ನಕ್ಸಲರ ಬಂದ್; ಪ್ರತೀಕಾರ ಭೀತಿ ಹಿನ್ನೆಲೆಯಲ್ಲಿ ಕಟ್ಟೆಚ್ಚರ
ನವದೆಹಲಿ, ಬುಧವಾರ, 7 ಜುಲೈ 2010( 11:43 IST )
ಚೆರುಕುರಿ ರಾಜ್‌ಕುಮಾರ್ ಹತ್ಯೆ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ನಕ್ಸಲರು ಇಂದಿನಿಂದ ಎರಡು ದಿನಗಳ ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿದ್ದು, ಪ್ರತೀಕಾರ ಭೀತಿ ಹಿನ್ನೆಲೆಯಲ್ಲಿ ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಎರಡು ದಿನಗಳ ಬಂದ್ ಅವಧಿಯಲ್ಲಿ ಸಾರ್ವಜನಿಕರು ರೈಲುಗಳಲ್ಲಿ ಪ್ರಯಾಣ ಮಾಡಬಾರದು. ಹಾಗೇನಾದರೂ ಪ್ರಯಾಣಿಸಿ ಪ್ರಾಣ ಕಳೆದುಕೊಂಡರೆ ಅದಕ್ಕೆ ನಾವು ಹೊಣೆಯಲ್ಲ ಎಂದು ನಕ್ಸಲರು ಎಚ್ಚರಿಕೆಯನ್ನೂ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಜಾರ್ಖಂಡ್‌ನಲ್ಲಿ ಸುಮಾರು ಏಳು ರೈಲುಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ಐದು ರೈಲುಗಳನ್ನು ಬದಲಿ ಮಾರ್ಗದ ಮೂಲಕ ಸಂಚರಿಸಲು ಸೂಚಿಸಲಾಗಿದೆ.
ನಕ್ಸಲ್ ಬಾಧಿತ ರಾಜ್ಯಗಳೆಂದು ಗುರುತಿಸಲಾಗುತ್ತಿರುವ ಮಹಾರಾಷ್ಟ್ರ, ಛತ್ತೀಸ್‌ಗಢ, ಒರಿಸ್ಸಾ, ಬಿಹಾರ, ಪಶ್ಚಿಮ ಬಂಗಾಲ, ಜಾರ್ಖಂಡ್ ಮತ್ತು ಆಂಧ್ರಪ್ರದೇಶಗಳಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ಕೇಂದ್ರ ಸರಕಾರಿ ಮೂಲಗಳು ತಿಳಿಸಿವೆ.
ಇಂದು ಬಂದ್ ಆರಂಭವಾಗುತ್ತಿದ್ದಂತೆ (ಜುಲೈ 7, 8) ಎರಡನೇ ಬಂದ್‌ಗೆ ಮಾವೋವಾದಿಗಳು ಸಿದ್ಧರಾಗಿದ್ದಾರೆ. ಜುಲೈ 13 ಮತ್ತು 14ರಂದು ಮತ್ತೆ ಬಂದ್ ನಡೆಸಲಾಗುತ್ತದೆ ಎಂದು ಸಿಪಿಐ ಮಾವೋವಾದಿ ಕೇಂದ್ರೀಯ ಸಮಿತಿಯ ಸದಸ್ಯ ವೇಣು ದಂಡಕಾರಣ್ಯದಿಂದ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಸಿಪಿಐಎಂ ಪಾಲಿಟ್‌ಬ್ಯೂರೋ ಸದಸ್ಯ, ವಕ್ತಾರ, ಹಾಗೂ ದಕ್ಷಿಣ ಭಾರತ ನಕ್ಸಲರ ಗೆರಿಲ್ಲಾ ಪಡೆಗಳ ಮುಖ್ಯಸ್ಥ ಚೆರುಕುರಿ ರಾಜ್‌ಕುಮಾರ್ ಆಲಿಯಾಸ್ ಆಜಾದ್‌ನನ್ನು ಆಂಧ್ರಪ್ರದೇಶ ಪೊಲೀಸರು ಜುಲೈ ಎರಡರಂದು ಎನ್‌ಕೌಂಟರ್ ನಡೆಸಿದ್ದನ್ನು ವಿರೋಧಿಸಿ ಮಾವೋವಾದಿಗಳು ಈ ಬಂದ್ ಕರೆ ನೀಡಿದ್ದಾರೆ.
ಭಾರತೀಯ ವಾಯು ಪಡೆ ಸಹಕಾರ... ನಕ್ಸಲ್ ದಮನಕ್ಕೆ ಮಿಲಿಟರಿಯನ್ನು ಬಳಸುವುದಿಲ್ಲ ಎಂದು ಹೇಳುತ್ತಾ ಬಂದಿರುವ ಕೇಂದ್ರ ಸರಕಾರ, ಮಾವೋವಾದಿಗಳ ವಿರುದ್ಧದ ಕಾರ್ಯಾಚರಣೆಯನ್ನು ಹೊರತುಪಡಿಸಿದ ಕಾರ್ಯಗಳಿಗೆ ಭಾರತೀಯ ವಾಯು ಪಡೆಯು ಸಹಕಾರ ನೀಡಲಿದೆ ಎಂದಿದೆ.
ನಕ್ಸಲ್ ಬಾಧಿತ ಪ್ರದೇಶಗಳಿಗೆ ಸೇನೆಯನ್ನು ನಿಯೋಜಿಸುವ ಅಗತ್ಯವಿಲ್ಲ. ಆದರೆ ಭಾರತೀಯ ವಾಯು ಪಡೆಯು ಅರೆ ಸೇನಾ ಪಡೆ ಮತ್ತು ಪೊಲೀಸ್ ಸಿಬ್ಬಂದಿಗಳಿಗೆ ಸಹಕಾರ ನೀಡಲಿದ್ದಾರೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ತಿಳಿಸಿದ್ದಾರೆ.