ಬಹುಶಃ ಇಂತಹ ಒಂದು ಕಥೆಯನ್ನು ಇದುವರೆಗೆ ಯಾವುದೇ ಸಿನಿಮಾ ನಿರ್ದೇಶಕರು ಮುಟ್ಟಿರಲು ಸಾಧ್ಯವಿಲ್ಲ. ಅಂತಹ ವಿನೂತನ ಮಾದರಿಯನ್ನು ಅನುಸರಿಸುವ ಮೂಲಕ ಪಂಜಾಬ್‌ನ ಮಹಿಳೆಯೊಬ್ಬಳು ತಂದೆ-ಮಗ ಇಬ್ಬರನ್ನೂ ಮದುವೆಯಾಗಿ ಮೋಸ ಮಾಡಿದ್ದಾಳೆ.
ಕೆಲಸಕ್ಕೆಂದು ಮನೆಗೆ ಸೇರಿಕೊಂಡು ಮನೆಯ ಮಾಲಿಕ, ಅನಿವಾಸಿ ಭಾರತೀಯ ವೃದ್ಧನನ್ನು ಮೊದಲು ಮದುವೆಯಾಗಿ ತನ್ನ ಬೇಳೆ ಬೇಯದೇ ಇದ್ದಾಗ, ನಂತರ ಆತನ ಮಗನ ಸಂಗ ಮಾಡಿದ್ದಾಳೆ. ಎಲ್ಲವೂ ವಿಫಲವಾದ ಬಳಿಕ ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿ ಭೂಗತಳಾಗಿದ್ದಾಳೆ.
ಈಕೆಯ ಮುಂದಿದ್ದ ಮುಖ್ಯ ಉದ್ದೇಶ ಎನ್ಆರ್ಐಗಳನ್ನು ಮದುವೆಯಾದರೆ ವಿದೇಶಕ್ಕೆ ಸುಲಭವಾಗಿ ವಲಸೆ ಹೋಗಬಹುದು ಎಂಬುದು. ಅದೇ ಕಾರಣದಿಂದ ಕೆನಡಾ ಪ್ರಜೆಗಳಾಗಿರುವ ಅಪ್ಪ-ಮಗನಿಗೆ ಗಾಳ ಹಾಕಿದ್ದಳು.
ಕೆಲಸಕ್ಕೆಂದು ಬಂದಿದ್ದಳು... ಈ ನಿಗೂಢ ಮಹಿಳೆಯ ಹೆಸರು ಪ್ರಿಯಾ ಇಂದರ್ ಕೌರ್. 2001ರಲ್ಲಿ ಚಂಡೀಗಢದ ಐಷಾರಾಮಿ ಪ್ರದೇಶದಲ್ಲಿದ್ದ ಶ್ರೀಮಂತ ಎನ್ಆರ್ಐ ರಾಜೀಂದರ್ ಸಿಂಗ್ ಮನ್ ಎಂಬವರ ಮನೆಗೆ ಬಂದಿದ್ದ ಈಕೆ, ತನಗೆ ಬಾಡಿಗೆ ಮನೆ ಬೇಕೆಂದು ಕೇಳಿದ್ದಳು.
ಆರಂಭದಲ್ಲಿ ಯಾವುದೇ ದಾಖಲೆಗಳನ್ನು ಕೇಳದ 60ರ ವೃದ್ಧ ರಾಜೀಂದರ್ ನಂತರ ಕೇಳಿದಾಗ ಯಾವುದನ್ನೂ ನೀಡಲು ನಿರಾಕರಿಸಿದ ಪ್ರಿಯಾಳನ್ನು ಹೊರ ದಬ್ಬಿದ್ದರು. ಸ್ವಲ್ಪ ಸಮಯದ ಬಳಿಕ ಮತ್ತೆ ಬಂದಿದ್ದ ಪ್ರಿಯಾ, ತನಗೊಂದು ಕೆಲಸ ನೀಡಿ ಎಂದು ಕೇಳಿಕೊಂಡಿದ್ದಳು.
ಪ್ರಿಯಾಳ ಪರಿಸ್ಥಿತಿಯನ್ನು ಕಂಡು ಮರುಗಿದ ರಾಜೀಂದರ್, ತನ್ನ ಮನೆಯಲ್ಲೇ ಸಹಾಯಕಳಾಗಿ ಇರುವಂತೆ ಸೂಚಿಸಿದರು. ಕೆಲ ಕಾಲದ ನಂತರ ಇಬ್ಬರೂ ಆಪ್ತರಾಗಿದ್ದರು. ಕೊನೆಗೆ 2001ರ ಸೆಪ್ಟೆಂಬರ್ ತಿಂಗಳಲ್ಲಿ ಮದುವೆಯಾಗುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು.
'ಅವಳನ್ನು ಮದುವೆಯಾದ ಬಳಿಕ ನಾನು ಕೆನಡಾಕ್ಕೆ ಹೋಗುತ್ತೇನೆ ಎನ್ನುವುದು ಪ್ರಿಯಾ ಯೋಚನೆಯಾಗಿತ್ತು. ಆದರೆ ನಾನು ಕೆನಡಾಕ್ಕೆ ತಕ್ಷಣ ವಾಪಸ್ ಹೋಗುವ ಯಾವುದೇ ಯೋಚನೆಯಿಲ್ಲ ಎಂದಾಗ, ಅನುಚಿತವಾಗಿ ವರ್ತಿಸಲಾರಂಭಿಸಿದಳು. ಈ ಸಂಬಂಧ ನಂತರ 2002ರ ಫೆಬ್ರವರಿಯಲ್ಲಿ ವಿಚ್ಛೇದನದೊಂಗಿಗೆ ಕೊನೆಗೊಂಡಿತು' ಎಂದು ರಾಜೀಂದರ್ ವಿವರಿಸಿದ್ದಾರೆ.
ನಂತರ ಮಗನಿಗೆ ಗಾಳ... ಇದಾದ ಎರಡು ವರ್ಷಗಳ ತನಕ ರಾಜೀಂದರ್ ಮಾಜಿ ಪತ್ನಿಯ ಕುರಿತು ಎಲ್ಲೂ ಕೇಳಿರಲಿಲ್ಲ. ಆದರೆ 2004ರಲ್ಲಿ ಮತ್ತೆ ಮನೆಗೆ ಬಂದಿದ್ದಳು. ಆದರೆ ಆಗ ರಾಜೀಂದರ್ ಮನೆಯಲ್ಲಿರಲಿಲ್ಲ. ಆಗ ಭೇಟಿಯಾದದ್ದು ರಾಜೀಂದರ್ ಮೊದಲ ಪತ್ನಿಯ (ಕೆನಡಾ ಪತ್ನಿ) ಪುತ್ರ ರಾಜನ್ ಮನ್.
'ಇದನ್ನೇ ಬಂಡವಾಳ (ರಾಜನ್ ಕೆನಡಾ ಪ್ರಜೆ) ಮಾಡಿಕೊಂಡ ಆಕೆ, ರಾಜನ್ ಮೂಲಕ ಕೆನಡಾಕ್ಕೆ ಹೋಗಬಹುದೆಂದು ಯೋಚಿಸಿ ಆಪ್ತಳಾದಳು. ನಾನು ಆಗ ನನ್ನ ಹಿಮಾಚಲ ಪ್ರದೇಶದಲ್ಲಿನ ಮನೆಯಲ್ಲಿ ವಾಸಿಸುತ್ತಿದ್ದೆ. ಆದರೆ ಅಷ್ಟು ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು. ಮಗ ರಾಜನ್ ಮತ್ತು ಪ್ರಿಯಾ ಮದುವೆಯಾಗಿದ್ದರು ಎಂದು ಹೇಳುತ್ತಾರೆ' ರಾಜೀಂದರ್.
ಈ ವಿಚಾರ ರಾಜೀಂದರ್‌ಗೆ ತಿಳಿದ ನಂತರ ತನ್ನ ಮಗನಿಗೆ, ತನ್ನನ್ನೂ ಪ್ರಿಯಾ ಮದುವೆಯಾಗಿದ್ದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಆಘಾತಗೊಂಡ ರಾಜನ್ ಪತ್ನಿ ಪ್ರಿಯಾಗೆ ವಿಚ್ಛೇದನ ನೀಡಿದ್ದಾನೆ.
'ಮೊದಲು ತಂದೆಯನ್ನೇ ಮದುವೆಯಾಗಿದ್ದ ವಿಚಾರವನ್ನು ಆಕೆ ತನ್ನಲ್ಲಿ ತಿಳಿಸಿರಲಿಲ್ಲ' ಎಂದು ರಾಜನ್ ಹೇಳುತ್ತಿದ್ದಾನೆ.
ಭಯೋತ್ಪಾದಕರ ನಂಟು ಶಂಕೆ... ತಂದೆ-ಮಗ ಇಬ್ಬರೂ ಒಬ್ಬಳನ್ನೇ ಮದುವೆಯಾಗಿ ಮೋಸ ಹೋದ ನಂತರ ತಮ್ಮ ಮಾಜಿ ಪತ್ನಿಯ ವಿರುದ್ಧ ಮೋಸ ಮತ್ತು ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ ಪ್ರಕರಣ ದಾಖಲಿಸಿದ ಹೊತ್ತಿಗೆ ಪ್ರಿಯಾ ಯಾರಿಗೂ ಕಾಣದಂತೆ ಭೂಗತಳಾಗಿದ್ದಾಳೆ.
ಇವರು ವಂಚನೆ ಮತ್ತು ನಕಲಿ ದಾಖಲೆ ಪ್ರಕರಣ ದಾಖಲಿಸಿದ್ದು ನವದೆಹಲಿಯಲ್ಲಿನ ಕೆನಡಾ ರಾಯಭಾರ ಕಚೇರಿಯಲ್ಲಿನ ಮಾಹಿತಿ ಬಹಿರಂಗವಾದಾಗ. ತಾನು ರಾಜನ್ ಪತ್ನಿಯೆಂದು ಹೇಳಿ ಪಾಸ್‌ಪೋರ್ಟ್ ಮಾಡಿಸಿಕೊಂಡು ಕೆನಡಾಕ್ಕೆ ಹೋಗಲು ರಾಯಭಾರ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಿದ್ದಳು.
ಪ್ರಿಯಾ ಪ್ರಕರಣದ ಕುರಿತು ವಿಸ್ತೃತ ತನಿಖೆ ನಡೆಸಿದಾಗ ಹೋದಲ್ಲೆಲ್ಲ ಆಕೆ ನೀಡಿದ ದಾಖಲೆಗಳು ನಕಲಿಯೆಂಬುದು ಪೊಲೀಸರಿಗೆ ತಿಳಿಯಿತು. ಆಕೆಯ ಕುಟುಂಬಿಕರ ಬಗ್ಗೆಯೂ ಯಾವುದೇ ಮಾಹಿತಿ ಸಿಗದಂತೆ ಎಲ್ಲಾ ಕಡೆ ನಿಭಾಯಿಸಿಕೊಂಡು ಬಂದಿದ್ದಾಳೆ.
ಆದರೂ ಉತ್ತರ ಪ್ರದೇಶದ ಹತ್ಯಾ ಪ್ರಕರಣವೊಂದರಲ್ಲಿ ಈಕೆ ಭಾಗಿಯಾಗಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಪ್ರಕಾರ ಪ್ರಿಯಾ ಭಯೋತ್ಪಾದಕರ ಜತೆ ಸಂಬಂಧ ಹೊಂದಿರುವ ಸಾಧ್ಯತೆಗಳೂ ಇವೆ.