ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೈಕಮಾಂಡ್‌ಗೆ ಕ್ಯಾರೇ ಅನ್ನದ ಜಗನ್‌; ಯಾತ್ರೆಗೆ ಚಾಲನೆ (Congress | Y S Jagan Mohan Reddy | Odarpu yatra | Andhra Pradesh)
Bookmark and Share Feedback Print
 
ಕಾಂಗ್ರೆಸ್ ಹೈಕಮಾಂಡ್ ಲಕ್ಷ್ಮಣ ರೇಖೆಗಳನ್ನು ಲೆಕ್ಕಿಸದ ಕಾಂಗ್ರೆಸ್ ಸಂಸದ ವೈ.ಎಸ್. ಜಗನ್ಮೋಹನ್ ರೆಡ್ಡಿ ತನ್ನ ವಿವಾದಿತ 'ಒದಾರ್ಪು ಯಾತ್ರೆ'ಗೆ ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ಮತ್ತೆ ಚಾಲನೆ ನೀಡಿದ್ದಾರೆ.

ಫಾಲುಕ್ನೌಮಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೈದರಾಬಾದ್‌ನಿಂದ ಇಚಾಪುರಂ ಜಿಲ್ಲೆಗೆ ಬಂದ ಜಗನ್‌ಗೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಸ್ವಾಗತಿಸಿದರು.

ತನ್ನ ತಂದೆ, ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಹುಟ್ಟುಹಬ್ಬದ ದಿನದಂದು (1949ರ ಜುಲೈ 8) ಅವರ ಪುತ್ಥಳಿಯನ್ನು ಕೂಡ ಜಗನ್ ಇದೇ ಸಂದರ್ಭದಲ್ಲಿ ಅನಾವರಣಗೊಳಿಸಿದ್ದಾರೆ.

2004ರ ವಿಧಾನಸಭಾ ಚುನಾವಣೆಗೂ ಮೊದಲು ರಾಜಶೇಖರ ರೆಡ್ಡಿ ರಾಜ್ಯದಾದ್ಯಂತ ಆರಂಭಿಸಿದ್ದ ಪಾದಯಾತ್ರೆಯ ಸವಿನೆನಪಿಗಾಗಿ ಇಲ್ಲಿ ನಿರ್ಮಿಸಲಾಗಿರುವ 'ವಿಜಯ ವಿಥಿಕಾ'ದಲ್ಲಿ ಅವರು ನಂತರ ತನ್ನ ತಂದೆಗೆ ಶ್ರದ್ದಾಂಜಲಿ ಅರ್ಪಿಸಿದರು.

ಬಳಿಕ ನೆರೆದಿದ್ದ ಸಾವಿರಾರು ಮಂದಿಯನ್ನು ಉದ್ದೇಶಿಸಿ ಮಾತನಾಡಿದ ಜಗನ್, ನಾನು ಏಕಾಂಗಿ ಎಂದು ಯಾವುದೇ ಹಂತದಲ್ಲೂ ಅನ್ನಿಸಿಲ್ಲ, ಅದೇ ರೀತಿ ಈಗಲೂ ನಾನು ಒಂಟಿಯಾಗಿದ್ದೇನೆ ಎಂಬ ಭಾವನೆ ನನ್ನಲ್ಲಿಲ್ಲ. ನನ್ನ ತಂದೆ ಇಡೀ ಆಂಧ್ರಪ್ರದೇಶವೆಂಬ ಕುಟುಂಬವನ್ನು ನನಗೆ ನೀಡಿದ್ದಾರೆ ಎಂದರು.

ನಂತರ ಅಲ್ಲಿಂದ ಕಳೆದ ವರ್ಷ ತನ್ನ ತಂದೆಯ ಅಗಲಿಕೆಯ ಸಂದರ್ಭದಲ್ಲಿ ಸಾವನ್ನಪ್ಪಿದ್ದ ಲೋಡಾಪುಟ್ಟಿ ಗ್ರಾಮದ ಪೈಲಾ ಚಂದ್ರಮ್ಮ ಎಂಬವರ ಮನೆಗೆ ಭೇಟಿ ನೀಡಿ, ಕುಟುಂಬಿಕರಿಗೆ ಸಾಂತ್ವನ ಹೇಳಲು ತೆರಳಿದರು. ಈ ಸಂದರ್ಭದಲ್ಲಿ ಗ್ರಾಮದಲ್ಲಿನ ವೈಎಸ್ಆರ್ ಅವರ ಮತ್ತೊಂದು ಪುತ್ಥಳಿಯನ್ನೂ ಜಗನ್ ಅನಾವರಣಗೊಳಿಸಿದ್ದಾರೆ.

ವೈಎಸ್ಆರ್ ಸಾವಿನ ಸಂದರ್ಭದಲ್ಲಿ ಆತ್ಮಹತ್ಯೆ-ಹೃದಯಾಘಾತಗಳಿಗೆ ಬಲಿಯಾಗಿದ್ದಾರೆ ಎಂದು ಹೇಳಲಾದ ನೂರಾರು ಮಂದಿಯಲ್ಲಿ ತೆಲಂಗಾಣ ಪ್ರಾಂತ್ಯಕ್ಕೆ ಸೇರಿದವರೂ ಇದ್ದರು. ಅವರಿಗೆ ಸಾಂತ್ವನ ಹೇಳಲೆಂದು ಜಗನ್ 'ಒದಾರ್ಪು ಯಾತ್ರೆ'ಗೆ ಕೆಲವು ಸಮಯದ ಹಿಂದೆ ಚಾಲನೆ ನೀಡಿದ್ದರು. ಆದರೆ ಈ ಸಂದರ್ಭದಲ್ಲಿ ಭಾರೀ ಕೋಲಾಹಲ ಉಂಟಾಗಿದ್ದರಿಂದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.

ಅದನ್ನು ಮತ್ತೆ ಆರಂಭಿಸುವ ಕುರಿತು ಜಗನ್ ಸಿದ್ಧತೆಯಲ್ಲಿದ್ದಾಗ, ಕಾಂಗ್ರೆಸ್ ಹೈಕಮಾಂಡ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಯಾವುದೇ ಕಾರಣಕ್ಕೂ ಯಾತ್ರೆ ಮಾಡಬಾರದು, ಹಾಗೆ ಮಾಡಿದಲ್ಲಿ ಪಕ್ಷವು ಕಠಿಣ ಕ್ರಮವನ್ನು ಕೈಗೊಳ್ಳುತ್ತದೆ ಎಂದು ಕಟ್ಟೆಚ್ಚರ ನೀಡಿತ್ತು.

ಆದರೆ ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ಜಗನ್ ತನ್ನ ಮಹತ್ವಾಕಾಂಕ್ಷೆಯ ಯಾತ್ರೆಯನ್ನು ಮತ್ತೆ ಆರಂಭಿಸಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ಕಾಂಗ್ರೆಸ್‌ಗೆ ಬಿಸಿ ಮುಟ್ಟಿಸಿದ್ದಾರೆ. ಇದರೊಂದಿಗೆ ರಾಜ್ಯ ಕಾಂಗ್ರೆಸ್‌ನಲ್ಲಿನ ಬಿರುಕಿನ ಪ್ರಮಾಣವೂ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ