ಸಮಾಜವಾದಿ ಪಕ್ಷದ ಉಚ್ಛಾಟಿತ ನಾಯಕ ಹಾಗೂ ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿರುವ 'ರಾಷ್ಟ್ರೀಯ ಲೋಕ ಮಂಚ್' ಅಧ್ಯಕ್ಷ ಅಮರ್ ಸಿಂಗ್, ತನಗೆ ಮುಲಾಯಂ ಸಿಂಗ್ ಯಾದವ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರಿಂದ ಜೀವ ಬೆದರಿಕೆಯಿದೆ ಎಂದು ಆರೋಪಿಸಿದ್ದಾರೆ.
ಮಾಯಾವತಿ ಮತ್ತು ಮುಲಾಯಂ ಇಬ್ಬರಿಂದಲೂ ನನಗೆ ಜೀವ ಬೆದರಿಕೆಯಿದೆ ಎಂದು ತನ್ನ ಪಕ್ಷದ ನೂತನ ಕಚೇರಿಯನ್ನು ಉದ್ಘಾಟಿಸಿದ ನಂತರ ಸಿಂಗ್ ತಿಳಿಸಿದ್ದಾರೆ.
ಅದೇ ಹೊತ್ತಿಗೆ ಸಮಾಜವಾದಿ ಪಕ್ಷದ ವರಿಷ್ಠ ಕೇಂದ್ರಕ್ಕೆ ಪತ್ರ ಬರೆದು, ತನ್ನ ಭದ್ರತೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಿಕೊಂಡಿರುವ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅಮರ್, ಯಾದವ್ ಗೃಹ ಸಚಿವರೂ ಅಲ್ಲ, ಪ್ರಧಾನ ಮಂತ್ರಿಯೂ ಅಲ್ಲ. ಹಾಗಾಗಿ ಇದು ನನಗೆ ಸಂತಸದ ವಿಚಾರ ಎಂದರು.
ಸ್ವತಃ ಮುಲಾಯಂಗೇ ಮಾಯಾವತಿಯಿಂದ ಬೆದರಿಕೆಯಿದೆ, ನನಗೆ ಅವರಿಬ್ಬರಿಂದಲೂ ಬೆದರಿಕೆಯಿದೆ ಎಂದು ಅಮರ್ ಮತ್ತೊಂದು ಸುತ್ತಿನ ದಾಳಿ ನಡೆಸಿದರು.
ತಾನು ಪ್ರತ್ಯೇಕ ಪೂರ್ವಾಂಚಲ ರಾಜ್ಯಕ್ಕಾಗಿ ಹೋರಾಟ ನಡೆಸಲಿರುವುದಾಗಿ ಇದೇ ಸಂದರ್ಭದಲ್ಲಿ ಅಮರ್ ತಿಳಿಸಿದ್ದಾರೆ. ಅದಕ್ಕಾಗಿ ಅಲಹಾಬಾದ್‌ನಿಂದ ಗೋರಖ್‌ಪುರದವರೆಗೆ 400 ಕಿಲೋ ಮೀಟರ್ ಪಾದಯಾತ್ರೆ ಮಾಡಲಿದ್ದೇನೆ ಎಂದರು.
ಪೂರ್ವ ಉತ್ತರ ಪ್ರದೇಶವನ್ನು ಪೂರ್ವಾಂಚಲ ರಾಜ್ಯವೆಂದು ಘೋಷಿಸಬೇಕು. ಅದಕ್ಕಾಗಿ ಮುಖ್ಯಮಂತ್ರಿ ಮಾಯಾವತಿಯವರು ಪ್ರತ್ಯೇಕ ರಾಜ್ಯದ ಪ್ರಸ್ತಾವನೆಯನ್ನು ಸಿದ್ಧಪಡಿಸಿ, ಸದನದ ಅಂಗೀಕಾರ ಪಡೆದು ಅದನ್ನು ಕೇಂದ್ರಕ್ಕೆ ಕಳುಹಿಸಬೇಕು. ಮಾಯಾವತಿ ಕೇವಲ ಒಂದು ಪತ್ರವನ್ನಷ್ಟೇ ಬರೆದರೆ ಸಾಲದು ಎಂದು ಅವರು ಸಲಹೆ ನೀಡಿದರು.