ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಣಿ ರೆಡ್ಡಿಗಳ ವಿರುದ್ಧ ರಾಜ್ಯಪಾಲರಿಂದ ಕೇಂದ್ರಕ್ಕೆ ದೂರು (Karnataka | Karnataka Assembly | illegal mining | H R Bharadwaj)
Bookmark and Share Feedback Print
 
ಕರ್ನಾಟಕ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಅಕ್ರಮ ಗಣಿಗಾರಿಕೆ ಕುರಿತು ಕೋಲಾಹಲ ಮುಂದುವರಿಯುತ್ತಿದ್ದಂತೆಯೇ ಇತ್ತ ರಾಜ್ಯಪಾಲರು ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಕುತೂಹಲ ಹುಟ್ಟಿಸಿದ್ದಾರೆ.

ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಪಾಲ ಎಚ್.ಆರ್. ಭಾರದ್ವಾಜ್, ಭ್ರಷ್ಟಾಚಾರದಲ್ಲಿ ತೊಡಗಲು ಯಾರಿಗೂ ಅವಕಾಶ ನೀಡಲಾಗದು. ಯಾರೂ ಭ್ರಷ್ಟಾಚಾರ ನಡೆಸಲಾಗದು. ಆ ನಿಟ್ಟಿನಲ್ಲಿ ನನ್ನ ಜವಾಬ್ದಾರಿಗಳನ್ನು ನಾನು ನಿರ್ವಹಿಸುತ್ತಿದ್ದೇನೆ ಎಂದರು.

ಇಂದು ಬೆಳಿಗ್ಗೆ ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ಅವರನ್ನು ಭೇಟಿ ಮಾಡಿ ಉಪಹಾರ ಸ್ವೀಕರಿಸಿದ ರಾಜ್ಯಪಾಲರು, ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿ ಮತ್ತು ಬಳ್ಳಾರಿ ಗಣಿ ಸಚಿವರುಗಳ ಲಾಭದಾಯಕ ಹುದ್ದೆಗಳು ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.

ಆದರೆ ತನ್ನ ಹೇಳಿಕೆಯಲ್ಲಿ ಯಾರೊಬ್ಬರ ಹೆಸರನ್ನೂ ಅವರು ಪ್ರಸ್ತಾಪಿಸಲು ನಿರಾಕರಿಸಿದ್ದಾರೆ.

ಈ ವಿಚಾರಗಳ ಕುರಿತು ನಾನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದೇನೆ. ಸಚಿವರನ್ನು ನೇಮಕ ಮಾಡಿರುವ ನೀವು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದೇನೆ. ಅದಕ್ಕೆ ಸಮಯಾವಕಾಶ ನೀಡಿ ಎಂದಿದ್ದಾರೆ. ಅವರು ಯಾವುದೂ ಸಾಧ್ಯವಿಲ್ಲ ಎಂದು ಹೇಳಿಲ್ಲ ಎಂದು ಭಾರದ್ವಾಜ್ ವಿವರಣೆ ನೀಡಿದ್ದಾರೆ.

ಬಳ್ಳಾರಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ರಾಜ್ಯಕ್ಕೆ 20,000 ಕೋಟಿ ರೂಪಾಯಿಗಳ ನಷ್ಟವಾಗುತ್ತಿದೆ. ಈ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕಳೆದೆರಡು ದಿನಗಳಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ವಿಧಾನ ಪರಿಷತ್ ಮತ್ತು ವಿಧಾನ ಸಭೆಗಳಲ್ಲಿ ಧರಣಿಗಳನ್ನು ನಡೆಸುತ್ತಿವೆ. ಕಳೆದ ರಾತ್ರಿಯೂ ಇದು ಮುಂದುವರಿದಿತ್ತು. ಈ ವಿಚಾರಗಳ ಕುರಿತು ಕೇಂದ್ರ ಸರಕಾರಕ್ಕೆ ರಾಜ್ಯಪಾಲರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.

ರೆಡ್ಡಿ ಸಹೋದರರು ಮತ್ತು ಅಕ್ರಮ ಗಣಿಗಾರಿಕೆ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ಇದೊಂದು ಬೃಹತ್ ಪ್ರಕರಣ; ಈ ಸಹೋದರರನ್ನು ಅನರ್ಹಗೊಳಿಸುವಂತೆ ನಾನು ಈಗಾಗಲೇ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿದ್ದೇನೆ ಎಂದರು.

ಮಾತು ಮುಂದುವರಿಸಿದ ರಾಜ್ಯಪಾಲರು, ಸಿಬಿಐ ಅಥವಾ ಇತರ ಯಾವುದೇ ತನಿಖಾ ಸಂಸ್ಥೆಯಿಂದ ಇದರ ಕುರಿತು ತನಿಖೆ ನಡೆಯಬೇಕಾಗಿದೆ. ನಾನು ಕರ್ನಾಟಕ ಲೋಕಾಯುಕ್ತ ಸಂತೋಷ್ ಹೆಗ್ಡೆಯವರನ್ನು ಅಪಾರವಾಗಿ ಗೌರವಿಸುತ್ತೇನೆ. ಆದರೆ ಲೋಕಾಯುಕ್ತರಿದ್ದರೂ ಕೆಲಸಗಳು ನಡೆಯುತ್ತಿಲ್ಲ. ಕಾನೂನಿಗೆ ಜಯ ದೊರೆಯುವುದನ್ನು ನಾನು ನೋಡಬೇಕು ಎಂದರು.

ನಾನು ಕ್ರಮಬದ್ಧ ವರದಿಗಳನ್ನು ಕೇಂದ್ರ ಸರಕಾರಕ್ಕೆ ಕಳುಹಿಸುತ್ತಿದ್ದು, ಗೃಹ ಸಚಿವಾಲಯಕ್ಕೂ ಮಾಹಿತಿ ನೀಡುತ್ತಿದ್ದೇನೆ. ನಾನೊಬ್ಬ ರಾಜ್ಯಪಾಲ. ನನಗೆ ನನ್ನ ಜವಾಬ್ದಾರಿಗಳ ಬಗ್ಗೆ ಅರಿವಿದೆ. ನಾನು ಹೊಣೆಗಾರಿಕೆಗಳಿಂದ ನುಣುಚಿಕೊಳ್ಳುವುದಿಲ್ಲ. ಜನತೆಯಲ್ಲಿರುವ ಭಾವನೆಯು ನನ್ನಲ್ಲೂ ಇದೆ. ಕೆಲವು ವಿಚಾರಗಳ ಕುರಿತು ನಾನು ಯಾವುದೇ ಕ್ರಮ ಕೈಗೊಳ್ಳಲಾಗದು. ಅದು ಮುಖ್ಯಮಂತ್ರಿಗಳಿಗೆ ಮಾತ್ರ ಸಾಧ್ಯವಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ