ಪಾಕಿಸ್ತಾನಿ ಸಂಜಾತ ಅಮೆರಿಕಾ ಪ್ರಜೆ, ಭಯೋತ್ಪಾದಕ ಡೇವಿಡ್ ಹೆಡ್ಲಿ ಇತ್ತೀಚೆಗಷ್ಟೇ ರಾಷ್ಟ್ರೀಯ ತನಿಖಾ ದಳಕ್ಕೆ ಬಹಿರಂಗಪಡಿಸಿರುವಂತೆ ಗುಜರಾತ್ ಪೊಲೀಸರಿಗೆ ಬಲಿಯಾದ ಮುಂಬೈ ವಿದ್ಯಾರ್ಥಿನಿ ಇಶ್ರತ್ ಜಹಾನ್ ಲಷ್ಕರ್ ಇ ತೋಯ್ಬಾ ಸದಸ್ಯೆಯೇ ಅಥವಾ ಮುಗ್ಧೆಯೇ ಎಂಬುದನ್ನು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಹೆಡ್ಲಿ ನೀಡಿರುವ ತಪ್ಪೊಪ್ಪಿಗೆ ಸರಿಯೋ, ತಪ್ಪೋ ಎಂಬುದನ್ನು ದಯವಿಟ್ಟು ಭಾರತ ಸರಕಾರ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಕೇಳುತ್ತಿದೆ ಎಂದು ಪಕ್ಷದ ವಕ್ತಾರ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಹೆಡ್ಲಿ ವಿಚಾರಣೆಗಾಗಿ ಅಮೆರಿಕಾಕ್ಕೆ ತೆರಳಿದ್ದ ಭಾರತೀಯ ತನಿಖಾ ದಳಕ್ಕೆ ಈ ಮಾಹಿತಿ ಲಭ್ಯವಾಗಿತ್ತು ಎಂದು ವರದಿಗಳು ಹೇಳಿದ್ದವು. ಲಷ್ಕರ್ ಆತ್ಮಾಹುತಿ ದಳದ ಸದಸ್ಯೆ ಎಂದು ಹೇಳಲಾಗಿದ್ದ ಇಶ್ರತ್‌ಳನ್ನು ಗುಜರಾತ್ ಪೊಲೀಸರು 2004ರಲ್ಲಿ ಅಹಮದಾಬಾದ್‌ನಲ್ಲಿ ಎನ್‌ಕೌಂಟರ್ ಮಾಡಿದ್ದರು.
ಇಶ್ರತ್‌ಳನ್ನು ಇತರ ಮೂವರ ಜತೆ ಕೊಂದು ಹಾಕಿದ್ದು ನಕಲಿ ಎನ್‌ಕೌಂಟರ್ ಮೂಲಕ ಎಂದು ಮುಖ್ಯಮಂತ್ರಿ ನರೇಂದ್ರ ಮೋದಿ ಸರಕಾರದ ಮೇಲೆ ಅಪವಾದವೂ ಬಂದಿತ್ತು. ಈ ನಾಲ್ವರೂ ಭಯೋತ್ಪಾದಕರು ಮತ್ತು ಮೋದಿಯವರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಗುಜರಾತ್ ಪೊಲೀಸರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.
ಹಾಗಾಗಿ ಮೋದಿ ಮೇಲೆ ಬಂದಿದ್ದ ಆರೋಪ ಸಂಪೂರ್ಣವಾಗಿ ಸುಳ್ಳು ಎಂಬುದನ್ನು ಕೇಂದ್ರ ಸರಕಾರದ ಮೂಲಕ ಮತ್ತೊಮ್ಮೆ ಹೇಳಿಸಬೇಕು ಎನ್ನುವುದು ಬಿಜೆಪಿ ಆಶಯ. ಕೇಂದ್ರ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇಶ್ರತ್ ಲಷ್ಕರ್ ಇ ತೋಯ್ಬಾ ಸದಸ್ಯೆ. ಆಕೆಯನ್ನು 2007ರವರೆಗೆ ಲಷ್ಕರ್‌ನ ಭಾರತದ ಚಟುವಟಿಕೆಗಳ ಉಸ್ತುವಾರಿ ಹೊತ್ತಿದ್ದ ಮುಜಾಮಿಲ್ ನಿಯೋಜಿಸಿದ್ದ ಎಂದು ಹೆಡ್ಲಿ ತಿಳಿಸಿದ್ದಾನೆ ಎಂದು ಪತ್ರಿಕೆಯೊಂದು ಎರಡು ದಿನಗಳ ಹಿಂದಷ್ಟೇ ವರದಿ ಮಾಡಿತ್ತು.
ಸುಗಂಧ ದ್ರವ್ಯ, ಪ್ರಸಾದನ ವಸ್ತುಗಳನ್ನು ಮಾರಾಟ ಮಾಡುವ ಸೋಗಿನಲ್ಲಿ ಇಶ್ರತ್ ಜಹಾನ್ ಗುಜರಾತಿಗೆ ತೆರಳಿದ್ದಳು. ಆಕೆಯ ಜತೆಗಿದ್ದ ಜಾವೇದ್ ಗುಲಾಂ ಶೇಖ್, ಜಿಶಾನ್ ಜೋಹರ್, ಅಮ್ಜದ್ ಆಲಿ ಅಕ್ಬರಾಲಿ ರಾಣಾ ಕೂಡ ಪೊಲೀಸರಿಗೆ ಬಲಿಯಾಗಿದ್ದರು. ಆದರೆ ಅವರ ಕುಟುಂಬಿಕರು ಮಾತ್ರ, ಇವರು ಭಯೋತ್ಪಾದಕರಲ್ಲ ಎಂದು ನ್ಯಾಯಾಲಯಗಳಲ್ಲಿ ಹೇಳುತ್ತಾ ಬಂದಿದ್ದಾರೆ.