ಒಂದು ಕಡೆ ಶಾಂತಿಯ ಅಗತ್ಯತೆ ಕುರಿತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಸಿವು ಪ್ರದರ್ಶಿಸುವ ಪಾಕಿಸ್ತಾನ ಮತ್ತೊಂದು ಕಡೆಯಿಂದ ಕಾಲು ಕೆರೆದು ಜಗಳಕ್ಕೆ ಬರುತ್ತಿದೆ. ಅದರ ಫಲವಾಗಿ ಕಳೆದೆರಡು ದಿನಗಳಿಂದ ಇಬ್ಬರು ಭಾರತೀಯ ಯೋಧರು ಪಾಕ್ ಪಡೆಗಳಿಗೆ ಬಲಿಯಾಗಿದ್ದಾರೆ.
ಇದು ಎರಡು ದಿನಗಳಲ್ಲಿ ನಡೆದ ನಾಲ್ಕನೇ ಕದನ ವಿರಾಮ ಒಪ್ಪಂದ ಉಲ್ಲಂಘನೆ. ನಿನ್ನೆ ಜಮ್ಮು ವಲಯದಲ್ಲಿ ಅಂತಾರಾಷ್ಟ್ರೀಯ ಗಡಿಯೀಚೆಗೆ ಗುಂಡು ಹಾರಿಸಿ ಗಡಿ ಭದ್ರತಾ ಪಡೆಯ ಓರ್ವ ಯೋಧನನ್ನು ಕೊಂದು ಹಾಕಿದ್ದ ಪಾಕಿಸ್ತಾನ, ಇಂದು ಮತ್ತೊಬ್ಬನ ಸಾವಿಗೆ ಕಾರಣವಾಗಿದೆ.
ಕಳೆದ ಮಧ್ಯರಾತ್ರಿ ಪಾಕಿಸ್ತಾನಿ ಪಡೆಗಳು ಪಿಂಡಿ, ಮಾಲಾ ಬೇಲಾ ಮತ್ತು ಚಾಕ್ ಪಗ್ವೇರಿ ಗಡಿ ಪ್ರದೇಶಗಳಲ್ಲಿ ಮನಬಂದಂತೆ ಗುಂಡು ಹಾರಿಸಿವೆ. ಈ ಹೊತ್ತಿಗೆ ಗಡಿ ಭದ್ರತಾ ಪಡೆಗಳು ಕೂಡ ಸೂಕ್ತ ಪ್ರತ್ಯುತ್ತರ ನೀಡಿವೆ. ಸುಮಾರು ಅರ್ಧಗಂಟೆಗಳ ಕಾಲ ಈ ಗುಂಡಿನ ಚಕಮಕಿ ನಡೆದಿತ್ತು.
ಘಟನೆಯಲ್ಲಿ ಬಿಎಸ್ಎಫ್ ಜವಾನ ಕೆ. ಹರಿಪ್ರಸಾದ್ ಸಾವನ್ನಪ್ಪಿದ್ದರೆ, ರೂಪ್ ಸಿಂಗ್ ಎಂಬ ಗ್ರಾಮಸ್ಥ ತೀವ್ರವಾಗಿ ಗಾಯಗೊಂಡಿದ್ದಾನೆ.
ನಂತರ ಮುಂಜಾನೆ ಐದು ಗಂಟೆ ಹೊತ್ತಿಗೆ ಮತ್ತೆ ಪಾಕಿಸ್ತಾನಿ ಪಡೆಗಳು ಗುಂಡಿನ ಚಕಮಕಿಯಲ್ಲಿ ತೊಡಗಿವೆ. ಪಾರ್ಗ್ವಾಲ್ ಗಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಮುಂಜಾನೆಯ ಘಟನೆಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಚಕಮಕಿ ಮುಂದುವರಿದಿತ್ತು. ಇತ್ತ ಗಡಿ ಭದ್ರತಾ ಪಡೆಗಳೂ ಪ್ರತಿದಾಳಿ ನಡೆಸಿದ ನಂತರ ಗುಂಡು ಹಾರಾಟ ಆ ಕಡೆಯಿಂದ ನಿಂತಿದೆ. ಭಾರತದ ಕಡೆಯಿಂದ ಇದರಿಂದಾಗಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ಬಿಎಸ್ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿನ್ನೆ ಚಾಕ್ ಫಗ್ವಾರಿ ಪ್ರದೇಶದಲ್ಲಿ ಪಾಕಿಸ್ತಾನಿ ಪಡೆಗಳು ನಡೆಸಿದ ದಾಳಿಯಿಂದಾಗಿ ಸುಲ್ತಾನ್ ಆಲಿ ಎಂಬ ಬಿಎಸ್ಎಫ್ ಜವಾನ ಹುತಾತ್ಮನಾಗಿದ್ದ. ನಂತರ ಪೂಂಛ್ ವಲಯದ ಕೃಷ್ಣಗಾಟಿ ಗಡಿ ರೇಖೆಯಲ್ಲೂ ಪಾಕ್ ಕದನ ವಿರಾಮ ಉಲ್ಲಂಘಿಸಿತ್ತು.
ಸಾಮಾನ್ಯವಾಗಿ ಭಯೋತ್ಪಾದಕರು ಗಡಿಯೊಳಗೆ ಒಳ ನುಸುಳಲು ಸಹಾಯವಾಗುವಂತೆ ಪಾಕಿಸ್ತಾನಿ ಪಡೆಗಳು ಅಪ್ರಚೋದಿತವಾಗಿ ಗುಂಡು ಹಾರಿಸುತ್ತವೆ.