ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವೈಎಸ್ಆರ್ ಸಂಬಂಧಿಕರಿಂದ ಅಕ್ರಮ ಗಣಿಗಾರಿಕೆ; ಗದ್ದಲ
(AP assembly | illegal mining | Barytes | Y S Rajasekhara Reddy)
ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿಯವರ ಸಂಬಂಧಿಕರಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇದು ಕರ್ನಾಟಕ ಗಡಿ ಪ್ರದೇಶದಲ್ಲಿನ ಹಗರಣವನ್ನೂ ಮೀರಿದ್ದಾಗಿದೆ; ಈ ಕುರಿತು ಸದನ ಸಮಿತಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಎಂದು ವಿರೋಧ ಪಕ್ಷಗಳು ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಕೋಲಾಹಲ ಎಬ್ಬಿಸಿವೆ.
ವೈಎಸ್ಆರ್ ಅಳಿಯ ಅನಿಲ್ ಕುಮಾರ್ ಮತ್ತು ಬಾವ ರವೀಂದ್ರನಾಥ ರೆಡ್ಡಿಯವರ ಸಹಭಾಗಿತ್ವದಲ್ಲಿ ಖಮ್ಮಮ್ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಅಮೂಲ್ಯ ಬೇರಿಯಂ ಗಣಿಗಾರಿಕೆ ಅಕ್ರಮವಾಗಿ ನಡೆಸಲಾಗುತ್ತಿದೆ. ಈ ಕುರಿತು ಸದನ ಸಮಿತಿಯಿಂದ ತನಿಖೆ ನಡೆಯಬೇಕು ಎಂದು ಟಿಡಿಪಿ ಸದಸ್ಯರು ಒತ್ತಾಯಿಸಿದರು.
ಆದರೆ ಟಿಡಿಪಿ ಶಾಸಕರ ಬೇಡಿಕೆಯನ್ನು ಸರಕಾರ ತಳ್ಳಿ ಹಾಕಿತು. ಇದರಿಂದ ಕೆರಳಿದ ಸದಸ್ಯರು ಸಭಾಧ್ಯಕ್ಷರ ಎದುರಿಗಿನ ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗುತ್ತಾ ಗದ್ದಲದ ವಾತಾವರಣ ನಿರ್ಮಿಸಿದರು.
ಸ್ಪೀಕರ್ ಮಾತಿಗೆ ಜಗ್ಗದ ಟಿಪಿಡಿ ಸದಸ್ಯರು ಬೇಡಿಕೆ ಮುಂದುವರಿಸಿದ ಕಾರಣ ಸ್ಪೀಕರ್ ಸ್ಥಾನದಲ್ಲಿದ್ದ ಉಪ ಸ್ಪೀಕರ್ ನಡೆಂದ್ಲಾ ಮನೋಹರ್, ಸದನವನ್ನು ಎರಡೆರಡು ಬಾರಿ ಮುಂದೂಡಿದ್ದಾರೆ.
ಕೋತಗುಡೆಂ ಸಿಪಿಐ ಶಾಸಕ ಕೆ. ಸಾಂಬಶಿವ ರಾವ್ ಆರಂಭದಲ್ಲಿ ಬೇರಿಯಂ ಅಕ್ರಮ ಗಣಿಗಾರಿಕೆ ಕುರಿತು ಪ್ರಸ್ತಾಪಿಸಿದ್ದರು. ಇದು ಕರ್ನಾಟಕ-ಆಂಧ್ರಪ್ರದೇಶ ಗಡಿಯಲ್ಲಿ ಬಳ್ಳಾರಿ ಜನಾರ್ದನ ರೆಡ್ಡಿ ಸಹೋದರರಿಂದ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನೂ ಮೀರಿಸಿದ್ದಾಗಿದೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿಯವರ ಸಂಬಂಧಿಕರಿಂದ ಇಲ್ಲಿ ಸುಮಾರು 1.37 ಲಕ್ಷ ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ಬೇರಿಯಂ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ವೈಎಸ್ಆರ್ ಸಂಬಂಧಿಕ ಹಾಗೂ ರಾಜ್ಯ ಗಣಿಗಾರಿಕಾ ಸಚಿವ ಬಿ. ಶ್ರೀನಿವಾಸ ರೆಡ್ಡಿ ಪ್ರತಿಪಕ್ಷಗಳ ಆರೋಪವನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ಇಲ್ಲಿ ರಾಜ್ಯ ಸರಕಾರದ ಆಧೀನದಲ್ಲಿರುವ ಸಂಸ್ಥೆಯು ಗಣಿಗಾರಿಕೆ ನಡೆಸುತ್ತಿದೆ ಎಂದು ಸ್ಪಷ್ಟನೆ ನೀಡಿದರು.
'ರಕ್ಷಣಾ ಸ್ಟೀಲ್ಸ್' ಎಂಬ ಖಾಸಗಿ ಕಂಪನಿಯು ಇಲ್ಲಿನ ಅದಿರನ್ನು ಸಾಗಾಟ ಮಾಡಲು ಮಾತ್ರ ಸೀಮಿತವೇ ಹೊರತು, ಇದು ಗಣಿಗಾರಿಕೆ ನಡೆಸುತ್ತಿಲ್ಲ. ಹಾಗಾಗಿ ಸದನ ಸಮಿತಿ ತನಿಖೆಯ ಅಗತ್ಯ ಕಂಡು ಬರುತ್ತಿಲ್ಲ ಎಂದು ರೆಡ್ಡಿ ಹೇಳಿದರು.
ಆದರೆ ಇದರಿಂದ ತೃಪ್ತರಾಗದ ಸಿಪಿಐ ಮತ್ತು ಟಿಡಿಪಿ ಸದಸ್ಯರು ಸದನ ಸಮಿತಿ ತನಿಖೆ ನಡೆಯಬೇಕೆಂಬ ಬೇಡಿಕೆಯನ್ನು ತೀವ್ರಗೊಳಿಸಿದ್ದಾರೆ.