ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅವಿವಾಹಿತ ಗರ್ಭಿಣಿಯೇ? ಕ್ಲಾಸಿಗೆ ಚಕ್ಕರ್ ಹಾಕಬಹುದು!
(Single & pregnant | Delhi High Court | Delhi University | Bar Council of India)
ಆಧುನಿಕ ಯುಗದಲ್ಲಿ ಸಮಾಜವು ತ್ವರಿತ ವೇಗದಲ್ಲಿ ಬದಲಾಗುತ್ತಿದ್ದು, ನಾವು ವಾಸ್ತವತೆಯೊಂದಿಗೆ ಹೆಜ್ಜೆ ಹಾಕಬೇಕಾಗಿದೆ. ಹಾಗಾಗಿ ಯುವತಿಯೊಬ್ಬಳು ಮದುವೆಯಲ್ಲದ ಸಂಬಂಧದಿಂದ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದಿದ್ದರೆ, ಅದನ್ನೇ ಮುಂದಿಟ್ಟುಕೊಂಡು ವಿದ್ಯಾಭ್ಯಾಸಕ್ಕೆ ತಡೆಯೊಡ್ಡಬಾರದು ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ದೆಹಲಿ ವಿಶ್ವವಿದ್ಯಾಲಯ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾಗಳಿಗೆ ಸಲಹೆ ನೀಡಿರುವ ದೆಹಲಿ ಹೈಕೋರ್ಟ್, ಬಸುರಿಯಾದ ಕಾರಣದಿಂದ ಯುವತಿಯರಿಗೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದೇ ಇದ್ದರೆ ಅವರಿಗೆ ರಿಯಾಯಿತಿ ನೀಡುವ ನಿಯಮಗಳನ್ನು ಜಾರಿಗೆ ತನ್ನಿ ಎಂದಿದೆ.
ಏಕಾಂಗಿ ಮಹಿಳೆಯೊಬ್ಬಳು ತನ್ನ ತಾಯ್ತನದ ಕಾರಣದಿಂದ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದೇ ಇದ್ದರೆ ಅಂತಹ ಸಂದರ್ಭಗಳಲ್ಲೂ ವಿದ್ಯಾಸಂಸ್ಥೆಗಳು ಅನುಕಂಪದ ಆಧಾರದ ಮೇಲೆ ಹಾಜರಾತಿಗಳನ್ನು ನೀಡಬೇಕು. ಲಿವ್-ಇನ್ ಸಂಬಂಧ (ಸಹಬಾಳ್ವೆ- ಮದುವೆಯಾಗದೆ ಜತೆಗಿರುವುದು) ಮತ್ತು ವಿವಾಹಪೂರ್ವ ಲೈಂಗಿಕತೆ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಪು ನೀಡಿರುವುದರಿಂದ ಇದನ್ನು ಗಮನಕ್ಕೆ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಕೈಲಾಸ್ ಗಂಭೀರ್ ಅಭಿಪ್ರಾಯಪಟ್ಟರು.
ದೆಹಲಿ ಯುನಿವರ್ಸಿಟಿಯ ಇಬ್ಬರು ವಿವಾಹಿತ ಕಾನೂನು ವಿದ್ಯಾರ್ಥಿನಿಯರು ತಮ್ಮ ತಾಯ್ತನದ ಕಾರಣಗಳಿಂದಾಗಿ ಹೆರಿಗೆಯ ಹತ್ತಿರದ ದಿನಗಳಲ್ಲಿ ತರಗತಿಗಳಿಗೆ ಹಾಜರಾಗಿರಲಿಲ್ಲ. ಹಾಗಾಗಿ ಅವರಿಗೆ ಹಾಜರಾತಿ ಕೊರತೆ ಎದುರಾಗಿತ್ತು. ಈ ಸಂಬಂಧ ಪ್ರಕರಣ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಮಹಿಳೆಯೊಬ್ಬಳು ಗರ್ಭಿಣಿಯ ಕೊನೆಯ ಹಂತದ ಕಾಲದಲ್ಲಿ ಅಥವಾ ಹೆರಿಗೆಯ ಸಂದರ್ಭದಲ್ಲಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂಬ ಆಧಾರದಲ್ಲಿ ಆಕೆಯ ವಿದ್ಯಾಭ್ಯಾಸವನ್ನು ಮುಂದುವರಿಸಲು ಅವಕಾಶ ನೀಡದೇ ಇರುವುದು ಅಥವಾ ಸೆಮಿಸ್ಟರ್ ತಡೆ ಹಿಡಿಯುವುದು ಸಂವಿಧಾನದ ಪ್ರಕಾರ ಸಂಪೂರ್ಣವಾಗಿ ನಿಷಿದ್ಧವಾಗಿದೆ. ಇದು ಮಹಿಳೆಯರ ಹಕ್ಕುಗಳಿಗೆ ಸಂಬಂಧಪಟ್ಟ ವಿಚಾರವೂ ಹೌದು ಎಂದು ಯುನಿವರ್ಸಿಟಿ ವಾದವನ್ನು ಕೋರ್ಟ್ ತಳ್ಳಿ ಹಾಕಿದೆ.