ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇರಳದಲ್ಲೂ ತಾಲಿಬಾನ್ ಭಯೋತ್ಪಾದನಾ ಜಾಲ? (Taliban | Kerala | Popular Front of India | T J Joseph)
Bookmark and Share Feedback Print
 
ಕೇರಳದಲ್ಲಿ ತಾಲಿಬಾನ್ ಭಯೋತ್ಪಾದನಾ ಜಾಲ ಸಕ್ರಿಯವಾಗಿದೆ ಎಂಬ ಭೀತಿಗೆ ಪುಷ್ಠಿ ನೀಡುವ ಮತ್ತಷ್ಟು ಅಂಶಗಳೀಗ ಬಹಿರಂಗವಾಗಿವೆ. ತಾಲಿಬಾನ್ ಕಾರ್ಯಾಚರಣೆ ಮತ್ತು ತರಬೇತಿ ಮಾದರಿಗಳನ್ನು ಹೊಂದಿರುವ ವಿವರಗಳ ಸಿಡಿಗಳನ್ನು ಪೊಲೀಸರು ವಶಪಡಿಸಿಕೊಂಡಿರುವುದೇ ಇತ್ತೀಚಿನ ಬೆಳವಣಿಗೆ.

ಎರ್ನಾಕುಲಂ ಜಿಲ್ಲೆಯ ತೊಡುಪುಳ ಎಂಬಲ್ಲಿನ ನ್ಯೂಮ್ಯಾನ್ ಕಾಲೇಜ್‌ನಲ್ಲಿನ ಮಲಯಾಳಂ ಪ್ರೊಫೆಸರ್ ಟಿ.ಜೆ. ಜೋಸೆಫ್ ಅವರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಸಿಟ್) ಈ ವಿಚಾರವನ್ನು ತಿಳಿಸಿದೆ. ತನಿಖೆಯ ಸಂದರ್ಭದಲ್ಲಿ ಅಲುವಾ (ಎರ್ನಾಕುಲಂ ಜಿಲ್ಲೆ ) ಎಂಬಲ್ಲಿ ಇನೋವಾ ಕಾರೊಂದರಿಂದ ತಾಲಿಬಾನ್ ತರಬೇತಿಯ ವಿವರಗಳುಳ್ಳ ಸಿಡಿಯನ್ನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
WD

ಗುರುವಾರ ಬೆಳಿಗ್ಗೆ ಈ ವಾಹನವನ್ನು ಮುಟ್ಟುಗೋಲು ಹಾಕಿಕೊಂಡಿದ್ದೇವೆ. ಇದರಲ್ಲಿ ಒಂದು ಸಿಡಿ ಮತ್ತು ಲ್ಯಾಪ್‌ಟಾಪ್ ಇತ್ತು. ಈ ಸಂಬಂಧ ತೀವ್ರ ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ಸಂಬಂಧ ಹಲವರನ್ನು ವಿಚಾರಣೆಗೊಳಪಡಿಸಿದ್ದೇವೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಶಪಡಿಸಿಕೊಂಡಿರುವ ಸಿಡಿಯಲ್ಲಿ ತಾಲಿಬಾನ್ ತರಬೇತಿ ಮಾದರಿಗಳಿರುವುದು ಖಚಿತವಾಗಿರುವುದರಿಂದ ಉಪನ್ಯಾಸಕರ ಕೈ ಕತ್ತರಿಸಿದ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ. ಅಫಘಾನಿಸ್ತಾನದ ಹಲವು ಕಡೆಗಳಲ್ಲಿ ತಾಲಿಬಾನ್ ನಡೆಸಿದ ಕೆಲವು ಅಮಾನವೀಯ ಕಾರ್ಯಾಚರಣೆಗಳ ವೀಡಿಯೋ ತುಣುಕುಗಳನ್ನು ಸಿಡಿ ಹೊಂದಿದೆ ಎಂದು ತಿಳಿದು ಬಂದಿದೆ.

ಪ್ರಕರಣ ಸಂಬಂಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರ ಮನೆಗಳು ಮತ್ತು ಸಂಬಂಧಪಟ್ಟ ಸ್ಥಳಗಳ ಮೇಲೆ ದಾಳಿ ನಡೆಸುವುದನ್ನು ಮುವಾತ್ತುಪುಳ ಡಿವೈಎಸ್‌ಪಿ ಸಾಬು ಮ್ಯಾಥ್ಯೂ ನೇತೃತ್ವದ ಸಿಟ್ ತಂಡ ಮುಂದುವರಿಸಿದೆ.

ಈ ನಡುವೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಾಚರಣೆ ಮೇಲೆ ಮಾಹಿತಿ ಕಲೆ ಹಾಕುತ್ತಿರುವ ಬೇಹುಗಾರಿಕಾ ಇಲಾಖೆಯು, ಇತ್ತೀಚಿನ ದಿನಗಳಲ್ಲಿ ಈ ಸಂಘಟನೆಯ ಯಾವ ಕಾರ್ಯಕರ್ತರು ವಿದೇಶಗಳಿಗೆ ಪ್ರಯಾಣಿಸಿದ್ದಾರೆ ಎಂಬುದನ್ನು ತನಿಖೆ ನಡೆಸುತ್ತಿದೆ.

ವಿಶೇಷವಾಗಿ ಗಲ್ಫ್ ರಾಷ್ಟ್ರಗಳಿಗೆ ಭೇಟಿ ನೀಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರ ಮೇಲೆ ಹೆಚ್ಚಿನ ನಿಗಾ ಇಡಲು ನಿರ್ಧರಿಸಲಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.

ಪ್ರಕರಣದ ಹಿನ್ನೆಲೆಯಿದು...
ಬಿ.ಕಾಂ. ಪದವಿ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದ ಜೋಸೆಫ್, ದೇವರು ಮತ್ತು ಮಹಮ್ಮದ್ ನಡುವಿನ ಕಾಲ್ಪನಿಕ ಮಾತುಕತೆಯ ಭಾಗವೊಂದನ್ನು ಬರೆದು ಇದಕ್ಕೆ ಪ್ರತಿಕ್ರಿಯಿಸುವಂತೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಕೇಳಿದ್ದರು. ಇಲ್ಲಿ ಉಲ್ಲೇಖಿಸಿದ ಮಹಮ್ಮದ್ ಎಂಬುವುದನ್ನು ಪ್ರವಾದಿ ಮಹಮ್ಮದ್ ಎಂದೇ ಪರಿಗಣಿಸಿದ ಕೆಲವು ನಿರ್ದಿಷ್ಟ ಮುಸ್ಲಿಂ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು.

ನಂತರ ಕಾಲೇಜು ಆಡಳಿತ ಮಂಡಳಿಯು ಕ್ಷಮೆ ಯಾಚಿಸಿ, ಜೋಸೆಫ್ ಅವರನ್ನು ಒಂದು ವರ್ಷ ಅಮಾನತು ಮಾಡಿತ್ತು. ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಂತೆ ಜೋಸೆಫ್ ಕಣ್ಮರೆಯಾಗಿದ್ದ ಅವರನ್ನು ಕೋಮು ಸೌಹಾರ್ದತೆಗೆ ಧಕ್ಕೆ ತಂದ ಆರೋಪದ ಮೇಲೆ ಬಂಧಿಸಲಾಗಿತ್ತು.

ಅವರು ಬಿಡುಗಡೆಯಾದ ನಂತರ ಕುಟುಂಬದೊಂದಿಗೆ ಚರ್ಚ್‌ನಿಂದ ಮರಳುತ್ತಿದ್ದ ವೇಳೆ ದುಷ್ಕರ್ಮಿಗಳು ಅವರನ್ನು ಕಾರಿನಿಂದ ಎಳೆದು ಹಾಕಿ ಮುಂಗೈಯನ್ನು ಕತ್ತರಿಸಿ ಹಾಕಿದ್ದರು.
ಸಂಬಂಧಿತ ಮಾಹಿತಿ ಹುಡುಕಿ