ಸಂಪ್ರದಾಯದಂತೆ ಜಗತ್ ಪ್ರಸಿದ್ಧ ಪುರಿ ಜಗನ್ನಾಥ ಯಾತ್ರೆಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ರಥಬೀದಿಯನ್ನು ಗುಡಿಸುವ ಮೂಲಕ ಚಾಲನೆ ನೀಡಿದ್ದಾರೆ. ಇದರ ಬೆನ್ನಿಗೆ ಉಂಟಾದ ಕಾಲ್ತುಳಿತದಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಪುರಿ ಜಗನ್ನಾಥ, ಬಾಲಭದ್ರ ಮತ್ತು ದೇವಿ ಸುಭದ್ರಾ ರಥಗಳನ್ನು ಎಳೆಯುತ್ತಿದ್ದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ. ಲಕ್ಷಾಂತರ ಭಕ್ತರು ಸೇರಿದ್ದ ಜಾತ್ರೆಯ ಸಂದರ್ಭದಲ್ಲಿ ನಾಲ್ವರು ಕೆಳಗೆ ಉರುಳಿ ಬಿದ್ದ ನಂತರ ಕಾಲ್ತುಳಿತ ನಡೆದಿತ್ತು. ಆಗ ಬಿಜಯಲಕ್ಷ್ಮಿ ಮೊಹಾಂತಿ ಎಂಬ 65ರ ವೃದ್ಧೆ ಸಾವನ್ನಪ್ಪಿದರೆ, ಇತರ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ಬಾಲಭದ್ರ ದೇವರ ರಥದ ಸಮೀಪ ಈ ನಾಲ್ವರು ಜನಸಂದಣಿಯಲ್ಲಿ ನೆಲಕ್ಕುರುಳಿದ್ದರು. ತಕ್ಷಣವೇ ರಕ್ಷಣಾ ಕಾರ್ಯಕರ್ತರು ಆಸ್ಪತ್ರೆಗೆ ಸಾಗಿಸಿದರೂ, ವೃದ್ಧೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಉಳಿದವರ ಆರೋಗ್ಯ ಸ್ಥಿರವಾಗಿದೆ ಎಂದು ಪುರಿ ಜಿಲ್ಲಾ ವೈದ್ಯಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಬೀದಿ ಗುಡಿಸಿದ ಮೋದಿ... ಭಾರೀ ಭದ್ರತೆಯ ನಡುವೆ ಪುರಿಗೆ ಆಗಮಿಸಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಇಂದು ಮುಂಜಾನೆ 133ನೇ ರಥ ಯಾತ್ರೆಗೆ ಚಾಲನೆ ನೀಡಿದರು.
ಪುರಿ ಜಗನ್ನಾಥ ದೇವಳದ ಸಂಪ್ರದಾಯದಂತೆ ಸಾಂಕೇತಿಕವಾಗಿ ದೇವಳದ ಹೊರಗಿನ ರಸ್ತೆಯನ್ನು ಶುಚಿಗೊಳಿಸುವ ಮೂಲಕ ಮೋದಿ ಜಾತ್ರೆಗೆ ಚಾಲನೆ ನೀಡಿದ್ದಾರೆ ಎಂದು ವರದಿಗಳು ಹೇಳಿವೆ.
ಈ ಯಾತ್ರೆಯಲ್ಲಿ ಸಂಪ್ರದಾಯದಂತೆ ಮೂರು ಬೃಹತ್ ರಥಗಳನ್ನು ಸಾವಿರಾರು ಭಕ್ತರು ಎಳೆಯುತ್ತಾರೆ. ಉಳಿದಂತೆ 18 ಆನೆಗಳು, 98 ಟ್ರಕ್ಕುಗಳನ್ನು ಅಲಂಕರಿಸಿ ಜಾತ್ರೆಗೆ ಮೆರುಗು ನೀಡಲಾಗುತ್ತದೆ. ದೇಶ-ವಿದೇಶಗಳ ಲಕ್ಷಾಂತರ ಭಕ್ತರು ಮತ್ತು ಆಸಕ್ತರು ಜಾತ್ರೆಯಲ್ಲಿ ಭಾಗವಹಿಸುವುದು ವಿಶೇಷ.