ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶೀಘ್ರದಲ್ಲೇ ಎನ್ಆರ್ಐಗಳಿಗೆ ಮತದಾನದ ಹಕ್ಕು: ಮೊಯ್ಲಿ
(NRIs to get voting rights | Veerappa Moily | India | Veerappa Moily)
ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕುಗಳನ್ನು ನೀಡುವ ಯೋಜನೆ ಭಾರತ ಸರಕಾರಕ್ಕಿದೆ ಎಂದಿರುವ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ, ಅದನ್ನು ಜಾರಿಗೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಎನ್ಆರ್ಐಗಳಿಗೆ ಮತದಾನದ ಹಕ್ಕುಗಳನ್ನು ನೀಡುವ ಮಹತ್ವಾಕಾಂಕ್ಷೆಯ ಯೋಜನೆಗೆ ಕಾನೂನು ಸಚಿವಾಲಯವು ಚಾಲನೆ ನೀಡಿದೆ. ಇದು ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಸಾಗರೋತ್ತರ ಭಾರತೀಯರ ಕಾಂಗ್ರೆಸ್ (ಬ್ರಿಟನ್) ಸದಸ್ಯರನ್ನು ಉದ್ದೇಶಿಸಿ ಲಂಡನ್‌ನಲ್ಲಿ ಮೊಯ್ಲಿ ಹೇಳಿದರು.
ಅನಿವಾಸಿ ಭಾರತೀಯರಿಗೆ ಭಾರತದಲ್ಲಿ ಮತದಾನದ ಹಕ್ಕು ನೀಡುವ ವಿಚಾರ ದೀರ್ಘ ಕಾಲದಿಂದ ಕೇವಲ ಭರವಸೆಯಾಗಿಯೇ ಉಳಿದಿದೆಯಲ್ಲವೇ ಎಂದು ಇಲ್ಲಿನ ಇಂಡಿಯನ್ ಜಿಂಖಾನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಗರೋತ್ತರ ಭಾರತೀಯ ಕಾಂಗ್ರೆಸ್ ಅಧ್ಯಕ್ಷ ಡಿ.ಎಲ್. ಕಲ್ಹಾನ್ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಸಚಿವರು, 'ಇದಕ್ಕೆ ಸಂಬಂಧಪಟ್ಟ ಶಾಸನವನ್ನು ಶೀಘ್ರದಲ್ಲೇ ರೂಪಿಸಲಾಗುತ್ತದೆ' ಎಂದರು.
ಮೊಯ್ಲಿಯವರ ಗೌರವಾರ್ಥ ಇಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಎನ್ಆರ್ಐಗಳು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಮತದಾನದ ಸಂದರ್ಭದಲ್ಲಿ ಅನಿವಾಸಿ ಭಾರತೀಯರು ಭಾರತಕ್ಕೆ ಬರಬೇಕಾಗುತ್ತದೆ ಎಂದೂ ಸಚಿವರು ಹೇಳಿದ್ದಾರೆ.
ಅದೇ ಹೊತ್ತಿಗೆ ಭಾರತ ಸರಕಾರ ವಿವಿಧ ದೇಶಗಳಲ್ಲಿ ಹೊಂದಿರುವ ಕಚೇರಿಯಲ್ಲಿನ ಸಿಬ್ಬಂದಿಗಳಿಗೂ ಮತದಾನದ ವ್ಯವಸ್ಥೆಯನ್ನು ಮಾಡುವ ಕುರಿತು ಸರಕಾರ ಗಂಭೀರವಾಗಿ ಯೋಚಿಸುತ್ತಿದೆ. ಅಂದಾಜುಗಳ ಪ್ರಕಾರ ಸುಮಾರು 2.2 ಕೋಟಿ ಅನಿವಾಸಿ ಭಾರತೀಯರು ವಿಶ್ವದೆಲ್ಲೆಡೆ ಹಂಚಿ ಹೋಗಿದ್ದಾರೆ ಎಂದು ಹೇಳಲಾಗಿದೆ.
ಇತರ ದೇಶಗಳ ಪೌರತ್ವವನ್ನು ಪಡೆದಿರುವ ಭಾರತೀಯ ಮೂಲದವರಿಗೆ ಮತದಾನದ ಹಕ್ಕನ್ನು ನೀಡಲಾಗುವುದಿಲ್ಲ. ಯಾವುದೇ ದೇಶದ ಪೌರತ್ವವನ್ನು ಸ್ವೀಕರಿಸದಿರುವ ಭಾರತೀಯರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ ಎಂದು ಸಚಿವ ಮೊಯ್ಲಿ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.