ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 10 ರೂಪಾಯಿ ನಾಣ್ಯಗಳನ್ನು ನೀವೆಲ್ಲಾದರೂ ಕಂಡಿರಾ? (10 Rs coin | Reserve Bank | India | RBI)
Bookmark and Share Feedback Print
 
ವರ್ಷದ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕ್ ಎಂಬತ್ತು ಕೋಟಿ ರೂಪಾಯಿ ಮೌಲ್ಯದ ಹತ್ತು ರೂಪಾಯಿಗಳ ನಾಣ್ಯಗಳನ್ನು ಬಿಡುಗಡೆ ಮಾಡಿ ಬೆನ್ನು ತಟ್ಟಿಕೊಂಡಿತ್ತು. ಆದರೆ ದೇಶದಾದ್ಯಂತ ಈ ನಾಣ್ಯಗಳ ಹರಿವು ಕಾಣ ಸಿಗುತ್ತಿಲ್ಲ. ಚಲಾವಣೆಯಲ್ಲಿ ಅಪರೂಪವಾಗುತ್ತಿರುವ ಈ ನಾಣ್ಯಗಳು ಎಲ್ಲಿ ಹೋಗಿವೆ ಎನ್ನುವ ಪ್ರಶ್ನೆಗೆ ಮಾತ್ರ ಉತ್ತರ ಸಿಗುತ್ತಿಲ್ಲ.
PR

10 ರೂಪಾಯಿಯ ನೋಟಿನ ಬದಲಿಗೆ ಎಂಟು ಗ್ರಾಮ್ ತೂಕದ ಚಿನ್ನ ಲೇಪಿತ ಅಂಚನ್ನು ಹೊಂದಿರುವ ಪಾವಲಿಯನ್ನು ರಿಸರ್ವ್ ಬ್ಯಾಂಕ್ ಹೊರ ತಂದಿತ್ತು. ಸುಮಾರು ಎಂಟು ಕೋಟಿ ನಾಣ್ಯಗಳನ್ನು ಬಿಡುಗಡೆ ಮಾಡಿ, ಇದು ಯಶಸ್ವಿಯಾಗಲಿದೆ ಎಂದೂ ಆರ್‌ಬಿಐ ಹೇಳಿಕೊಂಡಿತ್ತು. ಆದರೆ ಪ್ರಸಕ್ತ ಮಾರುಕಟ್ಟೆಯಲ್ಲಿ ಇದು ಕಾಣಿಸುತ್ತಿಲ್ಲ.

ಈ ಬಗ್ಗೆ ತಜ್ಞರು ಭಿನ್ನ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾರೆ. ಭಾರತವು ಬಿಡುಗಡೆ ಮಾಡಿರುವ 10 ರೂಪಾಯಿಯ ನಾಣ್ಯ ಯೂರೋ ಪಾವಲಿಯನ್ನು ಹೋಲುತ್ತಿರುವುದರಿಂದ ಜನ ಕೈಗೆ ಸಿಕ್ಕ ನಂತರ ಅದನ್ನು ಚಲಾಯಿಸುವ ಬದಲು ಸಂಗ್ರಹ ಮಾಡುತ್ತಾರೆ. ಅಲ್ಲದೆ ಇದು ಹೆಚ್ಚು ಜನಪ್ರಿಯವಾಗಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಕೆನರಾ ಬ್ಯಾಂಕ್ ಹಿರಿಯ ಅಧಿಕಾರಿ ರಾಜ್ ಕುಮಾರ್ ಅವರ ಪ್ರಕಾರ, 10 ರೂಪಾಯಿಯ ಪಾವಲಿ ಜನಪ್ರಿಯವಾಗಿಲ್ಲ. ಇದಕ್ಕಿರುವ ಕಾರಣ ನೋಟು ಸುಲಭವಾಗಿ ಸಿಗುತ್ತಿರುವುದು ಮತ್ತು ನೋಟಿಗಿಂತ ನಾಣ್ಯವನ್ನು ಕಿಸೆಯಲ್ಲಿಟ್ಟುಕೊಳ್ಳುವುದು ಕಷ್ಟ ಎಂಬುದು ಜನರಿಗೆ ಭಾಸವಾಗಿರುವುದು.

ಅದೇ ಹೊತ್ತಿಗೆ ಒಂದು ಮತ್ತು ಎರಡು ರೂಪಾಯಿಗಳ ನಾಣ್ಯಗಳಿಗೆ ಬೇಡಿಕೆ ಹಿಂದಿಗಿಂತಲೂ ಹೆಚ್ಚಾಗಿದೆ ಎನ್ನುತ್ತಾರೆ ಅವರು. ಪ್ರಸಕ್ತ ಸ್ಥಿತಿಯಲ್ಲಿ ಆ ಎರಡು ಮೌಲ್ಯಗಳ ನೋಟುಗಳು ಅಲಭ್ಯವಾಗಿರುವುದು ಅಥವಾ ಲಭ್ಯವಿದ್ದರೂ ಕೆಟ್ಟ ಸ್ಥಿತಿಯಲ್ಲಿರುವುದು ಇದಕ್ಕೆ ಮಹತ್ವದ ಕಾರಣ. ಇದೇ ಪರಿಸ್ಥಿತಿ ಐದು ರೂಪಾಯಿ ನಾಣ್ಯಗಳಲ್ಲೂ ನಿರ್ಮಾಣವಾಗಿದೆ ಎಂದು ಕುಮಾರ್ ವಿವರಿಸಿದ್ದಾರೆ.

ಆದರೆ ಇದಕ್ಕೆ ವ್ಯತಿರಿಕ್ತ ಪ್ರತಿಕ್ರಿಯೆ ನೀಡುತ್ತಿದೆ ರಿಸರ್ವ್ ಬ್ಯಾಂಕ್. ಅದರ ಪ್ರಕಾರ 10 ರೂಪಾಯಿಗಳ ನಾಣ್ಯಗಳ ಪೂರೈಕೆ ಸುವ್ಯವಸ್ಥಿತ ರೀತಿಯಲ್ಲಿದೆ. ಇತರ ನಾಣ್ಯಗಳಂತೆ ಈ ನಾಣ್ಯವೂ ಮುಂದೊಂದು ದಿನ ಜನಪ್ರಿಯವಾಗಲಿದೆ ಎಂದು ಅದರ ಅಧಿಕಾರಿಗಳು ಹೇಳುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ