ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2014ರಲ್ಲಿ ಎನ್‌ಡಿಎ ಅಧಿಕಾರಕ್ಕೆ ಮರಳುತ್ತದೆ: ಗಡ್ಕರಿ (NDA | Nitin Gadkari | BJP | Lok Sabha)
Bookmark and Share Feedback Print
 
2014ರ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟವು (ಎನ್‌ಡಿಎ) ಕೇಂದ್ರದಲ್ಲಿ ಮರಳಿ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ತನಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ.

1998ರಿಂದ 2004ರವರೆಗೆ ದೇಶವನ್ನು ಆಳಿದ್ದ ಬಹು ಪಕ್ಷಗಳನ್ನೊಳಗೊಂಡ ಎನ್‌ಡಿಎ ಮೈತ್ರಿಕೂಟದಿಂದ ಬಿಜು ಜನತಾದಳ ಮತ್ತು ಭಾರತೀಯ ರಾಷ್ಟ್ರೀಯ ಲೋಕದಳದಂತಹ ಪಕ್ಷಗಳು ಹೊರ ಹೋದ ಕಾರಣ ದುರ್ಬಲವಾಗಿದೆ ಎಂಬುದನ್ನು ಒಪ್ಪಿಕೊಳ್ಳಲು ಇದೇ ಸಂದರ್ಭದಲ್ಲಿ ಅವರು ನಿರಾಕರಿಸಿದ್ದಾರೆ.

ಇದು ಇಲ್ಲಿರುವುದು ಮತ್ತು ಹೊರಗೆ ಹೋಗುವ ಪ್ರಕ್ರಿಯೆಯ ಪ್ರಶ್ನೆಯಲ್ಲ. ಕೆಲವು ಪಕ್ಷಗಳು ಹೋಗಬಹುದು, ಆದರೆ ಹಲವು ಪಕ್ಷಗಳು ಎನ್‌ಡಿಎ ಸೇರಿಕೊಳ್ಳಲು ಕಾತರದಿಂದ ಕಾಯುತ್ತಿವೆ ಎಂದು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಗಡ್ಕರಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆ ಪಕ್ಷಗಳು ಯಾವುವು ಎಂದು ಬಹಿರಂಗಪಡಿಸಬಹುದೇ ಎಂದಾಗ, ಅದನ್ನು ಸೂಕ್ತ ಸಮಯದಲ್ಲಿ ನಿಮಗೆ ತಿಳಿಸುತ್ತೇವೆ ಎಂದಷ್ಟೇ ಹೇಳಿದರು.

ರಾಜನಾಥ್ ಸಿಂಗ್ ಅವರ ಕೈಯಿಂದ ಅಧಿಕಾರವನ್ನು ಪಡೆದುಕೊಂಡ ನಂತರ ದೇಶದಾದ್ಯಂತ ಬಿಜೆಪಿಯಲ್ಲಿ ಹೆಚ್ಚಿನ ಕಳೆ ಬಂದಿದೆ ಎಂದು ಈ 53ರ ಹರೆಯದ ಮರಾಠಿಗ ಹೇಳಿಕೊಂಡಿದ್ದು, ಎನ್‌ಡಿಎ ಕೇಂದ್ರದತ್ತ ದಾಪುಗಾಲು ಹಾಕುತ್ತಿದೆ ಎಂದಿದ್ದಾರೆ.

ಜೆಡಿಯು ಜತೆಗಿನ ಭಿನ್ನಮತ, ಸಮಾಜವಾದಿ ಮುಖಂಡ ಮುಲಾಯಂ ಸಿಂಗ್ ಯಾದವ್ ಮತ್ತು ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ವಿರುದ್ಧ 'ಬೊಗಳುವ ನಾಯಿಗಳು' ಎಂದು ಟೀಕಿಸಿದ್ದನ್ನು ಪ್ರಶ್ನಿಸಿದಾಗ, ಅವೆಲ್ಲ ಮುಗಿದ ಅಧ್ಯಾಯಗಳು ಎಂದು ಗಡ್ಕರಿ ಉತ್ತರಿಸಿದರು.

ಅದೇ ಹೊತ್ತಿಗೆ ವರಿಷ್ಠ ಎಲ್.ಕೆ. ಅಡ್ವಾಣಿಯವರ ಜತೆ ಹೊಂದಾಣಿಕೆಯಿಲ್ಲ ಎಂಬುದನ್ನೂ ಅವರು ತಳ್ಳಿ ಹಾಕಿದ್ದಾರೆ. ನನಗೆ ಅಡ್ವಾಣಿ ಅಥವಾ ಇತರ ಯಾವುದೇ ಹಿರಿಯ ಅಥವಾ ಕಿರಿಯ ನಾಯಕರುಗಳ ಜತೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಅನುಭವದ ಕೊರತೆಯೂ ಕಾಡುತ್ತಿಲ್ಲ. ಕೆಲವು ತಮ್ಮದೇ ಆದ ನಿಲುವುಗಳನ್ನು ಹೊಂದಿರುವ ಮಾಧ್ಯಮಗಳ ಸೃಷ್ಟಿಯಿದು ಎಂದರು.

ಬಿಜೆಪಿಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಕಿದ್ದರೂ ಸಂಘ ಪರಿವಾರದ (ಆರೆಸ್ಸೆಸ್) ಅಣತಿ ಬೇಕೆಂಬ ಆರೋಪಗಳಿಗೂ ಗಡ್ಕರಿ ಸೊಪ್ಪು ಹಾಕಿಲ್ಲ. ನಾನು ಸಂಘ ಪರಿವಾರದಿಂದಲೇ ಬಂದವನು ಎಂಬುದು ಸತ್ಯ, ಹಾಗೆಂದು ನಾನು ಆರೆಸ್ಸೆಸ್ ನಿರ್ದೇಶನದಂತೆ ಬಿಜೆಪಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದೂ ಸತ್ಯ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ