಿಲ್ಲ. ಬಹುತೇಕ ಶಾಲಾ-ಕಾಲೇಜುಗಳಿಗೂ ರಜೆ ಸಾರಲಾಗಿದೆ. ಭಾರೀ ಪೊಲೀಸರನ್ನು ನಿಯೋಜಿಸಲಾಗಿದೆ.
80ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ 1,000 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 40,000 ಪೊಲೀಸರನ್ನು ನಿಯೋಜಿಸಲಾಗಿದೆ.
ಯಾವುದೇ ವ್ಯಕ್ಯಿ ಅಥವಾ ರಾಜಕೀಯ ಪಕ್ಷ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದಲ್ಲಿ, ಅವರಿಂದಲೇ ಪರಿಹಾರವನ್ನು ಭರಿಸಲಾಗುತ್ತದೆ ಎಂದು ಮುಂಬೈ ನಗರ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.
ಕೇರಳ... ಎಲ್ಲಾ ಶಾಲೆಗಳಿಗೂ ರಜೆ ನೀಡಲಾಗಿದೆ. ಬಹುತೇಕ ವಾಣಿಜ್ಯ ಮಳಿಗೆಗಳು, ವ್ಯವಹಾರಗಳು ಸ್ಥಗಿತಗೊಂಡಿವೆ. ಖಾಸಗಿ ವಾಹನಗಳು, ಸರಕಾರಿ ಬಸ್ಸುಗಳು, ಆಟೋ ರಿಕ್ಷಾಗಳು ರಸ್ತೆಗಳಿದಿಲ್ಲ. ರೈಲು ಸಂಚಾರವೂ ರದ್ದುಗೊಂಡಿರುವುದರಿಂದ ಪ್ರಯಾಣಿಕರು ಅತಂತ್ರರಾಗಿದ್ದಾರೆ.
ಆದರೆ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಪ್ರತಿಭಟನಾಕಾರರು ಅವಕಾಶ ನೀಡುತ್ತಿದ್ದಾರೆ. ತುರ್ತು ಸೇವೆಗಳು ಮತ್ತು ಆಸ್ಪತ್ರೆ ಸೇವೆಗಳಿಗೆ ಯಾವುದೇ ತೊಂದರೆಯಾಗಿಲ್ಲ.
ಇಲ್ಲಿ ಎಡರಂಗ ಮತ್ತು ಬಿಜೆಪಿಗಳು ಜಿಲ್ಲಾ ಕೇಂದ್ರಗಳಲ್ಲಿ ವ್ಯವಸ್ಥಿತ ಪ್ರತಿಭಟನಾ ರ‌್ಯಾಲಿಗಳನ್ನು ನಡೆಸುತ್ತಿವೆ.
ಗುಜರಾತ್... ಆಡಳಿತಾರೂಢ ಬಿಜೆಪಿಯೇ ಕರೆ ನೀಡಿರುವುದರಿಂದ ಇಲ್ಲಿ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಆದರೂ ಸರಕಾರಿ ಬಸ್ಸುಗಳ ಓಡಾಟವನ್ನು ರದ್ದುಪಡಿಸದಿದ್ದರೂ, ವಿರಳವಾಗಿವೆ. ಖಾಸಗಿ ಬಸ್ಸುಗಳು ಮತ್ತು ಆಟೋರಿಕ್ಷಾಗಳು ರಸ್ತೆಗಿಳಿದಿಲ್ಲ.
ಬಿಜೆಪಿ ಕಾರ್ಯಕರ್ತರು ಅಲ್ಲಲ್ಲಿ ಭಾರೀ ಪ್ರತಿಭಟನೆಗಳನ್ನು, ರಸ್ತೆ ತಡೆಗಳನ್ನು ನಡೆಸುತ್ತಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಲು 5,000 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ನವದೆಹಲಿ... ರಾಜಧಾನಿಯಲ್ಲಿ ಬಿಜೆಪಿ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವು ರೈಲ್ವೇ ನಿಲ್ದಾಣಗಳಿಗೆ ತೆರಳಿ ರೈಲು ತಡೆ ನಡೆಸಿದ್ದಾರೆ. ಮೆಟ್ರೋ ಸೇವೆಗಳಿಗೆ ತೊಂದರೆಯಾಗಿದೆ ಎಂದು ವರದಿಗಳು ಬಂದಿವೆ.
ಆನಂದ್ ವಿಹಾರ್ ಬಸ್ ಟರ್ಮಿನಸ್‌ನಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದು, ಹಲವು ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿವೆ. ವೈಮಾನಿಕ ಸೇವೆಗಳಿಗೆ ಯಾವುದೇ ಅಡ್ಡಿಯಾಗಿಲ್ಲ.
ಬಿಜೆಪಿ ನಾಯಕ ವಿಜಯ್ ಜಾಲಿ ಸೇರಿದಂತೆ ಹಲವು ಪ್ರತಿಭಟನಾಕಾರರನ್ನು ದಕ್ಷಿಣ ದೆಹಲಿಯಲ್ಲಿ ಬಂಧಿಸಲಾಗಿದೆ.
ಉತ್ತರ ಪ್ರದೇಶ... ಲಕ್ನೋದ ಪಕ್ಷದ ಕಚೇರಿಯ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ ನಂತರ ಬಿಜೆಪಿ ನಾಯಕರಾದ ಅರುಣ್ ಜೇಟ್ಲಿ ಮತ್ತು ಮುಖ್ತಾರ್ ಅಬ್ಬಾಸ್ ನಖ್ವಿಯವರನ್ನು ಪೊಲೀಸರು ಬಂಧಿಸಿದ್ದಾರೆ.
ಸಮಾಜವಾದಿ ಪಕ್ಷದ ಕಾರ್ಯಕರ್ತರ ಮೇಲೂ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಮಾಯಾವತಿಯವರ ಬಹುಜನ ಸಮಾಜ ಪಕ್ಷ ಬಂದ್‌ಗೆ ಬೆಂಬಲ ನೀಡದೇ ಇರುವುದರಿಂದ ಪ್ರತಿಭಟನಾಕಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
ತಮಿಳುನಾಡು... ಕೇರಳ ಮತ್ತು ಕರ್ನಾಟಕಗಳಿಗೆ ಹೋಗುವ ಎಲ್ಲಾ ಬಸ್ಸುಗಳನ್ನೂ ಸ್ಥಗಿತಗೊಳಿಸಲಾಗಿದೆ. ಚೆನ್ನೈ, ಕೊಲ್ಕತ್ತಾ, ಮಂಗಳೂರು ಮತ್ತು ಕೊಚ್ಚಿನ್‌ಗಳಿಗೆ ತೆರಳುವ ವಿಮಾನಗಳ ಹಾರಾಟವನ್ನೂ ರದ್ದು ಮಾಡಲಾಗಿದೆ.
ಜಯಲಲಿತಾ ನೇತೃತ್ವದಲ್ಲಿ ಎಐಎಡಿಎಂಕೆ ಕಾರ್ಯಕರ್ತರು ಹಲವು ರೈಲ್ವೇ ನಿಲ್ದಾಣಗಳಿಗೆ ಮುತ್ತಿಗೆ ಹಾಕಿದ್ದಾರೆ. ಆದರೆ ಪ್ರತಿಭಟನಾಕಾರರನ್ನು ಕರುಣಾನಿಧಿಯವರ ಡಿಎಂಕೆ ಸರಕಾರ ಬಂಧಿಸಿದೆ. ಒಟ್ಟಾರೆ ತಮಿಳುನಾಡಿನಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಧ್ಯಪ್ರದೇಶ... ಆಡಳಿತಾರೂಢ ಬಿಜೆಪಿ ಬಂದ್‌ಗೆ ಕರೆ ನೀಡಿರುವುದರಿಂದ ಇಲ್ಲಿ ಬಹುತೇಕ ಬಂದ್ ಯಶಸ್ವಿಯಾಗಿದೆ. ಆದರೂ ಯಾವುದೇ ಸಮಸ್ಯೆಗಳು ಉದ್ಭವಿಸದಂತೆ ಸರಕಾರ ಮುನ್ನೆಚ್ಚೆರಿಕೆ ಕ್ರಮಗಳನ್ನು ಕೈಗೊಂಡಿದೆ.
ಭೋಪಾಲ್‌ನಲ್ಲಿ 5,000 ಪೊಲೀಸರನ್ನು ಹಿಂಸಾಚಾರ ತಡೆಗಟ್ಟಲು ನಿಯೋಜಿಸಲಾಗಿದೆ. ರೈಲು ಸೇವೆ ಎಂದಿನಂತೆ ಸಾಗಿದೆ. ಬಸ್ ಸಂಚಾರ ವಿರಳವಾಗಿದೆ ಎಂದು ವರದಿಗಳು ಹೇಳಿವೆ.