ಜಮ್ಮು-ಕಾಶ್ಮೀರದಲ್ಲಿ ಅಶಾಂತಿಯನ್ನು ಮುಂದುವರಿಸುವ ಉದ್ದೇಶದಿಂದ ಅಮರನಾಥ್ ಯಾತ್ರಿಗಳನ್ನು ಗುರಿಯಾಗಿಟ್ಟುಕೊಂಡು ಉಗ್ರರು ದಾಳಿ ನಡೆಸುವ ಸಾಧ್ಯತೆ ಬಗ್ಗೆ ಗುಪ್ತಚರ ಇಲಾಖೆಯ ಮೂಲಗಳು ಎಚ್ಚರಿಕೆ ನೀಡಿವೆ.
ಕಣಿವೆಯಲ್ಲಿ ಹಾಗೂ ಗಡಿರೇಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಗ್ರರ ಬಣಗಳ ನಡುವಿನ ಸಂಭಾಷಣೆಯನ್ನು ಬೇಧಿಸಲಾಗಿದ್ದು, ಅಮರನಾಥ್ ಯಾತ್ರಾರ್ಥಿಗಳು ಉಗ್ರರ ಗುರಿಯಲ್ಲಿದ್ದಾರೆ ಎಂದು ಸುಳಿವು ದೊರೆತಿದೆ. ಈ ಸುಳಿವುಗಳ ಆಧಾರದಲ್ಲಿ ಅಮರನಾಥ್ ಯಾತ್ರಾರ್ಥಿಗಳಿಗೆ ಹೆಚ್ಚಿನ ಭದ್ರತೆ ಒದಗಿಸುವ ಬಗ್ಗೆ ಕೇಂದ್ರ ಸರ್ಕಾರ ಭದ್ರತಾ ಪಡೆಗಳಿಗೆ ಸೂಚಿಸಿದೆ.
ಸರ್ವಪಕ್ಷಗಳ ಸಭೆ:ಈ ಸಂದರ್ಭದಲ್ಲಿ ಅಲ್ಲಿಯ ಪ್ರತ್ಯೇಕವಾದಿಗಳ ಪ್ರತಿಭಟನೆ, ಕಲ್ಲು ತೂರಾಟ, ಅತಿಯಾದ ಹಿಂಸಾಚಾರ ಇವುಗಳನ್ನು ತಡೆಯುವ ಹಿನ್ನೆಲೆಯಲ್ಲಿನ ಚರ್ಚೆಗಾಗಿ ಸರ್ವ ಪಕ್ಷಗಳ ಸಭೆಯನ್ನು ಕರೆಯಲಾಗಿದೆ.
ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಪ್ರಮುಖ ವಿರೋಧ ಪಕ್ಷವಾದ ಪಿಡಿಪಿಯೂ ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರ ಸಭೆಯನ್ನು ಸೋಮವಾರ ಕರೆದಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿಗಳು ಕೈಮೀರುತ್ತಿದ್ದು, ಅಲ್ಲಿಯ ಎಲ್ಲ ಬೆಳವಣಿಗೆಗಳನ್ನು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಪ್ರಧಾನಿ ಹಾಗೂ ಗೃಹ ಸಚಿವರ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.