ಪ್ರೀತಿ, ಪ್ರೇಮವೆಂದು ಮದುವೆಯ ಭರವಸೆ ನೀಡಿ ಹುಡುಗಿಯ ಮಧುರ ಭಾವನೆಗಳಿಗೆ ನೀರೆರೆದು, ಪೋಷಿಸಿ, ಎಲ್ಲೆಂದರಲ್ಲಿ ತಿರುಗಾಡಿ, ಹತ್ತಾರು ವರ್ಷಗಳ ಕಾಲ ಬಳಸಿಕೊಂಡು, ಹಲವು ಬಾರಿ ಗರ್ಭಪಾತವನ್ನೂ ಮಾಡಿಸಿ ಕೊನೆಗೆ ಸಂಬಂಧವೇ ಇಲ್ಲದಂತೆ ಹೊರಟು ಹೋದ ಹೃದಯಹೀನ ಪ್ರೇಮವಂಚಕನ ಕಥೆಯಿದು.
ಆತ ಮೋಸ ಮಾಡುತ್ತಿದ್ದಾನೆ ಎಂಬುದನ್ನು ತಿಳಿಯಲು ಹುಡುಗಿಗೆ ಬರೋಬ್ಬರಿ ಹತ್ತು ವರ್ಷಗಳೇ ತಗುಲಿವೆ. ಕೊನೆಗೂ ಜೀವನದ ವಾಸ್ತವ ಸ್ಥಿತಿಗೆ ಬಂದವಳು ಪೊಲೀಸರಿಗೆ 'ಅತ್ಯಾಚಾರ'ದ ದೂರು ನೀಡಿ ನ್ಯಾಯದ ನಿರೀಕ್ಷೆಯಲ್ಲಿ ಕಾಯುತ್ತಿದ್ದಾಳೆ.
ಇದು ನಡೆದಿರುವುದು ಪುಣೆಯಲ್ಲಿ. ಮೋಸ ಹೋಗಿರುವುದು ದಲಿತ ಹುಡುಗಿ, ಮೋಸ ಮಾಡಿರುವುದು ಮೇಲ್ಜಾತಿಯ ಹುಡುಗ. ಇಲ್ಲಿನ ವಾಡ್ಗಾಂವ್ ಶೇರಿ ಎಂಬಲ್ಲಿನ ರಾಹುಲ್ ಸೂದನ್ ಶೆಲ್ಕೆ ಎಂಬಾತನೇ ಆರೋಪಿ. ಆತನ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಪ್ರಕರಣಗಳನ್ನು ಯೆರವಾಡಾ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಅಷ್ಟರಲ್ಲೇ ಊರು ಬಿಟ್ಟು ಪರಾರಿಯಾಗಿದ್ದಾನೆ ಭೂಪ.
ಕಳೆದ ಹತ್ತು ವರ್ಷಗಳಿಂದ ರಾಹುಲ್ ಮತ್ತು ಈ ದಲಿತ ಯುವತಿ ದೈಹಿಕ ಸಂಪರ್ಕ ಹೊಂದಿದ್ದರು. ಮದುವೆಯಾಗುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಯುವತಿ ಇದಕ್ಕೆ ಒಪ್ಪಿಗೆ ನೀಡಿದ್ದಳು. ಆಕೆಯೇ ಹೇಳುವ ಪ್ರಕಾರ ಇವರಿಬ್ಬರು ತಮ್ಮ-ತಮ್ಮ ಮನೆಗಳಲ್ಲಿ ಎಗ್ಗಿಲ್ಲದೆ ಒಂದಾಗುತ್ತಿದ್ದರು. ಅಲ್ಲದೆ ದೂರದ ಊರುಗಳಿಗೂ ಪ್ರವಾಸ ಮಾಡುತ್ತಿದ್ದರು ಎಂದು ಯುವತಿಯ ಹೇಳಿಕೆಯನ್ನು ಆಧರಿಸಿ ಖಾಡ್ಕಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕಾಳಿದಾಸ್ ಸೂರ್ಯವಂಶಿ ವಿವರಣೆ ನೀಡಿದ್ದಾರೆ.
ಮದುವೆಯ ಪ್ರಸ್ತಾಪ ಮಾಡಿದಾಗಲೆಲ್ಲ ಒಂದಲ್ಲ ಒಂದು ಕಾರಣ ನೀಡಿ ರಾಹುಲ್ ತಪ್ಪಿಸಿಕೊಳ್ಳುತ್ತಿದ್ದ. ನನ್ನ ಹಿರಿಯ ಸಹೋದರ ಮದುವೆಯಾದ ಕೂಡಲೇ ನಾನು ಮದುವೆಯಾಗುತ್ತೇನೆ, ಆರ್ಥಿಕ ಸಮಸ್ಯೆಯಿದೆ ಎಂದೆಲ್ಲಾ ಸಬೂಬು ಹೇಳುತ್ತಿದ್ದ. ಈ ನಡುವೆ ಮೂರು ಬಾರಿ ಗರ್ಭಪಾತವನ್ನೂ ಮಾಡಿಸಿದ್ದಾನೆ ಎಂದೂ ದಲಿತ ಯುವತಿ ಆರೋಪಿಸಿದ್ದಾಳೆ.
ಕೊನೆಗೂ ರಾಹುಲ್ ಸಂಬಂಧವನ್ನು ಮುರಿದುಕೊಳ್ಳುವ ನಿರ್ಧಾರವನ್ನು ಆಕೆಯಲ್ಲಿ ತಿಳಿಸಿದ್ದ. ಮದುವೆಯಾಗುವುದಿಲ್ಲ ಎಂದು ಸ್ಪಷ್ಟವಾಗಿಯೇ ಹೇಳಿದ್ದ. ಬಳಿಕವಷ್ಟೇ ಪೊಲೀಸರಿಗೆ ದೂರು ನೀಡುವ ನಿರ್ಧಾರಕ್ಕೆ ಆಕೆ ಬಂದಿದ್ದಾಳೆ.
ರಾಹುಲ್ ಇದೀಗ ಕಾಣೆಯಾಗಿದ್ದಾನೆ. ಆತನ ತಾಯಿಗೂ ಸಂಬಂಧದ ಬಗ್ಗೆ ಗೊತ್ತಿತ್ತು. ಆದರೆ ಇತರರಿಗೆ ಈ ಕುರಿತು ಹೆಚ್ಚಿನ ಯಾವುದೇ ಮಾಹಿತಿಯಿಲ್ಲ. ಈಗ ನಾವು ಹುಡುಗಿ ನೀಡಿದ ದೂರಿನಂತೆ ತನಿಖೆ ನಡೆಸುತ್ತಿದ್ದೇವೆ. ಯುವತಿಗೆ ಗರ್ಭಪಾತ ಮಾಡಿದ ಆಸ್ಪತ್ರೆಗಳಿಗೆ ಭೇಟಿ ನೀಡಿ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ. ವೈದ್ಯರ ಜತೆಗೂ ಮಾತನಾಡುತ್ತಿದ್ದೇವೆ. ಶೀಘ್ರದಲ್ಲೇ ರಾಹುಲ್‌ನನ್ನೂ ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಷ್ಟಕ್ಕೂ ಆರೋಪಿ ರಾಹುಲ್ ಎದುರು ಬರುವವರೆಗೆ ನಮಗೆ ಏನೊಂದೂ ಹೇಳಲಾಗದು. ಇಲ್ಲಿ ಹಲವು ಸಂಶಯಗಳು ಕಾಣಿಸಿಕೊಳ್ಳುತ್ತಿವೆ. ಹುಡುಗಿ ನೀಡಿರುವ ಎಲ್ಲಾ ಹೇಳಿಕೆಗಳು ಸ್ಪಷ್ಟತೆಯನ್ನು ಒದಗಿಸುತ್ತಿಲ್ಲ. ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಕೊನೆಗೊಂದು ವಾಕ್ಯವನ್ನು ಸೇರಿಸಿದ್ದಾರೆ.