ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಮಿಳು ಶಾಲೆಯಲ್ಲಿ ಓದಿದವರಿಗೆ ಕೆಲಸದ ಆದ್ಯತೆ: ಕರುಣಾ (Tamil Nadu | Tamil | government jobs | M Karunanidhi)
Bookmark and Share Feedback Print
 
ಮಾತೃಭಾಷೆಯಲ್ಲಿ ಓದಿದವರಿಗೆ ಸರಕಾರಿ ಉದ್ಯೋಗಗಳಲ್ಲಿ ಆದ್ಯತೆ ನೀಡುವ ಮಹತ್ವದ ನಿರ್ಧಾರವನ್ನು ಪಕ್ಕದ ರಾಜ್ಯ ತಮಿಳುನಾಡು ಕೈಗೊಂಡಿದೆ. ಇದರೊಂದಿಗೆ ಆಂಗ್ಲ ಮಾಧ್ಯಮದಲ್ಲಿ ಓದಿದವರು ಸರಕಾರಿ ಉದ್ಯೋಗದ ಬಗ್ಗೆ ನಿರೀಕ್ಷೆಯನ್ನಿಟ್ಟುಕೊಳ್ಳಬೇಕಾಗಿಲ್ಲ ಎಂಬ ಪರೋಕ್ಷ ಸಂದೇಶವನ್ನೂ ಮುಖ್ಯಮಂತ್ರಿ ಎಂ. ಕರುಣಾನಿಧಿ ರವಾನಿಸಿದ್ದಾರೆ.

ಇತ್ತೀಚೆಗಷ್ಟೇ ಕೊಯಂಬತ್ತೂರಿನಲ್ಲಿ 400 ಕೋಟಿ ರೂಪಾಯಿಗಳನ್ನು ಸುರಿದು ವಿಶ್ವ ತಮಿಳು ಸಮ್ಮೇಳನ ನಡೆಸಿ ತಮಿಳು ಭಾಷಿಗರಿಂದ ಬೆನ್ನು ತಟ್ಟಿಸಿಕೊಂಡಿದ್ದ ಕರುಣಾನಿಧಿಯವರ ಡಿಎಂಕೆ ಸರಕಾರವು ಇದೀಗ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

ತಮಿಳುನಾಡಿನ ತಮಿಳು ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಅಭ್ಯರ್ಥಿಗಳನ್ನು ಸರಕಾರಿ ಉದ್ಯೋಗಗಳಿಗೆ ಆರಿಸುವಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆಂಗ್ಲ ಮಾಧ್ಯಮಗಳಲ್ಲಿ ಓದಿದವರಿಗೆ ನಂತರದ ಪ್ರಾಶಸ್ತ್ಯ ನೀಡುವ ನಿರ್ಧಾರಕ್ಕೆ ಸರಕಾರ ಬಂದಿದೆ ಎಂದು ವರದಿಗಳು ಹೇಳಿವೆ.

ತಮಿಳನ್ನು ಅಧಿಕೃತ ಸರಕಾರಿ ಭಾಷೆಯಾಗಿ ಪರಿಗಣಿಸಬೇಕು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಕರುಣಾನಿಧಿಯವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಅಲ್ಲದೆ ಮದ್ರಾಸ್ ಹೈಕೋರ್ಟ್‌ನಲ್ಲಿ ತಮಿಳನ್ನು ಅಧಿಕೃತ ಭಾಷೆಯಾಗಿ ಬಳಸುವ ಕುರಿತು ಕೂಡ ಒತ್ತಾಯಿಸಿದ್ದು, ಇದು ಕೆಲವೇ ತಿಂಗಳುಗಳಲ್ಲಿ ಜಾರಿಗೆ ಬರುವ ಸಾಧ್ಯತೆಗಳಿವೆ.

ತಮಿಳು ಭಾಷೆಯ ರಕ್ಷಣೆಗಾಗಿ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ತಮಿಳುನಾಡು ಸರಕಾರ ಹೇಳುತ್ತಾ ಬಂದಿದೆ. ಆದರೆ ನಮ್ಮ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಯಾವುದೇ ಪಕ್ಷಗಳು ಇದರ ಬಗ್ಗೆ ಹೆಚ್ಚಿನ ಗಮನ ಕೊಡುತ್ತಿಲ್ಲ, ಕನ್ನಡದ ರಕ್ಷಣೆಗೆ ಆದ್ಯತೆ ನೀಡುತ್ತಿಲ್ಲ ಎಂಬ ಆರೋಪಗಳನ್ನು ನಿವಾರಿಸುವ ಕನಿಷ್ಠ ಯತ್ನವನ್ನು ಯಾವುದೇ ಸರಕಾರಗಳು ಮಾಡುತ್ತಿಲ್ಲ.

ಆದರೂ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸರಕಾರಿ ಉದ್ಯೋಗದಲ್ಲಿ ಮೊದಲ ಪ್ರಾಶಸ್ತ್ಯ ನೀಡುವ ಸಂಬಂಧ ಮಾತುಕತೆ ನಡೆಯುತ್ತಿದೆ ಎಂದು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದನ್ನು ಇದೀಗ ಸ್ಮರಿಸಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ