ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈ: ಕ್ಲೋರಿನ್ ಅನಿಲ ಸೋರಿಕೆ- 8 ಜನರ ಸ್ಥಿತಿ ಚಿಂತಾಜನಕ (Mumbai's Sewri | Mumbai gas leak | Lal Bahadur Shastri | cylinders)
ಮುಂಬೈ: ಕ್ಲೋರಿನ್ ಅನಿಲ ಸೋರಿಕೆ- 8 ಜನರ ಸ್ಥಿತಿ ಚಿಂತಾಜನಕ
ಮುಂಬೈ, ಬುಧವಾರ, 14 ಜುಲೈ 2010( 18:38 IST )
ಮುಂಬೈ: ದಕ್ಷಿಣ ಮುಂಬೈಯ ಸೆವ್ರಿ ಪ್ರದೇಶದಲ್ಲಿ ಸಿಲೆಂಡರ್‌ಗಳಿಂದ ಕ್ಲೋರಿನ್ ಅನಿಲ ಸೋರಿಕೆಯ ಪರಿಣಾಮದಿಂದ 103 ಮಂದಿ ಅಸ್ವಸ್ಥಗೊಂಡಿದ್ದು, ಎಂಟು ಜನರ ಪರಿಸ್ಥಿತಿ ಚಿಂತಾಜನಕವಾಗಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. ದುರಂತದ ಬಗ್ಗೆ ಪೊಲೀಸ್ ಮತ್ತು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಜಂಟಿಯಾಗಿ ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜ್ ಸಮೀಪ ಬೆಳಗಿನ ಜಾವ 4ಗಂಟೆ ಸುಮಾರಿಗೆ ಕ್ಲೋರಿನ್ ಅನಿಲ ಸೋರಿಕೆ ಘಟನೆ ನಡೆದಿದೆ. ಅನಿಲ ಸೋರಿಕೆಯಿಂದಾಗಿ ಜನರ ಕಣ್ಣು ಸುಟ್ಟು, ಉಸಿರಾಟ ತೊಂದರೆ ಹಾಗೂ ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಈ ಘಟನೆಯ ನಂತರ ವಿಷಯ ತಿಳಿದ ಅಗ್ನಿಶಾಮಕದಳದ ಅಧಿಕಾರಿಗಳು ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಆದರೆ ಕ್ಲೋರಿನ್ ಸಾಕಷ್ಟು ಪ್ರಮಾಣದಲ್ಲಿ ಸೋರಿಕೆಯಾಗಿದ್ದರಿಂದ ನಾಲ್ಕು ಮಂದಿ ಅಗ್ನಿಶಾಮಕದಳದವರೇ ಅಸ್ವಸ್ಥರಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ಉದಯ್ ಠಾಕ್ರೆ ತಿಳಿಸಿದ್ದಾರೆ.
ಅಸ್ವಸ್ಥಗೊಂಡವರನ್ನು ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆ, ಬಿಪಿಟಿ ಹಾಗೂ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆದ ಕೆಲವರು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದಾರೆ. ಇದರಲ್ಲಿ ಎಂಟು ಮಂದಿಯ ಸ್ಥಿತಿ ಗಂಭೀರವಾಗಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.