ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಮದ್ ಭಟ್ಕಳ್ ಉಗ್ರನಲ್ಲ, ಯಾಸಿನ್ ಸಹೋದರನಲ್ಲ (Pune blast case | Abdul Samad Bhatkal | Indian Mujahideen | Karnataka)
Bookmark and Share Feedback Print
 
ಅಬ್ದುಲ್ ಸಮದ್ ಭಟ್ಕಳ್‌ನನ್ನು ಪುಣೆ ಬಾಂಬ್ ಸ್ಫೋಟ ಪ್ರಕರಣದ ಸಂಬಂಧ ಬಂಧಿಸಲಾಗಿರಲಿಲ್ಲ ಮತ್ತು ಆತ ಇಂಡಿಯನ್ ಮುಜಾಹಿದೀನ್ ಸದಸ್ಯ ಯಾಸಿನ್ ಭಟ್ಕಳ್ ಸಹೋದರನಲ್ಲ ಎಂದು ಆತನ ವಕೀಲರು ಸ್ಪಷ್ಟಪಡಿಸಿದ್ದಾರೆ.

ಜಾಮೀನು ಹಿನ್ನೆಲೆಯಲ್ಲಿ ಬಿಡುಗಡೆಯಾದ ನಂತರ ಮಂಗಳವಾರ ಸಮದ್ ಜತೆ ಮುಂಬೈಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆತನ ವಕೀಲ ಮುಬಿನ್ ಸೋಲ್ಕರ್, ತನ್ನ ಕಕ್ಷಿಗಾರ ಭಯೋತ್ಪಾದಕರ ಜತೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಿವಾಸಿಯಾಗಿರುವ ಅಬ್ದುಲ್ ಸಮದ್ ಮುಗ್ಧ. ಆತನನ್ನು ಇದೇ ವರ್ಷದ ಫೆಬ್ರವರಿಯಲ್ಲಿ ನಡೆದ ಪುಣೆ ಬಾಂಬ್ ಸ್ಫೋಟಕ್ಕೆ ಸಂಬಂಧಪಟ್ಟಂತೆ ಮುಂಬೈ ಉಗ್ರ ನಿಗ್ರಹ ದಳ (ಎಟಿಎಸ್) ಪೊಲೀಸರು ಬಂಧಿಸಿರಲಿಲ್ಲ. ಅಲ್ಲದೆ ಮಾಧ್ಯಮಗಳು ಹೇಳಿರುವಂತೆ ಇತ್ತೀಚೆಗಷ್ಟೇ ನಿಷೇಧಕ್ಕೊಳಗಾಗಿದ್ದ ಭಯೋತ್ಪಾದಕ ಸಂಘಟನೆ 'ಇಂಡಿಯನ್ ಮುಜಾಹಿದೀನ್'‌ನ ಸದಸ್ಯ ಯಾಸಿನ್ ಭಟ್ಕಳ್ ಸಹೋದರನೂ ಸಮದ್ ಅಲ್ಲ ಎಂದು ವಿವರಣೆ ನೀಡಿದ್ದಾರೆ.
Samad
PR

ಸಮದ್ ಹೆಸರಲ್ಲಿ ಭಟ್ಕಳ ಇಲ್ಲ...
ಅಬ್ದುಲ್ ಸಮದ್ ಹೆಸರನ್ನು ತಪ್ಪಾಗಿ ಬಿಂಬಿಸಲಾಗಿದೆ. ಈತನ ಹೆಸರಿನ ಜತೆ ಭಟ್ಕಳ್ ಎಂದು ಯಾವುದೇ ದಾಖಲೆಗಳಲ್ಲಿಲ್ಲ. ಆದರೂ ಮಾಧ್ಯಮಗಳು ಅಬ್ದುಲ್ ಸಮದ್ ಭಟ್ಕಳ್ ಎಂದೇ ಹೇಳುತ್ತಾ ಬಂದಿವೆ. ಭಟ್ಕಳ ತನ್ನೂರು ಎಂಬುದನ್ನು ಬಿಟ್ಟರೆ ಇತರ ಯಾವುದೇ ವಿಚಾರಗಳಿಗೂ ಈತನಿಗೂ ಯಾವುದೇ ಸಂಬಂಧವಿಲ್ಲ. ಈತನ ನಿಜವಾದ ಹೆಸರು ಅಬ್ದುಲ್ ಸಮದ್ ಮೊಹಮ್ಮದ್ ಜರಾರ್ ಸಿದಿಬಾಪಾ ಎಂದು ಸೋಲ್ಕರ್ ಸ್ಪಷ್ಟಪಡಿಸಿದ್ದಾರೆ.

ಅದೇ ಹೊತ್ತಿಗೆ ಪುಣೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮದ್‌ನನ್ನು ಎಟಿಎಸ್ ಬಂಧಿಸಿರಲಿಲ್ಲ ಹಾಗೂ ಆ ಕುರಿತು ಯಾವುದೇ ವಿಚಾರಣೆಯನ್ನು ನಡೆಸಿಲ್ಲ ಎಂದೂ ಅವರು ತಿಳಿಸಿದ್ದಾರೆ.

2009ರ ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮದ್‌ನನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲ ತಿಂಗಳುಗಳ ಹಿಂದಷ್ಟೇ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು. ಸಮದ್ ವಿರುದ್ದ ಯಾವುದೇ ಸಾಕ್ಷ್ಯಗಳು ಸಿಗದೇ ಇದ್ದ ಹಿನ್ನೆಲೆಯಲ್ಲಿ ಇಲ್ಲಿನ ನ್ಯಾಯಾಲಯ ಕಳೆದ ತಿಂಗಳು ಜಾಮೀನು ನೀಡಿದ ನಂತರ ಜುಲೈ ನಾಲ್ಕರಂದು ಆರ್ಥರ್ ರೋಡ್ ಜೈಲಿನಿಂದ ಆತ ಬಿಡುಗಡೆಯಾಗಿದ್ದ.

ಬಂಧನಕ್ಕೊಳಗಾದ ಕೂಡಲೇ ಇದು ಪುಣೆ ಸ್ಫೋಟ ಪ್ರಕರಣದಲ್ಲಿ ಮಹತ್ವದ ಮುನ್ನಡೆ ಎಂದು ಪೊಲೀಸರು ಮತ್ತು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಹೇಳಿಕೆ ನೀಡಿದ್ದರು. ಆದರೆ ಕೆಲ ದಿನಗಳ ನಂತರ ಹೇಳಿಕೆಯಿಂದ ಹಿಂದಕ್ಕೆ ಸರಿದಿದ್ದ ಕೇಂದ್ರ, ಸರಿಯಾಗಿ ತನಿಖೆ ನಡೆಸಿ ಎಂದು ಪೊಲೀಸರಿಗೆ ಸೂಚನೆ ನೀಡಿತ್ತು.

23ರ ಹರೆಯದ ಸಮದ್ ಬಂಧನ ಒಂದು ವ್ಯವಸ್ಥಿತ ಪಿತೂರಿ. ಪುಣೆ ಸ್ಫೋಟ ನಡೆದ ದಿನ ಆತ ಇಲ್ಲೇ ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ. ಅದರ ವೀಡಿಯೋಗಳನ್ನೂ ಮಾಧ್ಯಮಗಳು ಪ್ರಸಾರ ಮಾಡಿವೆ. ಆತ ಮುಗ್ಧ. ಇದುವರೆಗೂ ಮುಂಬೈ ನೋಡಿದವನಲ್ಲ ಎಂದು ಕುಟುಂಬ ಪೊಲೀಸರ ವಾದವನ್ನು ಅಲ್ಲಗಳೆದಿತ್ತು.

ಇದೀಗ ಸಮದ್ ಬಿಡುಗಡೆಯಾಗಿರುವುದರಿಂದ ಭಟ್ಕಳದಲ್ಲಿ ಸಂತಸದ ವಾತಾವರಣವಿದ್ದು, ಊರಿಗೆ ಬಂದ ಕೂಡಲೇ ಸಂಭ್ರಮವನ್ನಾಚರಿಸಲಾಗುತ್ತದೆ ಎಂದು ವರದಿಗಳು ಹೇಳಿವೆ.

ಯಾಸಿನ್ ಸಹೋದರನೆಂಬ ಶಂಕೆ...
ಇಂಡಿಯನ್ ಮುಜಾಹಿದೀನ್ ಸಂಸ್ಥಾಪಕ ಸದಸ್ಯ ಯಾಸಿನ್ ಭಟ್ಕಳ್ ನೇರವಾಗಿ ಅಬ್ದುಲ್ ಸಮದ್ ಸಹೋದರ ಎನ್ನುವುದು ಪೊಲೀಸರ ಶಂಕೆ. ಅದಕ್ಕೆ ಪುಷ್ಠಿ ನೀಡುವಂತೆ ಸಮದ್ ಸಹೋದರ ಕಾಣೆಯಾಗಿರುವುದು. ಸಮದ್ ಸಹೋದರ ಹೆಸರು ಮೊಹಮ್ಮದ್ ಅಹ್ಮದ್.

ಸಮದ್ ಕುಟುಂಬಿಕರ ಪ್ರಕಾರ ದೊಡ್ಡ ಮಗ ಅಹ್ಮದ್ ಕಾಣೆಯಾಗಿ ಹಲವು ವರ್ಷಗಳೇ ಸಂದಿವೆ. ಆತ ನಮ್ಮೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಎಲ್ಲಿದ್ದಾನೆಂದು ತಿಳಿದಿಲ್ಲ ಎಂದು ಹೇಳುತ್ತಿದೆ.

ಉಗ್ರ ಯಾಸಿನ್ ಭಟ್ಕಳ್ ಸ್ವತಃ ಸಮದ್ ಸಹೋದರ. ಆತ ಎಲ್ಲಿದ್ದಾನೆಂಬುದು ಮನೆಯವರಿಗೆ ತಿಳಿದಿದೆ ಎನ್ನುವುದು ಪೊಲೀಸರ ಅನುಮಾನ. ಅದೇ ನಿಟ್ಟಿನಲ್ಲಿ ಈಗಾಗಲೇ ಹಲವಾರು ಬಾರಿ ಮನೆಯವರನ್ನು ವಿಚಾರಣೆ ನಡೆಸಲಾಗಿದೆ. ಆದರೂ ಯಾವುದೇ ಲಾಭವಾಗಿರಲಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ