ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕಲಿ ಎನ್‌ಕೌಂಟರ್; ಬಂಧನ ಭೀತಿಯಲ್ಲಿ ಮೋದಿ ಸಚಿವ (Sohrabuddin case | Narendra Modi | CBI | Amit Shah)
Bookmark and Share Feedback Print
 
ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಗುಜರಾತ್‌ನ ನರೇಂದ್ರ ಮೋದಿ ಸರಕಾರದ ಗೃಹ ಸಚಿವರ ಪಾತ್ರದ ಕುರಿತು ಮಹತ್ವದ ಸಾಕ್ಷ್ಯಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಸಿಬಿಐ ಅವರನ್ನು ಬಂಧಿಸಲಿದೆ ಎಂದು ವರದಿಗಳು ಹೇಳಿವೆ.

ಗುಜರಾತ್ ಗೃಹ ಸಚಿವ ಅಮಿತ್ ಶಾಹ್ ಯಾವುದೇ ಕ್ಷಣದಲ್ಲಿ ಬಂಧನಕ್ಕೊಳಗಾಗಬಹುದು. ಎನ್‌ಕೌಂಟರ್ ಪ್ರಕರಣವನ್ನು ಸಿಬಿಐಗೆ ಸುಪ್ರೀಂ ಕೋರ್ಟ್ ವಹಿಸಿದ ಬಳಿಕ ಅಹಮದಾಬಾದ್ ಕ್ರೈಂ ಬ್ರಾಂಚ್ ಮುಖ್ಯಸ್ಥ ಅಭಯ್ ಚೂಡಾಸಮಾ ಅವರನ್ನು ಸಿಬಿಐ ಬಂಧಿಸಿತ್ತು.

ಅಭಯ್ ಭಯೋತ್ಪಾದನೆಯ ವಿರುದ್ಧದ ಹೋರಾಟದ ಹೆಸರಿನಲ್ಲಿ ಸುಲಿಗೆ ಕಾರ್ಯ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದ್ದು, ಜುಲೈ 26ರಂದು ಅವರ ವಿರುದ್ಧ ಸಿಬಿಐ ಆರೋಪಪಟ್ಟಿ ದಾಖಲಿಸಲಿದೆ.

ಅದಕ್ಕೂ ಮೊದಲು ಪ್ರಕರಣವನ್ನು ತನಿಖೆ ನಡೆಸುತ್ತಿದ್ದ ಸಿಐಡಿ, ಗುಜರಾತ್‌ನ ಐಪಿಎಸ್ ಅಧಿಕಾರಿಗಳಾದ ಡಿಜಿ ವಂಜಾರಾ, ರಾಜ್‌ಕುಮಾರ್ ಪಾಂಡಿಯನ್ ಮತ್ತು ರಾಜಸ್ತಾನದ ದಿನೇಶ್ ಎಂ.ಎನ್. ಎಂಬವರನ್ನು ಬಂಧಿಸಿತ್ತು.

ಸೊಹ್ರಾಬುದ್ದೀನ್ ಎನ್‌ಕೌಂಟರ್ ನಕಲಿಯಾಗಿತ್ತು ಮತ್ತು ಆತನ ಪತ್ನಿ ಕೌಸರ್ ಬೀಯನ್ನು ಗುಜರಾತ್ ಪೊಲೀಸರೇ ಕೊಂದು ಹಾಕಿದ್ದರು ಎಂದು ಸುಪ್ರೀಂ ಕೋರ್ಟಿನಲ್ಲಿ ಗುಜರಾತ್ ಅಪರಾಧ ವಿಭಾಗದ ಸಿಐಡಿ ಒಪ್ಪಿಕೊಂಡಿತ್ತು. ಒಟ್ಟಾರೆ ಈ ಸಂಬಂಧ ಇದುವರೆಗೆ ಗುಜರಾತ್‌ ಮತ್ತು ರಾಜಸ್ತಾನಗಳ 14 ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ.

ಗೃಹ ಸಚಿವರ ಪಾಲು...
2005ರ ನವೆಂಬರ್ 26ರಂದು ನಡೆದಿದ್ದ ಸೊಹ್ರಾಬುದ್ದೀನ್ ಎನ್‌ಕೌಂಟರ್ ಮತ್ತು ಕೌಸರ್ ಬೀ ಕಾಣೆಯಾದ ಸಂದರ್ಭಗಳಲ್ಲಿ ಪೊಲೀಸ್ ಅಧಿಕಾರಿಗಳಾದ ವಂಜಾರಾ ಮತ್ತು ಪಾಂಡಿಯನ್ ಅವರಿಗೆ ಗೃಹಸಚಿವ ಅಮಿತ್ ಶಾಹ್ ಹಲವಾರು ಕರೆ ಮಾಡಿರುವ ದಾಖಲೆಗಳನ್ನು ಇದೀಗ ಸಿಬಿಐ ಸಂಗ್ರಹಿಸಿದೆ.

ತುಳಸೀರಾಮ್ ಪ್ರಜಾಪತಿ ಎನ್‌ಕೌಂಟರ್ ಪ್ರಕರಣವನ್ನು ಇತ್ತೀಚೆಗಷ್ಟೇ ಕೈಗೆತ್ತಿಕೊಂಡಿದ್ದ ಸಿಐಡಿಗೂ ಇದೀಗ ಅಮಿತ್ ಶಾಹ್ ಮತ್ತು ವಂಜಾರಾ, ಪಾಂಡಿಯನ್ ಜತೆಗಿನ ಸಂಭಾಷಣೆ ದಾಖಲೆಗಳು ಲಭ್ಯವಾಗಿವೆ. ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಕಣ್ಣಾರೆ ನೋಡಿದ್ದ ಏಕೈಕ ವ್ಯಕ್ತಿ ಪ್ರಜಾಪತಿಯಾಗಿದ್ದರು. ಅವರನ್ನು 2006ರ ಡಿಸೆಂಬರ್ 28ರಂದು ಕೊಂದು ಹಾಕಲಾಗಿತ್ತು.

ಹಾಗಾಗಿ ಗೃಹ ಸಚಿವ ಅಮಿತ್ ಶಾಹ್ ಅವರನ್ನು ಸಿಬಿಐ ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆಗಳಿವೆ. ಅವರ ಜತೆ ಇತರ ಕೆಲವು ಗುಜರಾತ್ ಐಪಿಎಸ್ ಅಧಿಕಾರಿಗಳನ್ನು ಕೂಡ ಸಿಬಿಐ ವಶಕ್ಕೆ ತೆಗೆದುಕೊಳ್ಳಲಿದೆ. ಸಚಿವ ಶಾಹ್ ಅವರು ಬಿಜೆಪಿ ನಾಯಕ ಅರುಣ್ ಜೇಟ್ಲಿಯವರ ಜತೆ ನಿಕಟ ಸಂಬಂಧ ಹೊಂದಿದ್ದಾರೆ ಎಂದು ವರದಿಗಳು ಹೇಳಿವೆ.

ಶಾಹ್ ಬಂಧನಕ್ಕೊಳಗಾಗಲಿದ್ದಾರೆ ಎಂಬುದನ್ನು ಮನಗಂಡಿರುವ ಬಿಜೆಪಿಯ ಕೇಂದ್ರೀಯ ನಾಯಕತ್ವವು ರಾಜಕೀಯ ತಂತ್ರಗಳನ್ನು ಈಗಾಗಲೇ ಆರಂಭಿಸಿದೆ. ಸಿಬಿಐಯು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅಣತಿಯಂತೆ ಕಾರ್ಯಾಚರಣೆ ನಡೆಸುತ್ತಿದ್ದು, ಸುಖಾಸುಮ್ಮನೆ ಬಿಜೆಪಿಯನ್ನು ಹಳಿಯಲು ನೋಡುತ್ತಿದೆ ಎಂಬುದನ್ನು ಜನರಿಗೆ ಪಕ್ಷ ಮನದಟ್ಟು ಮಾಡಲಿದೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ