ಉತ್ತರ ಪ್ರದೇಶದ ಸಂಪುಟ ಸಚಿವರ ಮನೆ ಸಮೀಪ ಅಪರಿಚಿತ ವ್ಯಕ್ತಿಗಳು ನಡೆಸಿದ ಬಾಂಬ್ ಮತ್ತು ಗುಂಡಿನ ದಾಳಿಗೆ ಇಬ್ಬರು ಭದ್ರತಾ ಸಿಬ್ಬಂದಿಗಳು ಬಲಿಯಾಗಿದ್ದಾರೆ ಮತ್ತು ಸಚಿವರೂ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ಉತ್ತರ ಪ್ರದೇಶ ಹಣಕಾಸು, ಸ್ಟ್ಯಾಂಪ್ ಮತ್ತು ನ್ಯಾಯಾಂಗ ತೆರಿಗೆ ಸಚಿವ ನಂದ ಗೋಪಾಲ್ ಗುಪ್ತಾ ಯಾನೆ ನಂದಿ ಎಂಬವರೇ ಗಂಭೀರವಾಗಿ ಗಾಯಗೊಂಡವರು. ಮೂಲಗಳ ಪ್ರಕಾರ ಅವರು ಕೋಮಾ ಸ್ಥಿತಿಗೆ ತಲುಪಿದ್ದಾರೆ, ಎದೆ ಮತ್ತು ತಲೆಗೆ ಏಟುಗಳಾಗಿವೆ. ಗುಂಡೇಟು ಕೂಡ ಬಿದ್ದಿದೆ.
ಸಚಿವರು ಅಲಹಾಬಾದ್‌ನಲ್ಲಿನ ತನ್ನ ಮನೆಯಿಂದ ಸ್ಥಳೀಯ ದೇವಸ್ಥಾನಕ್ಕೆ ಹೋಗಲೆಂದು ಹೊರಟಿದ್ದಾಗ ಗೇಟಿನ ಬಳಿಯಿದ್ದ ಮೋಟಾರ್ ಸೈಕಲ್ ಸ್ಫೋಟಗೊಂಡಿತ್ತು. ಆ ಹೊತ್ತಿಗೆ ನಾಲ್ವರು ಅಪರಿಚಿತ ಆಕ್ರಮಣಕಾರರು ಸಚಿವರ ಮೇಲೆ ಗುಂಡಿನ ದಾಳಿಯನ್ನೂ ನಡೆಸಿದ್ದಾರೆ.
ಸ್ಫೋಟಕ್ಕೆ ಬಳಸಿರುವುದು ಕಚ್ಚಾ ಬಾಂಬ್ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ ಬಾಂಬುಗಳನ್ನು ಅವರನ್ನು ಗುರಿ ಮಾಡಿ ಎಸೆಯಲಾಗಿತ್ತು.
ಘಟನೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದು, ಇತರ ಐವರು ಗಾಯಗೊಂಡಿದ್ದಾರೆ. ಸಚಿವರನ್ನು ತಕ್ಷಣವೇ ಇಲ್ಲಿನ ಜೀವನ್ ಜ್ಯೋತಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಎಸ್‌ಪಿ ಶಾಸಕರಾಗಿರುವ 36ರ ಹರೆಯದ ನಂದಿ ಹತ್ತು ಹಲವು ವಿಚಾರಗಳಲ್ಲಿ ಗಮನ ಸೆಳೆಯುತ್ತಾ ಬಂದವರು. ಮೊದಲ ಬಾರಿ ಕಣಕ್ಕಿಳಿದಾಗಲೇ ಕಾಂಗ್ರೆಸ್‌ನ ರೀಟಾ ಬಹುಗುಣ ಜೋಷಿ ಮತ್ತು ಬಿಜೆಪಿಯ ಕೇಸರಿ ನಾಥ್ ತ್ರಿಪಾಠಿ ಎಂಬ ಇಬ್ಬರು ದಿಗ್ಗಜರನ್ನು ಅಲಹಾಬಾದ್ ದಕ್ಷಿಣ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಅವರು ಸೋಲಿಸಿದ್ದರು.