ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಫ್ಜಲ್ ಗುರುವನ್ನು ನೇಣಿಗೆ ಹಾಕಬೇಕು: ಮುಸ್ಲಿಂ ಮುಖಂಡ (Parliament attack convict | Afzal Guru | Maulana Mahmood Madani | Muslims)
Bookmark and Share Feedback Print
 
ಮರಣದಂಡನೆಗಾಗಿ ಕಾಯುತ್ತಿರುವ ಸಂಸತ್ ದಾಳಿ ರೂವಾರಿ ಅಫ್ಜಲ್ ಗುರುವಿಗೆ ದೇಶದ ನ್ಯಾಯಾಂಗ ವ್ಯವಸ್ಥೆ ನಿರ್ಧರಿಸಿದ ಶಿಕ್ಷೆಯನ್ನು ನೀಡಬೇಕು ಎಂದು ಮುಸ್ಲಿಂ ಸಂಘಟನೆಯೊಂದರ ಉನ್ನತ ಮುಖಂಡರೊಬ್ಬರು ತಿಳಿಸಿದ್ದಾರೆ.

ಅಫ್ಜಲ್‌ಗೆ ಮರಣ ದಂಡನೆ ವಿಧಿಸುವುದಕ್ಕೆ ಮುಸ್ಲಿಮರಿಂದ ತೀವ್ರ ಪ್ರತಿರೋಧವಿದೆ ಎಂದು ಗ್ರಹಿಸುತ್ತಿರುವವರು ವಾಸ್ತವದಲ್ಲಿ ಈ ಪ್ರಕರಣದಿಂದ ರಾಜಕೀಯ ಲಾಭವನ್ನು ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆಯೇ ಹೊರತು ಬೇರೇನಲ್ಲ ಎಂದು 'ಜಮಾತ್ ಉಲೇಮಾ ಇ ಹಿಂದ್' ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಮಹಮದ್ ಮದನಿ ಅಭಿಪ್ರಾಯಪಟ್ಟಿದ್ದಾರೆ.

ಹಿಂದಿ ಸುದ್ದಿವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ಅವರು, 'ಅಫ್ಜಲ್ ಗಲ್ಲು ಶಿಕ್ಷೆಯನ್ನು ಮುಸ್ಲಿಮರು ವಿರೋಧಿಸುತ್ತಾರೆ ಎಂದು ನನಗೆ ಅನ್ನಿಸುತ್ತಿಲ್ಲ. ಕೆಲವು ಕಿಡಿಗೇಡಿಗಳು ಇದನ್ನು ವಿರೋಧಿಸಬಹುದು, ಹಾಗೆಂದು ಸಮುದಾಯವಲ್ಲ' ಎಂದರು.

ನಮ್ಮ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯಿದೆ ಮತ್ತು ಅದರ ಮೇಲೆ ಜನತೆ ಸಂಪೂರ್ಣ ನಂಬಿಕೆ ಹೊಂದಿದ್ದಾರೆ, ಅದರಲ್ಲೇ ವಿಶ್ವಾಸ ಇಟ್ಟಿದ್ದಾರೆ. ನ್ಯಾಯಾಂಗ ಪ್ರಕ್ರಿಯೆಯ ನಂತರ ಆ ವ್ಯಕ್ತಿ ಅಪರಾಧಿಯೆಂಬುದು ಸಾಬೀತಾಗಿದೆ ಎಂದು ಮದನಿ ಹೇಳಿದ್ದಾರೆ.

ನಂತರ ಅಫ್ಜಲ್ ಗುರುವನ್ನು ಹೆಸರಿಸದೆ ಮಾತನಾಡಿರುವ ಮದನಿ, 'ಯಾವುದೇ ವ್ಯಕ್ತಿ ಅಪರಾಧವನ್ನು ಮಾಡಿರುವುದು ಹೌದಾದರೆ, ಆತನನ್ನು ಯಾವುದೇ ವಿನಾಯಿತಿ ನೀಡದೆ ಶಿಕ್ಷೆಗೊಳಪಡಿಸಲೇಬೇಕು ಎಂದು ನಾನು ಧೈರ್ಯದಿಂದ ಹೇಳಬಲ್ಲೆ. ನ್ಯಾಯ ಸಿಗಲೇ ಬೇಕು' ಎಂದರು.

ಅದೇ ಹೊತ್ತಿಗೆ ಅಫ್ಜಲ್‌ನನ್ನು ನೇಣಿಗೆ ಹಾಕುವುದನ್ನು ವಿರೋಧಿಸುತ್ತೇವೆ ಎನ್ನುವ ಮೂಲಕ ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಹೆಸರು ತರುವ ಯತ್ನ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಅವರು, ಹೌದು ಎಂದು ಉತ್ತರಿಸಿದ್ದಾರೆ.

ನಮ್ಮ ಸಮುದಾಯಕ್ಕೆ ಕೆಟ್ಟ ಹೆಸರು ತರುವ ಒಂದು ಮಾರ್ಗವದು. ಆ ಮೂಲಕ ಅವರು ರಾಜಕೀಯ ಲಾಭವನ್ನು ಮಾಡಿಕೊಳ್ಳಲು ಬಯಸುತ್ತಿದ್ದಾರೆ ಎಂದರೂ, ಅಫ್ಜಲ್‌ ಗುರುವನ್ನು ಗಲ್ಲಿಗೆ ಹಾಕಿದರೆ ಸಮುದಾಯದಿಂದ ಪ್ರತಿಭಟನೆ ಅಥವಾ ಹಿಂಸಾಚಾರ ನಡೆಯದೇ ಇರದು ಎಂಬ ಕುರಿತು ನಾನು ಯಾವುದೇ ಖಾತರಿ ನೀಡಲಾರೆ ಎನ್ನುವ ಮೂಲಕ ಗೊಂದಲ ಪೂರಿತ ಹೇಳಿಕೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ