ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಪನ್ಯಾಸಕನ ಕೈ ಕತ್ತರಿಸಿದ್ದು ಪೂರ್ವನಿಯೋಜಿತ ಕೃತ್ಯ
(Popular Front of India | T.J. Joseph | Kerala | Prophet remarks)
ಪ್ರವಾದಿ ಕುರಿತು ಪ್ರಶ್ನೆ ಕೇಳಿದ್ದನ್ನೇ ಮುಂದಿಟ್ಟುಕೊಂಡು ಮತಾಂಧರು ಉಪನ್ಯಾಸಕರೊಬ್ಬರ ಕೈ ಕತ್ತರಿಸಿದ ಪ್ರಕರಣವು ಪೂರ್ವ ನಿಯೋಜಿತವಾಗಿತ್ತು ಎಂದು ಕೇರಳ ಡಿಜಿಪಿ ಜಾಕೋಬ್ ಪುನ್ನೋಸ್ ಬಹಿರಂಗಪಡಿಸಿದ್ದಾರೆ.
ಉಪನ್ಯಾಸಕ ಟಿ.ಜೆ. ಜೋಸೆಫ್ ಮೇಲೆ ದಾಳಿ ನಡೆದ ಸ್ಥಳಕ್ಕೆ ಇಂದು ಭೇಟಿ ನೀಡಿದ ಡಿಜಿಪಿ, ಇದೊಂದು ಪೂರ್ವ ನಿಯೋಜಿತ ದಾಳಿಯಾಗಿತ್ತು. ಇದಕ್ಕಾಗಿ ವ್ಯವಸ್ಥಿತ ಸಂಚನ್ನು ರೂಪಿಸಲಾಗಿತ್ತು, ಸಾಕಷ್ಟು ಹಣವನ್ನೂ ವಿನಿಯೋಗಿಸಲಾಗಿತ್ತು ಮತ್ತು ಸಂಬಂಧಪಟ್ಟವರು ಯೋಜನೆ ನಿಖರವಾಗಿ ಜಾರಿಯಾಗುವಂತೆ ನೋಡಿಕೊಂಡಿದ್ದರು ಎಂದಿದ್ದಾರೆ.
ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸುವಲ್ಲಿ ವೈಜ್ಞಾನಿಕ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಕೆಲವು ಆರೋಪಿಗಳು ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂಬ ವರದಿಗಳು ಬಂದಿರುವಂತೆ ನಮಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಆರೋಪಿಗಳ ಬಗ್ಗೆ ನಮ್ಮಲ್ಲಿ ಸಾಕಷ್ಟು ಮಾಹಿತಿಗಳಿವೆ, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಅದೇ ಹೊತ್ತಿಗೆ ಪೊಲೀಸ್ ತಂಡಗಳು ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಮತ್ತು ಹಲವು ಶಂಕಿತರ ಮನೆಗಳ ಮೇಲೆ ನಿರಂತರ ದಾಳಿಗಳನ್ನು ಮುಂದುವರಿಸಿದ್ದಾರೆ. ಈ ಸಂದರ್ಭದಲ್ಲಿ ಸರಕಾರದ ವಿರುದ್ಧ ಅಪಪ್ರಚಾರ ಮಾಡುವ ಕೆಲವು ಬರಹಗಳನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ.
ಮುಂಗೈ ಕತ್ತರಿಸಿದ್ದರು... ಎರ್ನಾಕುಲಂ ಜಿಲ್ಲೆಯ ತೊಡುಪುಳ ಎಂಬಲ್ಲಿನ ನ್ಯೂಮ್ಯಾನ್ ಕಾಲೇಜ್‌ನಲ್ಲಿನ ಮಲಯಾಳಂ ಪ್ರೊಫೆಸರ್ ಟಿ.ಜೆ. ಜೋಸೆಫ್ ಎಂಬವರ ಬಲ ಅಂಗೈಯನ್ನು ಕೆಲ ದಿನಗಳ ಹಿಂದೆ ಮುವಾತ್ತುಪುಳ ಎಂಬಲ್ಲಿ ಕತ್ತರಿಸಿ ಹಾಕಲಾಗಿತ್ತು.
ಪ್ರೊಫೆಸರ್ ಜೋಸೆಫ್ ಕೋಮು ಸೌಹಾರ್ದ ಕೆಡಿಸಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿ ಬಿಡುಗಡೆಯಾದ ನಂತರ ಕುಟುಂಬದೊಂದಿಗೆ ಚರ್ಚ್‌ನಿಂದ ಮರಳುತ್ತಿದ್ದ ವೇಳೆ ದುಷ್ಕರ್ಮಿಗಳು ಅವರನ್ನು ಕಾರಿನಿಂದ ಎಳೆದು ಹಾಕಿ ಮುಂಗೈಯನ್ನು ಕತ್ತರಿಸಿ ಹಾಕಿದ್ದರು.
ಬಿ.ಕಾಂ. ಎರಡನೇ ವರ್ಷದ ಪದವಿ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದ ಜೋಸೆಫ್, ದೇವರು ಮತ್ತು ಮಹಮ್ಮದ್ ನಡುವಿನ ಕಾಲ್ಪನಿಕ ಮಾತುಕತೆಯ ಭಾಗವೊಂದನ್ನು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸುವಂತೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಕೇಳಲಾಗಿತ್ತು. ಇಲ್ಲಿ ಉಲ್ಲೇಖಿಸಿದ ಮಹಮ್ಮದ್ ಎಂಬುವುದನ್ನು ಪ್ರವಾದಿ ಮಹಮ್ಮದ್ ಎಂದೇ ಪರಿಗಣಿಸಿದ ಕೆಲವು ನಿರ್ದಿಷ್ಟ ಮುಸ್ಲಿಂ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು.
ನಂತರ ಕಾಲೇಜು ಆಡಳಿತ ಮಂಡಳಿಯು ಕ್ಷಮೆ ಯಾಚಿಸಿ, ಜೋಸೆಫ್ ಅವರನ್ನು ಒಂದು ವರ್ಷ ಅಮಾನತು ಮಾಡಿತ್ತು. ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಂತೆ ಜೋಸೆಫ್ ಕಣ್ಮರೆಯಾಗಿದ್ದ ಅವರನ್ನು ಕೋಮು ಸೌಹಾರ್ದತೆಗೆ ಧಕ್ಕೆ ತಂದ ಆರೋಪದ ಮೇಲೆ ಬಂಧಿಸಲಾಗಿತ್ತು.