ಪೆಟ್ರೋಲಿಯಂ ಉತ್ಪನ್ನಗಳ ದರಯೇರಿಕೆಯಿಂದ ಜನಸಾಮಾನ್ಯರ ಮೇಲೆ ಅಲ್ಪಪ್ರಮಾಣದ ಹೊರೆ ಮಾತ್ರ ಬೀಳುವುದರಿಂದ ಪ್ರತಿಪಕ್ಷಗಳು ಕರೆ ನೀಡಿರುವ ಭಾರತ ಬಂದ್ ಅಸಮರ್ಥನೀಯ ಎಂದು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಹೇಳಿದೆ.
ಇದು ಜನರನ್ನು ದಾರಿತಪ್ಪಿಸುವ ತಂತ್ರವಲ್ಲದೆ ಬೇರೇನಲ್ಲ. ಪೆಟ್ರೋಲಿಯಂ ಉತ್ಪನ್ನಗಳ ದರ ನಿಗದಿಯನ್ನು ಮುಕ್ತವಾಗಿಡುವ ನಿರ್ಧಾರಕ್ಕೆ ಬಂದಿದ್ದೇ ಇದೀಗ ಪ್ರತಿಭಟನೆ ನಡೆಸುತ್ತಿರುವ ವಿರೋಧ ಪಕ್ಷಗಳು. ತೈಲ ಬೆಲೆಗಳ ಸಹಾಯಧನವನ್ನು 1997ರಲ್ಲಿ ಕಡಿತಗೊಳಿಸಲಾಗಿತ್ತು. ಇದು ಜಾರಿಗೆ ಬಂದದ್ದು 2002ರ ಏಪ್ರಿಲ್‌ನಲ್ಲಿ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದಿಯೋರಾ ತಿಳಿಸಿದ್ದಾರೆ.
ದಿಯೋರಾ ಪ್ರಕಾರ ಇದೀಗ ಸರಕಾರ ಹೆಚ್ಚಳ ಮಾಡಿರುವ ದರದಿಂದ ಕುಟುಂಬಗಳ ಮೇಲೆ ದೊಡ್ಡ ಹೊರೆಯೇನೂ ಬೀಳುವುದಿಲ್ಲ. ಸೀಮೆಎಣ್ಣೆ ದರವನ್ನು ನಾವು ಕೇವಲ ಮೂರು ರೂಪಾಯಿ ಮಾತ್ರ ಹೆಚ್ಚಳ ಮಾಡಿದ್ದೇವೆ. ಅಂದರೆ ಕುಟುಂಬವು ದಿನವೊಂದಕ್ಕೆ ಕೇವಲ 50 ಪೈಸೆ ಮಾತ್ರ ಹೆಚ್ಚು ವ್ಯಯ ಮಾಡಬೇಕಾಗುತ್ತದೆ. ಅದೇ ರೀತಿ ಅಡುಗೆ ಅನಿಲದಲ್ಲಿ 35 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇಲ್ಲಿ ದಿನಕ್ಕೆ ಒಂದು ರೂಪಾಯಿ ಹೊರೆಯಾಗುತ್ತದೆ. ಆದರೆ ಈ ವಿಚಾರದಲ್ಲಿ ವಿರೋಧ ಪಕ್ಷಗಳು ಜನರ ದಾರಿ ತಪ್ಪಿಸುತ್ತಿವೆ ಎಂದಿದ್ದಾರೆ ಸಚಿವರು.
ಈ ಕುರಿತು ರಾಷ್ಟ್ರದಾದ್ಯಂತದ ಪತ್ರಿಕೆಗಳಿಗೆ ಇಂದು ಪೆಟ್ರೋಲಿಯಂ ಸಚಿವಾಲಯವು ಜಾಹೀರಾತುಗಳನ್ನೂ ಬಿಡುಗಡೆ ಮಾಡಿದೆ. ಸೀಮೆಎಣ್ಣೆ ಮತ್ತು ಅಡುಗೆ ಅನಿಲಗಳ ದರ ಹೆಚ್ಚಳದಿಂದ ಜನತೆಯ ಮೇಲಾಗುವ ನೈಜ ಹೊರೆಯ ಕುರಿತು ವಿವರಣೆ ನೀಡಲಾಗಿದೆ.
ಎನ್‌ಡಿಎ ಮತ್ತು ಇತರ ಪಕ್ಷಗಳು ಕರೆ ನೀಡಿರುವ ಬಂದ್ ಕೇವಲ ಅಸಮರ್ಥನೀಯ ಮಾತ್ರವಲ್ಲ, ಜನವಿರೋಧಿ. ಇದರಿಂದಾಗಿ ಸಾಮಾನ್ಯ ವ್ಯಕ್ತಿ ಮತ್ತು ಬಡ ಜನತೆ, ದಿನವಹೀ ಕೆಲಸಗಾರರ ಕೂಲಿಗೆ ಹೊಡೆತ ಬೀಳುತ್ತದೆ. ಸಾರ್ವಜನಿಕರಿಗೂ ಅಪಾರ ಸಮಸ್ಯೆಗಳಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅದೇ ಹೊತ್ತಿಗೆ ಎನ್‌ಡಿಎ ಸರಕಾರವು ತೈಲ ಬೆಲೆಯೇರಿಕೆ ಮಾಡಿದ್ದ ವಿವರಣೆಯನ್ನೂ ಅವರು ನೀಡಿದ್ದಾರೆ. ಪ್ರತಿ ಲೀಟರ್ ಸೀಮೆಎಣ್ಣೆ ಬೆಲೆಯನ್ನು 2.52 ರೂಪಾಯಿಗಳಿಂದ 9 ರೂಪಾಯಿಗಳಿಗೆ ಏರಿಸಿತ್ತು. ಇದು ಶೇ.258ರಷ್ಟು ಹೆಚ್ಚಳವಾಗಿತ್ತು. ಆಗ ಕಚ್ಚಾ ತೈಲ ಬೆಲೆಯೂ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿರಲಿಲ್ಲ ಎಂದಿದ್ದಾರೆ.