ಸಂಸದ ಜಗನ್ ಮೋಹನ್ ರೆಡ್ಡಿ ಸಾಂತ್ವನ ಯಾತ್ರೆ ಕುರಿತಂತೆ ಕಾಂಗ್ರೆಸ್ ಮುಖಂಡರ ಟೀಕಾಪ್ರಹಾರ ಮುಂದುವರಿದಿದ್ದು, ಜಗನ್ ವೈ.ಎಸ್.ರಾಜಶೇಖರ ರೆಡ್ಡಿ ಅವರ ಕುಟುಂಬದ ಉತ್ತರಾಧಿಕಾರಿ ವಿನಃ, ವೈಎಸ್ಆರ್ ರಾಜಕೀಯ ಉತ್ತರಾಧಿಕಾರಿ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
ಜಗನ್ ಇನ್ನೂ ಯುವಕ, ಹಾಗಾಗಿ ಮುಖ್ಯಮಂತ್ರಿಗಾದಿಗಾಗಿ ಹೆಚ್ಚು ಆತುರ ಪಡಬಾರದು ಎಂದು ಮುಖ್ಯಮಂತ್ರಿ ಕೆ.ರೋಸಯ್ಯ ಜಗನ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಅದಕ್ಕೆ ತಿರುಗೇಟು ಎಂಬಂತೆ, ತಾನು ಮುಖ್ಯಮಂತ್ರಿಗಾದಿಗಾಗಿ ಸಾಂತ್ವನ ಯಾತ್ರೆ ಮಾಡುತ್ತಿಲ್ಲ ಎಂದು ಜಗನ್ ಪ್ರತಿಕ್ರಿಯೆ ನೀಡಿದ್ದರು.
ಆದರೆ ಜಗನ್ ಸಾಂತ್ವನ ಯಾತ್ರೆ ಮುಂದುವರಿದಂತೆ ಕಾಂಗ್ರೆಸ್ ಮುಖಂಡರ ವಾಗ್ದಾಳಿಯೂ ಮುಂದುವರಿದಿದೆ. ಕಾಂಗ್ರೆಸ್ ತನ್ನದೇ ಆದ ಮತಬ್ಯಾಂಕ್ ಹೊಂದಿದೆ. ಯಾರು ಯಾತ್ರೆ ಕೈಗೊಂಡರೂ ಜನ ಸೇರುತ್ತಾರೆ. ಜಗನ್ ನಿಜವಾಗಲೂ ಸಮರ್ಥರೇ ಆಗಿದ್ದಲ್ಲಿ ಪಕ್ಷದಿಂದ ಹೊರಬಂದು ತಮ್ಮ ಸಾಮರ್ಥ್ಯ ಸಾಬೀತುಪಡಿಸಲಿ ಎಂದು ನಿಜಾಮಾಬಾದ್ ಕಾಂಗ್ರೆಸ್ ಸಂಸದ ಮಧು ಯಕ್ಷಿ ಗೌಡ್ ಸವಾಲು ಹಾಕಿದ್ದಾರೆ.