ಈಗಾಗಲೇ ಪಾನ್ ಕಾರ್ಡ್ ಪಡೆದುಕೊಳ್ಳುವಲ್ಲಿ ಹಿಂದೂ ದೇವತೆಗಳು ಸಫಲರಾಗಿದ್ದಾರೆ. ಮುಂದಿನ ಹೆಜ್ಜೆ ಡಿಮ್ಯಾಟ್ ಅಕೌಂಟ್. ಇದೇನಪ್ಪಾ ದೇವರ ಹೆಸರಿನಲ್ಲೂ ಹೀಗೆಲ್ಲಾ ನಡೆಯುತ್ತಾ ಅಂತೀರಾ?
PR
ಇಂತಹ ಒಂದು ವಿಚಿತ್ರ ಪ್ರಕರಣ ನಡೆದಿರುವುದು ಮುಂಬೈಯ ಸಾಂಗ್ಲಿಯಲ್ಲಿ. ಇಲ್ಲಿನ ಗಣಪತಿ ಪಂಚಾಯತಂ ಸಂಸ್ಥಾನ ಎಂಬ ಟ್ರಸ್ಟ್‌ನ ಭಗವಾನ್ಗಣೇಶ, ಚಿಂತಾಮನೇಶ್ವರ್ ದೇವ್, ಚಿಂತಾಮನೇಶ್ವರಿ ದೇವಿ, ಸೂರ್ಯ ನಾರಾಯಣ ದೇವ್ ಮತ್ತು ಲಕ್ಷ್ಮಿ ನಾರಾಯಣ ದೇವ್ ಎಂಬ ಐವರು ದೇವರುಗಳ ಹೆಸರಿನಲ್ಲಿ ಈಗಾಗಲೇ ಪಾನ್ ಕಾರ್ಡ್ ಪಡೆದುಕೊಳ್ಳಲಾಗಿದೆ.
ಆದರೆ ಈ ದೇವರುಗಳ ಹೆಸರಿನಲ್ಲಿ ಡಿಮ್ಯಾಟ್ ಖಾತೆ ತೆರೆಯಲು ಎನ್ಎಸ್‍ಡಿಎಲ್ (ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್) ನಿರಾಕರಿಸಿದ ಕಾರಣ ಟ್ರಸ್ಟ್ ಇದೀಗ ಬಾಂಬೆ ಹೈಕೋರ್ಟ್ ಮೊರೆ ಹೋಗಿದೆ.
ಆದಾಯ ತೆರಿಗೆ ಇಲಾಖೆಯು ಈ ಐವರು ದೇವರಿಗೆ ಪಾನ್ ಕಾರ್ಡ್ ನೀಡುವುದಾದರೆ, ಎನ್ಎಸ್‌ಡಿಎಲ್ ಡಿಮ್ಯಾಟ್ ಅಕೌಂಟ್ ತೆರೆಯಲು ಯಾಕೆ ಅವಕಾಶ ನೀಡಬಾರದು ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಇದೇ ವಾರದಂತ್ಯದಲ್ಲಿ ಪ್ರಕರಣ ವಿಚಾರಣೆಗೆ ಬರಲಿದೆ.
ಸಾಂಗ್ಲಿಯ ಹಿಂದಿನ ರಾಜ ಮನೆತನದ ಪಟವರ್ಧನ್ ಕುಟುಂಬಕ್ಕೆ ಸೇರಿದ ಈ ಟ್ರಸ್ಟ್ ದೇವರುಗಳ ಹೆಸರಿನಲ್ಲಿ 2008ರಲ್ಲೇ ಪಾನ್ ಕಾರ್ಡ್‌ಗಳನ್ನು ಪಡೆದುಕೊಂಡಿತ್ತು. ಇತ್ತೀಚೆಗಷ್ಟೇ ಡಿಮ್ಯಾಟ್ ಖಾತೆಗಳು ಬೇಕೆಂದು ಎನ್‌ಎಸ್‌ಡಿಎಲ್ ಮೊರೆ ಹೋಗಲಾಗಿತ್ತು. ಆದರೆ ಡಿಮ್ಯಾಟ್ ಖಾತೆ ನೀಡಲಾಗದು ಎಂದು ಸಂಸ್ಥೆ ಸ್ಪಷ್ಟಪಡಿಸಿತ್ತು.
ಹಲವು ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್ ವಿವಿಧ ಪ್ರಕರಣಗಳಲ್ಲಿ ಹಿಂದೂ ದೇವರುಗಳ ಹೆಸರಿನಲ್ಲಿ ಆಸ್ತಿ ಹೊಂದುವ ಅಧಿಕಾರವನ್ನು ನೀಡಿರುವ ತೀರ್ಪನ್ನು ಹೊರಗೆಡವಿರುವುದರಿಂದ ಡಿಮ್ಯಾಟ್ ಖಾತೆಗೂ ಅವಕಾಶ ನೀಡಬೇಕೆಂದು ಈ ಸಂದರ್ಭದಲ್ಲಿ ಟ್ರಸ್ಟ್ ವಾದಿಸುತ್ತಿದೆ.
ಟ್ರಸ್ಟ್‌ನ ಕಾನೂನು ಸಲಹೆಗಾರ ಉದಯ್ ವರುಂಜ್ಕರ್ ಅವರ ಪ್ರಕಾರ ಶೇರುಗಳು, ಡಿಬೆಂಚರುಗಳು ಮತ್ತು ಮ್ಯೂಚುವಲ್ ಫಂಡುಗಳನ್ನು ಆಸ್ತಿಯೆಂದೇ ಪರಿಗಣಿಸಲಾಗುತ್ತದೆ. ಆಸ್ತಿಯನ್ನು ಹೊಂದುವ ಹಕ್ಕು ದೇವರುಗಳಿಗಿರುವುದರಿಂದ ನಾವೀಗ ಮುಂದಿಟ್ಟಿರುವ ಬೇಡಿಕೆಗಳನ್ನೂ ಒದಗಿಸಬಹುದಾಗಿದೆ ಎನ್ನುತ್ತಾರೆ.