ಕಾಂಗ್ರೆಸ್ ಸಂಸದ ಜಗನ್‌ಮೋಹನ್ ರೆಡ್ಡಿಯ ಸಾಂತ್ವನ ಯಾತ್ರೆ ಇದೀಗ ರಾಜಕೀಯ ಕೆಸರೆರಚಾಟಕ್ಕೆ ಎಡೆಮಾಡಿಕೊಟ್ಟಿದ್ದು, ಜಗನ್ ಇನ್ನೂ ಯುವಕ, ಮುಖ್ಯಮಂತ್ರಿ ಗದ್ದುಗೆ ಏರುವ ಬಗ್ಗೆ ಚಡಪಡಿಸುವುದು ಸರಿಯಲ್ಲ ಎಂದು ಪರೋಕ್ಷವಾಗಿ ಚುಚ್ಚಿರುವ ಆಂಧ್ರ ಮುಖ್ಯಮಂತ್ರಿ ರೋಸಯ್ಯ ವಿರುದ್ಧವೇ ಜಗನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್‌ನ ವಿರೋಧ ಇದ್ದಾಗಲೂ ತಾನು ಸಾಂತ್ವನ ಯಾತ್ರೆ ಮಾಡಿಯೇ ಸಿದ್ದ ಎಂದು ಪಟ್ಟು ಹಿಡಿದಿದ್ದ ಜಗನ್‌ಗೆ ಕೊನೆಗೂ, ರೋಸಯ್ಯ ಹಾಗೂ ಹೈಕಮಾಂಡ್ ಮಣಿಯುವ ಮೂಲಕ ಯಾತ್ರೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಆದರೆ ಸಾಂತ್ವನ ಯಾತ್ರೆ ಕಾಂಗ್ರೆಸ್‌ನೊಳಗಿನ ಅಸಮಾಧಾನ ಹೊರಹಾಕುವ ವೇದಿಕೆಯಾಗಿ ಮಾರ್ಪಟ್ಟಿದೆ.
ನನ್ನ ತಂದೆ ವೈ.ಎಸ್.ರಾಜಶೇಖರ ರೆಡ್ಡಿ ಅವರ ನಿಧನ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬದವರಿಗೆ ನಾನು ಸಾಂತ್ವನ ಹೇಳುತ್ತಿದ್ದೇನೆಯೇ ವಿನಃ, ಮುಖ್ಯಮಂತ್ರಿಗಳ ಕುರ್ಚಿ ಬಿಟ್ಟುಕೊಡಿ ಎನ್ನುತ್ತಿದ್ದೇನೆಯೇ ಎಂದು ಜಗನ್ ಗಂಭೀರವಾಗಿ ಪ್ರಶ್ನಿಸಿದ್ದಾರೆ.
ನನ್ನ ಉದ್ದೇಶ ಇರುವುದು ಸಾಂತ್ವನ ಹೇಳುವುದು, ಆದರೆ ನಾನು ಮುಖ್ಯಮಂತ್ರಿ ಗದ್ದುಗೆ ಏರಲು ಹವಣಿಸುತ್ತಿದ್ದೇನೆ ಎಂಬ ಹೆದರಿಕೆ ರೋಸಯ್ಯ ಅವರಿಗೆ ಯಾಕೆ ಶುರುವಾಯಿತು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇಂತಹ ಕ್ಷುಲ್ಲಕ ರಾಜಕೀಯದಿಂದ ನಮಗೆ ನಾಚಿಕೆಯಾಗಬೇಕು ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ಯಾತ್ರೆಗೆ ಅಡ್ಡಿಪಡಿಸಿದ್ರೆ ಹುಷಾರ್!: ಏತನ್ಮಧ್ಯೆ, ಸಾಂತ್ವನ ಯಾತ್ರೆಗೆ ಅಡ್ಡಿಪಡಿಸಿದಂತೆ ಆಂಧ್ರಪ್ರದೇಶದ ಹಿರಿಯ ಕಾಂಗ್ರೆಸ್ ಮುಖಂಡರಿಗೆ ಬೆದರಿಕೆ ಕರೆ ಬರುತ್ತಿರುವುದಾಗಿ ಕೆಲವರು ಆರೋಪಿಸಿದ್ದಾರೆ. ತಮ್ಮ ಸಾಂತ್ವನ ಯಾತ್ರೆ ಮುಂದುವರಿಯಲಿದೆ. ಆದರೆ ಯಾರಾದರೂ ಯಾತ್ರೆಗೆ ಅಡ್ಡಿಪಡಿಸಿದರೆ ಜಾಗ್ರತೆ ಎಂಬಂತಹ ಮೊಬೈಲ್ ಬೆದರಿಕೆ ಕರೆ ಬರುತ್ತಿರುವುದಾಗಿ ಹಿರಿಯ ಕಾಂಗ್ರೆಸ್ ಮುಖಂಡರು ದೂರಿದ್ದಾರೆ.