ಹೈದರಾಬಾದ್‌ನ ಕ್ಲಿಂಟನ್ ಫೌಂಡೇಶನ್‌ನಲ್ಲಿ ಕೆಲಸ ಮಾಡುವ ಅಮೆರಿಕಾ ಯುವತಿಯೊಬ್ಬಳು, ತನ್ನನ್ನು ಅಪರಿಚಿತ ವ್ಯಕ್ತಿಯೊಬ್ಬ ಜೀವ ಬೆದರಿಕೆಯನ್ನೊಡ್ಡಿ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಿದ್ದಾಳೆ.
25ರ ಹರೆಯದ ಈ ಯುವತಿ ಇಲ್ಲಿನ ಬಂಜಾರಾ ಹಿಲ್ಸ್‌ನಲ್ಲಿ ಬಾಡಿಗೆ ಮನೆಯಲ್ಲಿದ್ದು, ಏಕಾಂಗಿಯಾಗಿದ್ದಾಗ ಈ ಕೃತ್ಯ ನಡೆಸಲಾಗಿದೆ ಎಂದು ವರದಿಗಳು ಹೇಳಿವೆ. ಯುವತಿ ಸ್ವತಃ ಪೊಲೀಸ್ ಠಾಣೆಗೆ ಬಂದು ಇಂದು ಬೆಳಿಗ್ಗೆ ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿದೆ.
ಕಳೆದೊಂದು ವರ್ಷದಿಂದ ಯುವತಿ ಬಂಜಾರಾ ಹಿಲ್ಸ್‌ನಲ್ಲಿರುವ ಮನೆಯ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದಳು ಎಂದು ಹೇಳಲಾಗಿದೆ.
ಬುಧವಾರ ಮುಂಜಾನೆ ಹೊತ್ತಿಗೆ ಬಲಾಢ್ಯ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ, ಬೆದರಿಕೆ ಹಾಕಿ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ ಎಂದು ಯುವತಿ ಆರೋಪಿಸಿದ್ದು, ಪೊಲೀಸ್ ಆಯುಕ್ತರು ಸೇರಿದಂತೆ ತನಿಖಾ ತಂಡಗಳು ಮನೆಯನ್ನು ತಪಾಸಣೆ ನಡೆಸಿವೆ. ಇದುವರೆಗೂ ಆರೋಪಿಗಳ ಸುಳಿವು ಪತ್ತೆಯಾಗಿಲ್ಲ ಎಂದು ಮೂಲಗಳು ಹೇಳಿವೆ.
ನೆಲ ಮಹಡಿಯಲ್ಲಿ ವಾಸಿಸುತ್ತಿರುವ ಮನೆಯ ಮಾಲೀಕರಿಗೆ ಯುವತಿ ಮುಂಜಾನೆ 5.15ರ ಹೊತ್ತಿಗೆ ಕೆಳಗೆ ಬಂದು ಘಟನೆಯನ್ನು ವಿವರಿಸಿದ್ದಾಳೆ. ನಂತರ ತನ್ನ ಸ್ನೇಹಿತರನ್ನು ಬರ ಹೇಳಿ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಪ್ರಥಮ ಚಿಕಿತ್ಸೆ ನೀಡಿದ ನಂತರ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.
ಅತ್ಯಾಚಾರಿಯ ಪತ್ತೆಗಾಗಿ ಎರಡು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಯುವತಿಯ ಹೇಳಿಕೆ ಆಧಾರದಲ್ಲಿ ಆರೋಪಿಯ ರೇಖಾ ಚಿತ್ರವನ್ನೂ ಸಿದ್ಧಪಡಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಎ.ಕೆ. ಖಾನ್ ತಿಳಿಸಿದ್ದಾರೆ.
ಕೆಲವು ಪೊಲೀಸ್ ಮೂಲಗಳ ಪ್ರಕಾರ ಈಗಾಗಲೇ ಸಂಶಯದ ಮೇಲೆ ಒಬ್ಬನನ್ನು ಬಂಧಿಸಲಾಗಿದೆ.