ಕರ್ನಾಟಕ ಸರಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳಿಗೆ ಸರಕಾರಿ ಉದ್ಯೋಗ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಒದಗಿಸಿದ್ದ ಶೇ.73ರ ಮೀಸಲಾತಿ ಶಾಸನವನ್ನು ಮರು ಪರಿಶೀಲಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಮಂಡಲ್ ಆಯೋಗದ ಶಿಫಾರಸಿನಂತೆ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ನೀಡಬಾರದು ಎಂಬುದನ್ನು ಕರ್ನಾಟಕ ಸರಕಾರದ ಕಾನೂನು ಮೀರುತ್ತಿರುವುದರಿಂದ (1994ರ ಕಾಯ್ದೆ) ಇದನ್ನು ಅನರ್ಹಗೊಳಿಸಬೇಕು ಎಂಬ ಅರ್ಜಿಗೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಹಿಂದಿನ ಮಧ್ಯಂತರ ಆದೇಶದಂತೆ ಶೇ.50ರ ಮೀಸಲಾತಿಯನ್ನು ಒಂದು ವರ್ಷ ಮುಂದುವರಿಸುವಂತೆ ಸೂಚಿಸಿದೆ.
ಆದರೆ ಅದಕ್ಕೂ ಮೊದಲು ರಾಜ್ಯ ಸರಕಾರವು ತಾನು ಪರಿಶಿಷ್ಟರು ಮತ್ತು ಹಿಂದುಳಿದ ವರ್ಗಗಳಿಗೆ ಅಷ್ಟು ಪ್ರಮಾಣದ ಮೀಸಲಾತಿ ನೀಡುವುದನ್ನು ಸಮರ್ಥಿಸಿಕೊಳ್ಳುವ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಬೇಕು ಮತ್ತು ಕಾಯ್ದೆಯನ್ನು ಮರು ಪರಿಶೀಲನೆ ನಡೆಸಬೇಕು ಎಂದು ಆದೇಶಿಸಿದೆ.
ಇದೇ ರೀತಿ ತಮಿಳುನಾಡು ಸರಕಾರಕ್ಕೂ ಸುಪ್ರೀಂ ಆದೇಶ ನೀಡಿದೆ. ಅಲ್ಲಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಶೇ.69ರ ಮೀಸಲಾತಿಯನ್ನು 1993ರ ಶಾಸನದಂತೆ ಜಾರಿಗೆ ತರಲಾಗಿತ್ತು.
ಆದರೆ ಮಧ್ಯಂತರ ಆದೇಶದಂತೆ ಇಲ್ಲಿ ಶೇ.69ರ ಮೀಸಲಾತಿಯನ್ನು ಒಂದು ವರ್ಷದ ಕಾಲ ಮುಂದುವರಿಯಲು ಅವಕಾಶ ನೀಡಲಾಗಿದೆ. ಮೀಸಲಾತಿಯನ್ನು ಸಮರ್ಥಿಸುವ ದಾಖಲೆಗಳನ್ನು ಒದಗಿಸಬೇಕು ಮತ್ತು ಕಾನೂನನ್ನು ಮರು ಪರಿಶೀಲಿಸಬೇಕು ಎಂದೂ ಸುಪ್ರೀಂ ಹೇಳಿದೆ.
1992ರಲ್ಲಿ ಇಂದಿರಾ ಸಾಹ್ನಿ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಶೇ.50ನ್ನು ಮೀರಬಾರದು ಮತ್ತು ಮಂಡಲ್ ಆಯೋಗದ ಶಿಫಾರಸಿನಂತೆ ಕೇಂದ್ರ ಸರಕಾರದ ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ.27ರ ಮೀಸಲಾತಿ ನೀಡುವುದನ್ನು ಎತ್ತಿ ಹಿಡಿದಿತ್ತು.
ಆದರೆ 1992ಕ್ಕೂ ಮೊದಲೇ ತಾವು ಕಾನೂನು ರಚನೆ ಪ್ರಕ್ರಿಯೆಯಲ್ಲಿ ತೊಡಗಿದ್ದೆವು. ಹಾಗಾಗಿ ನಮಗೆ ವಿನಾಯಿತಿ ನೀಡಬೇಕು ಎಂದು ತಮಿಳುನಾಡು ಮತ್ತು ಕರ್ನಾಟಕ ಸರಕಾರಗಳು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದವು.