ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ: ಕೇಂದ್ರ ಘೋಷಣೆ (Belgaum | Gulbarga | Karnataka | Maharashtra)
Bookmark and Share Feedback Print
 
ಗಡಿ ವಿವಾದವನ್ನು ಜೀವಂತವಾಗಿಡುವ ಮಹಾರಾಷ್ಟ್ರ ಯತ್ನಕ್ಕೆ ಕೇಂದ್ರ ಸರಕಾರ ಪೂರ್ಣ ವಿರಾಮ ಹಾಕಿದೆ. ಬೆಳಗಾವಿ, ಗುಲ್ಬರ್ಗಾ, ಬೀದರ್, ಕಾರವಾರಗಳು ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು, ಈ ಸಂಬಂಧ ಮಹಾರಾಷ್ಟ್ರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಅಫಿದಾವಿತ್ ಸಲ್ಲಿಸಿದೆ.

ಇದರೊಂದಿಗೆ ಸದಾ ಗಡಿ ತಂಟೆ ನಡೆಸುತ್ತಿರುವ ಮಹಾರಾಷ್ಟ್ರಕ್ಕೆ ತೀವ್ರ ಮುಖಭಂಗವಾಗಿದೆ. ಬೆಳಗಾವಿ, ಗುಲ್ಬರ್ಗಾ, ಬೀದರ್, ಕಾರವಾರ ಪ್ರದೇಶಗಳಲ್ಲಿ ಮರಾಠಿಗರ ಸಂಖ್ಯೆ ಹೆಚ್ಚಿದೆ ಎಂದು ಕಾರಣ ನೀಡಿದ್ದ ಮಹಾರಾಷ್ಟ್ರದ ವಾದ ಸರಿಯಾದುದಲ್ಲ, ರಾಜ್ಯ ಮರುವಿಂಗಡನೆಯ ಅಗತ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಸ್ಪಷ್ಟಪಡಿಸಿದೆ. ಇದರೊಂದಿಗೆ ಕರ್ನಾಟಕಕ್ಕೆ ಮಹತ್ವದ ಜಯ ಲಭಿಸಿದಂತಾಗಿದೆ.

ಮಹಾರಾಷ್ಟ್ರದ ತಕರಾರು...
2004ರಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಮಹಾರಾಷ್ಟ್ರ, ಕರ್ನಾಟಕ ಗಡಿ ಪ್ರದೇಶದಲ್ಲಿನ ಬೆಳಗಾವಿ, ಕಾರವಾರ, ಬೀದರ್ ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿನ 814ಕ್ಕೂ ಹೆಚ್ಚು ಗ್ರಾಮಗಳು ತನ್ನ ವ್ಯಾಪ್ತಿಗೆ ಬರುತ್ತದೆ. ಇಲ್ಲಿನ ಬಹುತೇಕ ಜನರು ಮರಾಠಿ ಮನೆ ಭಾಷಿಗರಾಗಿದ್ದಾರೆ. ಹಾಗಾಗಿ ರಾಜ್ಯದ ಮರು ವಿಂಗಡನೆ ನಡೆಸಿ ಅವುಗಳನ್ನು ತನಗೆ ನೀಡಬೇಕು ಎಂದು ಹೇಳಿತ್ತು.

ಮಹಾರಾಷ್ಟ್ರ ಸರಕಾರದ ಪ್ರಕಾರ, ಬಾಂಬೆ ಮತ್ತು ಹೈದರಾಬಾದ್ ರಾಜ್ಯಗಳಿಗೆ ಸೇರಿದ್ದ ಮರಾಠಿ ಪ್ರಾಂತ್ಯಗಳ ಜನತೆಯ ಭಾರೀ ಪ್ರತಿಭಟನೆ ಮತ್ತು ಮುಷ್ಕರಗಳ ಹೊರತಾಗಿಯೂ ಭಾರತದ ಕೇಂದ್ರ ಸರಕಾರವು ಇವುಗಳನ್ನು ಮೈಸೂರು ರಾಜ್ಯಕ್ಕೆ ಸೇರಿಸಿತ್ತು.

2004ರ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿರುವಂತೆ ರಾಜ್ಯವು ಮತ್ತೆ 2009ರ ಫೆಬ್ರವರಿಯಲ್ಲಿ ಮತ್ತೊಂದು ಅರ್ಜಿಯನ್ನು ನೀಡಿತ್ತು. ಜವಾಹರ್ ಲಾಲ್ ನೆಹರೂ ಆಡಳಿತದ ಅವಧಿಯಲ್ಲಿ ಕೈಗೊಂಡ ಅಸಾಂವಿಧಾನಿಕ ಕ್ರಮಗಳಿಂದಾಗಿ ಮಹಾರಾಷ್ಟ್ರಕ್ಕೆ ಸೇರಬೇಕಾಗಿದ್ದ ಹಲವು ಪ್ರದೇಶಗಳು ಕರ್ನಾಟಕಕ್ಕೆ ಸೇರಿದ್ದವು ಎಂದು ಅದು ವಾದಿಸಿತ್ತು.

ವಜಾಗೊಳಿಸಿ ದಂಡ ಹಾಕಿ...
ಆಗಿನ ಮೈಸೂರು ರಾಜ್ಯಕ್ಕೆ (ಈಗಿನ ಕರ್ನಾಟಕ) ನಿರ್ದಿಷ್ಟ ಪ್ರದೇಶಗಳನ್ನು ವರ್ಗಾಯಿಸಿರುವುದು ನಿರಂಕುಶ ಪ್ರವೃತ್ತಿಯದ್ದು ಅಥವಾ ಸರಿಯಾದುದಲ್ಲ ಎಂದು ಮಹಾರಾಷ್ಟ್ರ ಹೇಳಿತ್ತು ಎಂದು ಕೇಂದ್ರ ಗೃಹ ಸಚಿವಾಲಯದ ನಿರ್ದೇಶಕ ಡಾ. ಪ್ರವೀಣ್ ಕುಮಾರಿ ಸಿಂಗ್ ಅಫಿದಾವಿತ್‌ನಲ್ಲಿ ತಿಳಿಸಿದ್ದಾರೆ.

ಮಹಾರಾಷ್ಟ್ರದ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಹಾಗಾಗಿ ಅದು ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಬೇಕು. ಅಲ್ಲದೆ ಇಂತಹ ದಾವೆಯನ್ನು ಹೂಡಿರುವುದಕ್ಕಾಗಿ ರಾಜ್ಯದ ಮೇಲೆ ದಂಡವನ್ನೂ ಹೇರಬೇಕು ಎಂದು ಕೇಂದ್ರ ಶಿಫಾರಸು ಮಾಡಿದೆ.

ಯಾವುದೇ ರಾಜ್ಯದ ಪ್ರದೇಶವನ್ನು ಸೇರ್ಪಡೆಗೊಳಿಸಲು ಭಾಷೆಯೂ ಒಂದು ಮಾನದಂಡ ಹೌದು, ಆದರೆ ಅದೇ ಒಟ್ಟಾರೆ ಮಾನದಂಡವಲ್ಲ. ಕೇವಲ ಭಾಷೆಯನ್ನೇ ಮುಂದಿಟ್ಟುಕೊಂಡು ಆ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಸಾಧ್ಯವಿಲ್ಲ. 1956ರ ರಾಜ್ಯ ಏಕೀಕರಣ ಕಾಯ್ದೆ ಮತ್ತು 1960ರ ಬಾಂಬೆ ಏಕೀಕರಣ ಕಾಯ್ದೆಗಳನ್ನು ಪರಿಗಣಿಸುವಾಗ ಸಂಸತ್ ಮತ್ತು ಕೇಂದ್ರ ಸರಕಾರವು ಅಗತ್ಯ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡಿತ್ತು ಎಂದು ಸರಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಹಾಗಾಗಿ ಮೇಲೆ ಹೇಳಿದ ಪ್ರದೇಶಗಳ ಮೇಲಿನ ವ್ಯಾಪ್ತಿಯು ಕರ್ನಾಟಕದಲ್ಲೇ ಅಬಾಧಿತವಾಗಿ ಮುಂದುವರಿಯಬೇಕು. ಇಲ್ಲಿ ಮಹಾರಾಷ್ಟ್ರಕ್ಕೆ ಯಾವುದೇ ರೀತಿಯ ಅಧಿಕಾರವಿಲ್ಲ. ರಾಜ್ಯ ಮರುವಿಂಗಡನೆಯತ್ತ ಗಮನ ಹರಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

ವಿವಾದಕ್ಕೆ ಕಾರಣ...
1956ರಲ್ಲಿ ರಾಜ್ಯಗಳ ಪುನರ್ ವಿಂಗಡನೆಗೂ ಮೊದಲು ಮೈಸೂರು ಪ್ರಾಂತ್ಯವು ಬಾಂಬೆ, ಹೈದರಾಬಾದ್, ಮದ್ರಾಸ್ ಮತ್ತು ಕೂರ್ಗ್‌ಗಳಲ್ಲಿ ಹಂಚಿ ಹೋಗಿತ್ತು. ನಂತರ ಅವುಗಳಿಂದ ಬೇರ್ಪಡಿಸಿ ಮೈಸೂರು ರಾಜ್ಯವನ್ನು ಅಸ್ತಿತ್ವಕ್ಕೆ ತರಲಾಗಿತ್ತು. 1973ರಲ್ಲಿ ಮೈಸೂರು ರಾಜ್ಯವು ಕರ್ನಾಟಕ ರಾಜ್ಯವೆಂದು ಮರು ನಾಮಕರಣಗೊಂಡಿತ್ತು.

ಈ ಏಕೀಕರಣ ಸಂದರ್ಭದಲ್ಲಿ ಹಲವು ಮರಾಠಿ ಭಾಷಿಗರ ಪ್ರದೇಶಗಳು ಮೈಸೂರಿಗೆ (ಕರ್ನಾಟಕ) ಸೇರಿದ್ದವು. ಇದೇ ನಂತರದ ದಿನಗಳಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕಗಳ ನಡುವೆ ವಿವಾದಕ್ಕೆ ಕಾರಣವಾಗಿತ್ತು.

ಕೇಂದ್ರದ ನಡೆಗೆ ರಾಜ್ಯ ಸ್ವಾಗತ..
ಬೆಳಗಾವಿ, ಕಾರವಾರ, ಬೀದರ್ ಮತ್ತು ಗುಲ್ಬರ್ಗಾಗಳು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಶಿಫಾರಸು ಮಾಡಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ರಾಜಕೀಯ ನಾಯಕರು ಸ್ವಾಗತಿಸಿದ್ದಾರೆ.

ಬೆಳಗಾವಿ ರಾಜ್ಯದ ಅವಿಭಾಜ್ಯ ಅಂಗವೆಂದು ಮಹಾಜನ್ ಆಯೋಗದ ವರದಿಯೇ ಹೇಳಿತ್ತು. ಆದರೂ ಮಹಾರಾಷ್ಟ್ರ ನ್ಯಾಯಾಲಯಕ್ಕೆ ಹೋಗಿತ್ತು. ಕೇಂದ್ರದ ತೀರ್ಮಾನದಿಂದ ನಮಗೆ ಅತೀವ ಸಂತಸವಾಗಿದೆ ಎಂದು ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದಾರೆ.

ರಾಜ್ಯ ವಿಧಾನಸಭೆಯ ಪ್ರತಿಪಕ್ಷದ ಉಪ ನಾಯಕ ಟಿ.ಬಿ. ಜಯಚಂದ್ರ ಇಂದು ವಿಧಾನಸಭೆಯಲ್ಲಿ ಈ ವಿಚಾರವನ್ನು ಹೇಳಿದರು. ನಂತರ ಎಲ್ಲಾ ನಾಯಕರೂ ಕೇಂದ್ರದ ನಿಲುವನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.

ಇಂದು ಕರ್ನಾಟಕದ ಪಾಲಿಗೆ ಸಂದ ಜಯ. ಅದನ್ನು ಕೇಂದ್ರ ಸರಕಾರವು ಪುನರುಚ್ಛರಿಸಿದೆ. ವಾಸ್ತವಿಕ ವಿಚಾರ ಏನು ಎಂಬುದನ್ನು ಮನಮೋಹನ್ ಸಿಂಗ್ ಸರಕಾರ ಸ್ಪಷ್ಟಪಡಿಸಿದೆ. ಮಹಾರಾಷ್ಟ್ರವು ಮತ್ತೆ ತಕರಾರು ಎತ್ತಬಾರದು. ಇದು ಆ ರಾಜ್ಯಕ್ಕೆ ನೀಡಿರುವ ಸ್ಪಷ್ಟ ಸಂದೇಶವೂ ಹೌದು ಎಂದು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ದೇಶಪಾಂಡೆ ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರವು ಈ ಅಫಿದಾವಿತ್ ಸಲ್ಲಿಸಿರುವ ಸುದ್ದಿ ಬಹಿರಂಗವಾಗುತ್ತಿದ್ದಂತೆ ಕನ್ನಡ ಪರ ಸಂಘಟನೆಗಳು ರಾಜ್ಯದಾದ್ಯಂತ ಸಂಭ್ರಮವನ್ನಾಚರಿಸಿವೆ. ಕರ್ನಾಟಕ ರಕ್ಷಣಾ ವೇದಿಕೆ ಮತ್ತಿತರ ಸಂಘಟನೆಗಳು ಬೆಳಗಾವಿ, ಕಾರವಾರ ಮುಂತಾದೆಡೆ ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ