ತಮ್ಮ ಮಕ್ಕಳನ್ನು ಮನೆಯಿಂದ ಹೊರಗೆ ಬರಲು ಅವಕಾಶ ನೀಡಬೇಡಿ ಎಂದು ಕಳೆದ ಒಂದು ತಿಂಗಳ ಅವಧಿಯಲ್ಲಿ ಕಾಶ್ಮೀರದಲ್ಲಿನ ಹಿಂಸಾಪೂರಿತ ಪ್ರತಿಭಟನೆಗಳ ಕಾರಣದಿಂದಾಗಿ ಹಲವು ಹದಿಹರೆಯದವರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ನಂತರ ಗೃಹಸಚಿವ ಪಿ. ಚಿದಂಬರಂ ಹೆತ್ತವರಿಗೆ ಮನವಿ ಮಾಡಿಕೊಂಡಿದ್ದಾರೆ.
ಮುಸ್ಲಿಂ ಬಹುಸಂಖ್ಯಾತರಾಗಿರುವ ಕಾಶ್ಮೀರ ಕಣಿವೆಯಾದ್ಯಂತ ಭಾರೀ ಹಿಂಸಾಚಾರ ಕಾಣಿಸಿಕೊಂಡಾಗಲೆಲ್ಲ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ 15ಕ್ಕೂ ಮೀರಿದೆ. ಪೊಲೀಸರೊಂದಿಗೆ ಘರ್ಷಣೆಗೆ ಇಳಿಯುವುದು, ಕಲ್ಲು ತೂರಾಟ ಮುಂತಾದ ಕಾರಣಗಳಿಂದಾಗಿ ಆಗಾಗ ಗೋಲಿಬಾರ್ ನಡೆಯುತ್ತಿರುವುದರಿಂದ ಹೆತ್ತವರು ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಬೇಕು ಎನ್ನುವುದು ಸಚಿವರ ಮನವಿ.
ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಶಾಂತರಾಗಿರಿ ಎಂದು ಸತತ ಮನವಿ ಮಾಡಿಕೊಂಡ ಹೊರತಾಗಿಯೂ ಪ್ರತಿದಿನ ಯುವಕರು ಬಲಿಯಾಗುತ್ತಿರುವುದು ಇಳಿಮುಖ ಕಂಡಿಲ್ಲ. ತಮ್ಮ ರ‌್ಯಾಲಿಗಳ ಸಂದರ್ಭದಲ್ಲಿ ಭದ್ರತಾ ಪಡೆಗಳತ್ತ ಹದಿಹರೆಯದವರು ಮತ್ತು ಯುವಕರು ಕಲ್ಲು ತೂರಾಟ ನಡೆಸುತ್ತಿರುವುದರಿಂದ ಈ ಅವಘಢಗಳು ಸಂಭವಿಸುತ್ತಿವೆ.
ಜನತೆ ಬೀದಿಗಿಳಿಯದೇ ಇರುವುದು ಮತ್ತು ಕಲ್ಲು ತೂರಾಟ ನಡೆಸದೇ ಇರುವುದು ಪ್ರಸಕ್ತ ಪರಿಸ್ಥಿತಿಯಲ್ಲಿ ಮುಖ್ಯವಾಗಿದೆ. ಹಾಗಾಗಿ ಮಕ್ಕಳು, ಅದರಲ್ಲೂ ಹದಿಹರೆಯದವರು ಮನೆಯೊಳಗೆ ಉಳಿದುಕೊಳ್ಳಬೇಕು. ಇದನ್ನು ಖಚಿತಪಡಿಸಿಕೊಳ್ಳುವುದು ಹೆತ್ತವರ, ಪೋಷಕರ ಜವಾಬ್ದಾರಿಯಾಗಿದೆ ಎಂದು ಚಿದಂಬರಂ ತಿಳಿಸಿದ್ದಾರೆ.
ಶ್ರೀನಗರ ಸೇರಿದಂತೆ ಕಾಶ್ಮೀರ ಕಣಿವೆಯ ಹಲವು ನಗರಗಳಲ್ಲಿ ನಿಷೇಧಾಜ್ಞೆ ಮುಂದುವರಿಸಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಇದೀಗ ಪೊಲೀಸರೊಂದಿಗೆ ಸೇನೆಯೂ ಹರಸಾಹಸ ಪಡುತ್ತಿದೆ. ಪ್ರಸಕ್ತ ಸುಮಾರು 10,000 ಭದ್ರತಾ ಪಡೆಗಳು ಶಾಂತಿ ನೆಲೆಗೊಳಿಸಲು ಯತ್ನಿಸುತ್ತಿವೆ.
ಸೇನೆಯು ಶ್ರೀನಗರ ಪ್ರವೇಶಿಸಿದ ನಂತರ ಪರಿಸ್ಥಿತಿ ಬಹುತೇಕ ಶಾಂತವಾಗಿದೆ. ನಿನ್ನೆ ಕೇವಲ ಎರಡು ಪುಟ್ಟ ಹಿಂಸಾಚಾರ ಘಟನೆಗಳು ನಡೆದ ಬಗ್ಗೆ ವರದಿಗಳು ಬಂದಿವೆ. ಇಂದಿನ ವರದಿ ಇನ್ನಷ್ಟೇ ಕೈ ಸೇರಬೇಕಿದೆ. ಜಮ್ಮು ಸರಕಾರದ ಮನವಿ ಹಿನ್ನೆಲೆಯಲ್ಲಿ ಸೇನೆಯನ್ನು ನಿನ್ನೆ ಬೆಳಿಗ್ಗೆಯಿಂದಲೇ ನಿಯೋಜಿಸಲಾಗಿದೆ. ಸೇನೆಯು ರಾಜ್ಯ ಪೊಲೀಸ್ ಮತ್ತು ಅರೆಸೇನಾ ಪಡೆಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.