ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪವಾರ್ ಹೊರೆ ಇಳಿಸಲು ಪ್ರಧಾನಿ ಸಂಪುಟ ಪುನರ್ರಚನೆ? (Manmohan Singh | Cabinet reshuffle | Sharad Pawar | ICC)
Bookmark and Share Feedback Print
 
ಐಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಎನ್‌ಸಿಪಿ ಮುಖ್ಯಸ್ಥ ಹಾಗೂ ಕೃಷಿ ಸಚಿವ ಶರದ್ ಪವಾರ್ ಬೇಡಿಕೆಯಂತೆ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಯೋಚನೆ ಮಾಡುತ್ತಿದ್ದಾರೆ. ಮಳೆಗಾಲದ ಅಧಿವೇಶನಕ್ಕೂ ಮೊದಲು ಸಂಪುಟ ಪುನರ್ರಚನೆ ಸಾಧ್ಯತೆಗಳಿವೆ ಎಂದು ವರದಿಗಳು ಹೇಳಿವೆ.

ವಾರದ ಹಿಂದಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಪವಾರ್, ತನಗೆ ಐಸಿಸಿ ಮತ್ತು ಪಕ್ಷದ ಕಡೆ ಹೆಚ್ಚಿನ ಗಮನ ಕೊಡಲು ಸಮಯ ಬೇಕಾಗಿರುವುದರಿಂದ ಪ್ರಸಕ್ತ ಹೊಂದಿರುವ ಸಚಿವಾಲಯದಲ್ಲಿ ನನ್ನ ಮೇಲಿನ ಹೊರೆ ಕಡಿಮೆ ಮಾಡಿ ಎಂದು ಪ್ರಧಾನಿಯವರಲ್ಲಿ ಮನವಿ ಮಾಡಿಕೊಂಡಿದ್ದರು.

ಪ್ರಸಕ್ತ ಅವರು ಕೃಷಿ ಸಚಿವಾಲಯದ ಜತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗಳ ಉಸ್ತುವಾರಿಯನ್ನೂ ತೆಗೆದುಕೊಂಡಿದ್ದಾರೆ.

ಜುಲೈ 26ರಿಂದ ಮಳೆಗಾಲದ ಸಂಸತ್ ಅಧಿವೇಶನ ಆರಂಭವಾಗಲಿದೆ. ಅದಕ್ಕೂ ಮೊದಲು ಅಂದರೆ ಜುಲೈ 10ರಿಂದ 15ರ ನಡುವೆ ಪ್ರಧಾನಿ ಸಿಂಗ್ ಸಂಪುಟ ಪುನರ್ರಚನೆಗೆ ಕೈ ಹಾಕಲಿದ್ದಾರೆ. ನಿರ್ಧಾರ ತೆಗೆದುಕೊಳ್ಳುವ ಮೊದಲು ಪವಾರ್ ಅವರನ್ನು ಪ್ರಧಾನಿ ಮತ್ತೊಮ್ಮೆ ಭೇಟಿಯಾಗಲಿದ್ದಾರೆ. ಜತೆಗೆ ಕೃಷಿ ಸಚಿವ ಸ್ಥಾನವನ್ನು ಉಳಿಸಿಕೊಳ್ಳಲು ಪವಾರ್ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದೂ ಮೂಲಗಳು ಹೇಳಿವೆ.

ಯುಪಿಎ ಸರಕಾರದ ಎರಡನೇ ಅವಧಿಯಲ್ಲಿ ಪವಾರ್ ಮತ್ತು ದೂರಸಂಪರ್ಕ ಖಾತೆ ಸಚಿವ ಎ. ರಾಜಾ ಇಬ್ಬರು ವಿಫಲ ಸಚಿವರು ಎಂದು ಗುರುತಿಸಲಾಗಿದೆ. ಆಹಾರ ಪದಾರ್ಥಗಳ ಹಣದುಬ್ಬರ ನಿಯಂತ್ರಿಸಲು ಈಗಾಗಲೇ ಸಂಪೂರ್ಣ ವೈಫಲ್ಯ ಕಂಡಿರುವ ಪವಾರ್ ಈಗ ಕ್ರಿಕೆಟ್ ಉನ್ನತ ಹುದ್ದೆಯನ್ನೂ ಅಲಂಕರಿಸಿರುವುದರಿಂದ ಮತ್ತಷ್ಟು ಕೆಟ್ಟ ಹೆಸರು ಸರಕಾರಕ್ಕೆ ಬರಬಹುದು ಎಂಬುದನ್ನು ಯುಪಿಎ ಗಂಭೀರವಾಗಿ ಪರಿಗಣಿಸಿತ್ತು. ಅದೇ ಹೊತ್ತಿನಲ್ಲಿ ಪವಾರ್ ಸ್ವತಃ ಮುಂದೆ ಬಂದು ಹೊರೆ ಇಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಅತ್ತ ಸಚಿವ ರಾಜಾ ಮೇಲೆ ಕೂಡ ಸಾಕಷ್ಟು ಆರೋಪಗಳು ಬರುತ್ತಿವೆ. ಇದೇ ಹಿನ್ನೆಲೆಯಲ್ಲಿ ಡಿಎಂಕೆ ಮುಖ್ಯಸ್ಥ ಕರುಣಾನಿಧಿಯವರನ್ನು ವಿತ್ತ ಸಚಿವ ಪ್ರಣಬ್ ಮುಖರ್ಜಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮೂಲಗಳ ಪ್ರಕಾರ ರಾಜಾರನ್ನು ಟೆಲಿಕಾಂ ಸಚಿವಾಲಯದಿಂದ ಹಿಂದಕ್ಕೆ ಪಡೆದು, ಬೇರೆ ಖಾತೆ ನೀಡುವ ಯೋಚನೆಯೂ ಇದೆ.

ಅದೇ ಹೊತ್ತಿಗೆ ಬಿಹಾರ ಮತ್ತು ಉತ್ತರ ಪ್ರದೇಶಗಳಿಗೆ ಮಹತ್ವ ನೀಡುವ ನಿಟ್ಟಿನಲ್ಲಿ ಅಜಿತ್ ಸಿಂಗ್ ಮತ್ತು ರಾಮ್ ವಿಲಾಸ್ ಪಾಸ್ವಾನ್ ಅವರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಗಳಿವೆ. ಕೆಲವು ತಿಂಗಳುಗಳ ಹಿಂದೆ ವಿವಾದದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದ ಶಶಿ ತರೂರ್ ಸ್ಥಾನವೂ ಖಾಲಿ ಬಿದ್ದಿದೆ. ಮತ್ತೊಬ್ಬ ಸಚಿವ ಎಂ.ಕೆ. ಅಳಗಿರಿ ಕುರಿತೂ ಸಾಕಷ್ಟು ಟೀಕೆಗಳು ಬಂದಿವೆ.

ಹೀಗೆ ಹತ್ತು ಹಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿಯವರು ಸಂಪುಟ ಪುನರ್ರಚನೆ ಮಾಡಲು ಮುಂದಾಗಿದ್ದಾರೆ. ಅದಕ್ಕೂ ಮೊದಲು ಎರಡೆರಡು ಸುತ್ತಿನ ಮಾತುಕತೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ