ಗುಜರಾತ್ ಸರಕಾರದ ಮೇಲೆ ಬಂದಿದ್ದ ಅಪವಾದವನ್ನು ನಿರಾಕರಿಸಲು ನರೇಂದ್ರ ಮೋದಿಯವರಿಗೆ ಮತ್ತೊಂದು ಪ್ರಬಲವಾದ ಸಾಕ್ಷ್ಯ ಸಿಕ್ಕಿದೆ. ಗುಜರಾತ್ ಪೊಲೀಸರ ಎನ್‌ಕೌಂಟರ್‌ನಲ್ಲಿ ಬಲಿಯಾದ ಮುಂಬೈ ಹುಡುಗಿ ಇಶ್ರತ್ ಜಹಾನ್ ಲಷ್ಕ್ ಇ ತೋಯ್ಬಾದ ಫಿದಾಯಿನ್ ಎಂದು ಪಾಕಿಸ್ತಾನಿ ಸಂಜಾತ ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿ ಬಹಿರಂಗಪಡಿಸಿದ್ದಾನೆ.
ಇಶ್ರತ್‌ಳನ್ನು ಇತರ ಮೂವರ ಜತೆ ಗುಜರಾತ್ ಪೊಲೀಸರು 2004ರಲ್ಲಿನ ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿದ್ದರು. ಈ ನಾಲ್ವರೂ ಭಯೋತ್ಪಾದಕರು ಮತ್ತು ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿತ್ತು.
ಇತ್ತೀಚೆಗಷ್ಟೇ ಅಮೆರಿಕಾಕ್ಕೆ ತೆರಳಿ ಹೆಡ್ಲಿ ವಿಚಾರಣೆ ನಡೆಸಿದ್ದ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ಇದರ ಕುರಿತು ಮಾಹಿತಿ ಲಭಿಸಿದೆ. ಇಶ್ರತ್ ಲಷ್ಕರ್ ಇ ತೋಯ್ಬಾ ಸದಸ್ಯೆ. ಆಕೆಯನ್ನು 2007ರವರೆಗೆ ಲಷ್ಕರ್‌ನ ಭಾರತದ ಚಟುವಟಿಕೆಗಳ ಉಸ್ತುವಾರಿ ಹೊತ್ತಿದ್ದ ಮುಜಾಮಿಲ್ ನಿಯೋಜಿಸಿದ್ದ ಎಂದು ಹೆಡ್ಲಿ ತಿಳಿಸಿದ್ದಾನೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಇಶ್ರತ್ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಳು ಎಂದು ಕೇಂದ್ರ ಸರಕಾರ ಮತ್ತು ಗುಜರಾತ್ ಪೊಲೀಸರು ಹೇಳಿರುವುದಕ್ಕೆ ಹೆಡ್ಲಿ ಹೇಳಿಕೆ ಪುಷ್ಠಿ ನೀಡಿದ್ದು, ಭಾರತದಲ್ಲಿರುವ ಲಷ್ಕರ್ ಇ ತೋಯ್ಬಾ ಜಾಲದ ಕುರಿತೂ ಹೆಚ್ಚಿನ ಮಾಹಿತಿಗಳು ಲಭಿಸಿದಂತಾಗಿದೆ.
ಗುಜರಾತ್‌ನಲ್ಲಿ ಭಯೋತ್ಪಾದನೆಯನ್ನು ಪಸರಿಸುವುದು ಮತ್ತು ಮುಖ್ಯಮಂತ್ರಿ ಮೋದಿ ಸೇರಿದಂತೆ ಇತರ ಗಣ್ಯರನ್ನು ಮುಗಿಸುವ ಸಲುವಾಗಿ ಇಶ್ರತ್ ಮತ್ತು ಇತರ ಮೂವರನ್ನು ಮುಜಾಮಿಲ್ ನಿಯೋಜಿಸಿದ್ದ ಎಂದು ಪೊಲೀಸರು ಈ ಹಿಂದೆ ಹೇಳಿದ್ದರು.
ಆದರೂ ಪೊಲೀಸರ ಹೇಳಿಕೆಯ ಕುರಿತು ರಾಜಕೀಯ ವಲಯದಲ್ಲಿ ಭಾರೀ ಅಪಸ್ವರ ಎದ್ದಿತ್ತು. ಈ ಎನ್‌ಕೌಂಟರ್ ನಕಲಿ ಎಂಬ ಆಪಾದನೆಯೂ ಬಂದಿತ್ತು. ಆದರೂ ಅಹಮದಾಬಾದ್‌ನ ಮೆಟ್ರೋಪಾಲಿಟನ್ ನ್ಯಾಯಾಲಯವು ಇದು ನಕಲಿ ಎನ್‌ಕೌಂಟರ್ ಎಂದು ತೀರ್ಪು ನೀಡಿತ್ತು.
ಎನ್‌ಕೌಂಟರ್‌ನಲ್ಲಿ ಇಶ್ರತ್ ಸಾವನ್ನಪ್ಪಿದ ಬೆನ್ನಿಗೆ ಲಷ್ಕರ್ ಇ ತೋಯ್ಬಾ ಪತ್ರಿಕಾ ಹೇಳಿಕೆಯನ್ನೂ ನೀಡಿತ್ತು. ಆಕೆ ನಮ್ಮ ಫಿದಾಯಿನ್ ಎಂದು ಲಾಹೋರ್ ಮೂಲದ 'ಗಾಜ್ವಾ ಟೈಮ್ಸ್'ನಲ್ಲಿ ಲಷ್ಕರ್ ತಿಳಿಸಿತ್ತು.
ಸುಗಂಧ ದ್ರವ್ಯ, ಪ್ರಸಾದನ ವಸ್ತುಗಳನ್ನು ಮಾರಾಟ ಮಾಡುವ ಸೋಗಿನಲ್ಲಿ ಇಶ್ರತ್ ಜಹಾನ್ ಗುಜರಾತಿಗೆ ತೆರಳಿದ್ದಳು. ಆಕೆಯ ಜತೆಗಿದ್ದ ಜಾವೇದ್ ಗುಲಾಂ ಶೇಖ್, ಜಿಶಾನ್ ಜೋಹರ್, ಅಮ್ಜದ್ ಆಲಿ ಅಕ್ಬರಾಲಿ ರಾಣಾ ಕೂಡ ಪೊಲೀಸರಿಗೆ ಬಲಿಯಾಗಿದ್ದರು. ಆದರೆ ಅವರ ಕುಟುಂಬಿಕರು ಮಾತ್ರ, ಇವರು ಭಯೋತ್ಪಾದಕರಲ್ಲ ಎಂದು ನ್ಯಾಯಾಲಯಗಳಲ್ಲಿ ಹೇಳುತ್ತಾ ಬಂದಿದ್ದಾರೆ.