ಗುಜರಾತ್ ಮುಖ್ಯಮಂತ್ರಿ, ಬಿಜೆಪಿ 'ಫೈರ್ ಬ್ರಾಂಡ್' ನರೇಂದ್ರ ಮೋದಿ ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಬರಬಾರದು ಎಂಬ ಬೇಡಿಕೆ ಮುಂದಿಟ್ಟಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬೇಡಿಕೆಗೆ ಕೇಸರಿ ಪಕ್ಷವು ಬಹುತೇಕ ಒಪ್ಪಿಗೆ ಸೂಚಿಸಿದೆ ಎಂದು ವರದಿಗಳು ಹೇಳಿವೆ.
ಮೋದಿ ವಿವಾದ ತಾರಕಕ್ಕೇರಿ ಧರೆಗಿಳಿದ ಕೆಲ ವಾರಗಳ ನಂತರ ತೇಪೆ ಕಾರ್ಯದಲ್ಲಿ ತೊಡಗಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ಬಿಜೆಪಿ ಹಿರಿಯ ನಾಯಕರಾದ ಅರುಣ್ ಜೇಟ್ಲಿ ಮತ್ತು ಅನಂತ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಈ ಸಂದರ್ಭದಲ್ಲಿ ಜೆಡಿಯು ಬೇಡಿಕೆಗೆ ಬಿಜೆಪಿ ಮಣಿದಿದೆ ಎಂದು ಹೇಳಲಾಗಿದೆ.
ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಈ ಮಾತುಕತೆಯಲ್ಲಿ ಮೋದಿ ಸೇರಿದಂತೆ ಸಂಬಂಧಪಟ್ಟ ಎಲ್ಲಾ ವಿಚಾರಗಳೂ ಪ್ರಸ್ತಾಪವಾಗಿದ್ದು, ಎಲ್ಲವನ್ನೂ ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ರಾಷ್ಟ್ರೀಯ ಕಾರ್ಯಕಾರಿಣಿಗಾಗಿ ಪಾಟ್ನಾಕ್ಕೆ ಆಗಮಿಸಿದ್ದ ಬಿಜೆಪಿ ನಾಯಕರಿಗೆ ಜೂನ್ 12ರಂದು ಏರ್ಪಡಿಸಲಾಗಿದ್ದ ಔತಣಕೂಟವನ್ನು ರದ್ದುಪಡಿಸಿದ ನಂತರ ಕೇಂದ್ರೀಯ ನಾಯಕರನ್ನು ನಿತೀಶ್ ಭೇಟಿ ಮಾಡುತ್ತಿರುವುದು ಇದೇ ಮೊದಲು. ನರೇಂದ್ರ ಮೋದಿ ಜತೆಗಿನ ಭಾವಚಿತ್ರವಿರುವ ಜಾಹೀರಾತನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಕ್ಕೆ ಮುನಿಸಿಕೊಂಡಿದ್ದ ನಿತೀಶ್, ಕೋಸಿ ಪ್ರವಾಹ ಸಂತ್ರಸ್ತರಿಗೆಂದು ಗುಜರಾತ್ ನೀಡಿದ್ದ ಐದು ಕೋಟಿ ರೂಪಾಯಿಗಳನ್ನು ವಾಪಸ್ ಮಾಡಿ ಸೇಡು ತೀರಿಸಿಕೊಂಡಿದ್ದರು.
ಸಭೆಯು ಸೌಹಾರ್ದಯುತವಾಗಿತ್ತು ಮತ್ತು ಮೈತ್ರಿ ಮುಂದುವರಿಸುವ ಬಗ್ಗೆ ನಾಯಕರು ಒಮ್ಮತದ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಈ ಮಾತುಕತೆಗೆ ನಿರ್ದಿಷ್ಟ ವಿಚಾರವನ್ನು ನಿಗದಿಪಡಿಸಲಾಗಿತ್ತು. ಮಾತುಕತೆ ಎಲ್ಲರಿಗೂ ತೃಪ್ತಿ ತಂದಿದೆ ಎಂದು ಬಿಹಾರ ಜೆಡಿಯು ಮುಖ್ಯಸ್ಥ ವಿಜಯ್ ಚೌಧರಿ ತಿಳಿಸಿದ್ದಾರೆ.
ಉಭಯರು ಪರಸ್ಪರ ಅರ್ಥ ಮಾಡಿಕೊಂಡು ಗೌರವಿಸಿಕೊಂಡು ಮುಂದುವರಿಯಬೇಕು ಎಂಬ ನಿಲುವಿಗೆ ಬರಲಾಗಿದೆ. ಸಭೆಯಲ್ಲಿ ನಡೆದ ಮಹತ್ವದ ಮಾತುಕತೆ ಮುಂಬರುವ ಚುನಾವಣೆಗೆ ಸಂಬಂಧಿಸಿದ್ದು.
ಆದರೆ ಮೂಲಗಳ ಪ್ರಕಾರ ಮೋದಿ ಕುರಿತು ನಿತೀಶ್ ತನ್ನ ಹಿಂದಿನ ನಿಲುವನ್ನೇ ಪುನರುಚ್ಛರಿಸಿದ್ದಾರೆ. ಮೋದಿಯವರನ್ನು ಬಿಹಾರ ಚುನಾವಣೆಯ ಜಂಟಿ ಪ್ರಚಾರಕ್ಕೆ ಆಹ್ವಾನಿಸುವ ಕುರಿತು ನಿತೀಶ್ ತನ್ನದೇ ಮಿತಿಯನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ.
ಇದಕ್ಕೆ ಬಿಜೆಪಿ ನಾಯಕರು ಕೂಡ ಭಾಗಶಃ ಒಪ್ಪಿಗೆ ಸೂಚಿಸಿದ್ದಾರೆ. ಎನ್‌ಡಿಎ ಮೈತ್ರಿಕೂಟ ಮತ್ತು ಚುನಾವಣೆಗಳಿಗೆ ಸಹಕಾರವಾಗಲಿದ್ದಾರೆ ಎಂದು ಪಕ್ಷ ವಿಶ್ವಾಸವಿಟ್ಟಿರುವ ನಾಯಕರನ್ನು ಮಾತ್ರ ಬಿಹಾರದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಆಹ್ವಾನಿಸಲಾಗುತ್ತದೆ ಎಂದು ಭರವಸೆಯನ್ನೂ ನೀಡಿದ್ದಾರೆ. ಇದನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನಿರ್ಧರಿಸುತ್ತಾರೆ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಮೂಲಗಳು ಹೇಳಿವೆ.