ಕಾಶ್ಮೀರ ಕಣಿವೆಯ ಶ್ರೀನಗರದಲ್ಲಿ ಅನಿರ್ದಿಷ್ಟಾವಧಿ ನಿಷೇಧಾಜ್ಞೆಯಿರುವ ಹೊರತಾಗಿಯೂ ಹಿಂಸಾಚಾರ ಎಗ್ಗಿಲ್ಲದೆ ಮುಂದುವರಿಯುತ್ತಿರುವುದನ್ನು ಮನಗಂಡಿರುವ ಕೇಂದ್ರ ಸರಕಾರವು ಹಿಂಸಾಪೀಡಿತ ಪ್ರದೇಶಗಳಿಗೆ ಸೇನೆಯನ್ನು ನಿಯೋಜಿಸಿದೆ.
ಪೊಲೀಸರ ಜತೆ ಕಳೆದ 24 ಗಂಟೆಗಳ ಅವಧಿಯಲ್ಲಿ ನಡೆದ ಘರ್ಷಣೆಯಲ್ಲಿ ನಾಲ್ವರು ನಾಗರಿಕರು ಸಾವನ್ನಪ್ಪಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಲಕ್ಷಣಗಳು ಗೋಚರಿಸಿದ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರಕ್ಕೆ ಬಂದಿದೆ. ಪ್ರಸಕ್ತ ಶ್ರೀನಗರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಮಿಲಿಟರಿ ಯತ್ನಿಸುತ್ತಿದೆ.
ಶ್ರೀನಗರದ ಬಾತಮಾಲೂ ಮತ್ತು ಮೈಸುಮಾ ಪ್ರದೇಶದಲ್ಲಿ ನಿನ್ನೆ ನಾಲ್ವರು ಸಾವನ್ನಪ್ಪಿದ್ದರು. ಇಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ. ಉಳಿದಂತೆ ದಕ್ಷಿಣ ಕಾಶ್ಮೀರದ ಅನಂತನಾಗ್, ಪಾಂಪೋರ್, ಪುಲ್ವಾಮಾ ಮತ್ತು ಕುಲ್ಗಾಮ್ ಹಾಗೂ ಉತ್ತರ ಕಾಶ್ಮೀರದ ಕುಪ್ವಾರಾ ಮತ್ತು ಬಂಡಿಪೊರ್ ಪ್ರದೇಶಗಳಲ್ಲಿ ನಿಷೇಧಾಜ್ಞೆಯಿದೆ.
ರಾಜ್ಯ ಪೊಲೀಸ್ ಪಡೆಯ ಕೊರತೆ ಮತ್ತು ಅವರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಸೇನೆಯನ್ನು ಶ್ರೀನಗರಕ್ಕೆ ಕಳೆದ ರಾತ್ರಿಯೇ ಕರೆಸಲಾಗಿತ್ತು. ಅಮರನಾಥ ಯಾತ್ರೆ ಸಂದರ್ಭದಲ್ಲಿ ಯಾತ್ರಾರ್ಥಿಗಳಿಗೆ ರಕ್ಷಣೆ ನೀಡಲು ನೇಮಕಗೊಂಡಿದ್ದ ಪಡೆಗಳಲ್ಲಿ ಕೆಲವನ್ನು ಇದೀಗ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಕರೆಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮಿಲಿಟರಿ ಸಹಕಾರ ಬೇಕೆಂದು ರಾಜ್ಯ ಮುಖ್ಯ ಕಾರ್ಯದರ್ಶಿ ಎಸ್.ಎಸ್. ಕಪೂರ್ ಮನವಿ ಮಾಡಿಕೊಂಡಿದ್ದರು.
ಪೊಲೀಸರ ಜತೆ ಸೋಮವಾರ ಘರ್ಷಣೆಗೆ ಇಳಿದಿದ್ದ ಗುಂಪನ್ನು ಚದುರಿಸುವ ವೇಳೆ ಮುಜಾಫರ್ ಅಹ್ಮದ್ ಎಂಬ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಒಳಚರಂಡಿಗೆ ಬಿದ್ದು ಸಾವನ್ನಪ್ಪಿದ್ದ. ಈ ಹಿನ್ನೆಲೆಯಲ್ಲಿ ಜನತೆ ಯಾವುದನ್ನೂ ಲೆಕ್ಕಿಸದೆ ಮತ್ತೆ ಬೀದಿಗಿಳಿದು ಕಲ್ಲು ತೂರಾಟ ಆರಂಭಿಸಿದ್ದರು. ಆಗ 18ರ ಹರೆಯದ ಫಯಾಜ್ ಅಹ್ಮದ್ ಎಂಬಾತ ಪೊಲೀಸರ ಗುಂಡಿಗೆ ಬಲಿಯಾಗಿದ್ದ.
ಪೊಲೀಸರ ಮೇಲೆ ನಿರಂತರ ದಾಳಿ ನಡೆಯುತ್ತಿದ್ದಾಗ ಗಾಳಿಯಲ್ಲಿ ಹಾರಿಸಿದ ಗುಂಡು ಮನೆಯೊಂದರ ಕಿಟಕಿಯ ಮೂಲಕ ಹೊರಗೆ ನೋಡುತ್ತಿದ್ದ ಫ್ಯಾನ್ಸಿ ಎಂಬ 25ರ ಮಹಿಳೆಯನ್ನು ಬಲಿ ತೆಗೆದುಕೊಂಡಿತ್ತು. ನಾಗರಿಕರು ಮತ್ತೆ ಘರ್ಷಣೆಗಿಳಿದಾಗ ನಡೆಸಿದ ಗೋಲಿಬಾರಿಗೆ ಯುವಕನೊಬ್ಬ ಜೀವ ತೆತ್ತಿದ್ದ.
ಕಾಶ್ಮೀರದಲ್ಲಿ ನಾಗರಿಕರಿಂದಲೇ ನಡೆಯುತ್ತಿರುವ ಹಿಂಸಾಚಾರಕ್ಕೆ ಪಾಕಿಸ್ತಾನಿ ಮೂಲದ ಭಯೋತ್ಪಾದಕ ಸಂಘಟನೆಗಳು ಕುಮ್ಮಕ್ಕು ನೀಡುತ್ತಿವೆ. ಅವರಿಗೆ ಭಯೋತ್ಪಾದಕರು ಹಣದ ಆಮಿಷ ಒಡ್ಡುವ ಮೂಲಕ ಕಲ್ಲು ತೂರಾಟ ನಿರಂತರ ನಡೆಯುತ್ತಿರುವಂತೆ ನೋಡಿಕೊಳ್ಳುತ್ತಾರೆ. ಆ ಮೂಲಕ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆದು ಕಾಶ್ಮೀರಕ್ಕೆ 'ಸ್ವಾತಂತ್ರ್ಯ' ಕೊಡಿಸುವ ಉದ್ದೇಶ ಪಾಕ್ ಉಗ್ರರದ್ದು ಎಂದು ಹೇಳಲಾಗುತ್ತಿದೆ.