ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಸ್ಲಿಮರು ರಾಷ್ಟ್ರದ ಮುಖ್ಯವಾಹಿನಿಗೆ ಬರಬೇಕು: ಕೇಂದ್ರ (Ban on SIMI | Muslims | SIMI | India)
Bookmark and Share Feedback Print
 
ಭಾರತೀಯ ಇಸ್ಲಾಮಿಕ್ ವಿದ್ಯಾರ್ಥಿ ಚಳವಳಿ (ಸಿಮಿ) ಮೇಲಿನ ನಿಷೇಧವನ್ನು ವಿಸ್ತರಿಸುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರಕಾರ, ಇಂತಹ ಅಸಂತುಷ್ಟ ಶಕ್ತಿಗಳನ್ನು ಮಟ್ಟ ಹಾಕುವ ಮೂಲಕ ಮುಸ್ಲಿಂ ಸಮುದಾಯವನ್ನು ರಾಷ್ಟ್ರದ ಮುಖ್ಯವಾಹಿನಿಗೆ ತರಲು ಈ ರೀತಿಯ ಒಂದು ಕ್ರಮದ ಅಗತ್ಯವಿತ್ತು ಎಂದಿದೆ.

ಮುಸ್ಲಿಂ ಸಮುದಾಯದ ಜನಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ವಿವಿಧ ಸಾರ್ವಜನಿಕ ಕ್ಷೇತ್ರಗಳಲ್ಲಿಯೂ ಅವರು ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ಇಂತಹ ಕೆಲವು ಅಸಂತುಷ್ಟ ಶಕ್ತಿಗಳು ಕೆಟ್ಟ ಪ್ರಚಾರ ಮಾಡುತ್ತಾ, ಸರಕಾರದ ವಿರುದ್ಧ ಸುದ್ದಿಗಳನ್ನು ಹಬ್ಬಿಸುತ್ತಿವೆ. ಹಾಗಾಗಿ ಮುಸ್ಲಿಮರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸಿಮಿ ನಿಷೇಧದ ಅಗತ್ಯವಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ಎಸ್. ಚಾಂದಿಯೋಕ್ ಹೇಳಿದ್ದಾರೆ.

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನೇತೃತ್ವದ ನ್ಯಾಯಾಧೀಕರಣದೆದುರು ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್, ಐದನೇ ಬಾರಿ ಸಿಮಿ ನಿಷೇಧವನ್ನು ವಿಸ್ತರಿಸಲು ಕೇಂದ್ರ ನಿರ್ಧರಿಸಿರುವುದಕ್ಕೆ ಕಾರಣವನ್ನು ನೀಡಿದರು.

2001ರಲ್ಲಿ ಸಿಮಿಯನ್ನು ನಿಷೇಧಿಸಿರುವ ಹೊರತಾಗಿಯೂ ಅದು ದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಸಾಕಷ್ಟು ಪುರಾವೆಗಳಿವೆ ಎಂದು ಕೇಂದ್ರ ಸರಕಾರವು ವಾದಿಸಿದ್ದು, ನಿಷೇಧ ವಿಸ್ತರಣೆಯನ್ನು ಸಮರ್ಥಿಸಿಕೊಂಡಿದೆ.

2001ರ ನಂತರ ಇದೇ ವರ್ಷದ ಫೆಬ್ರವರಿ ಐದರಂದು ಸರಕಾರವು ಸಿಮಿ ಮೇಲೆ ಐದನೇ ಬಾರಿ ನಿಷೇಧವನ್ನು ವಿಸ್ತರಿಸಿತ್ತು. 1967ರ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಫೆಬ್ರವರಿ ಏಳರಿಂದ ಅನ್ವಯವಾಗುವಂತೆ ಎರಡು ವರ್ಷಗಳ ನಿಷೇಧವನ್ನು ಹೇರಲಾಗಿದೆ. ಇದು 2012ರ ಫೆಬ್ರವರಿ ಏಳರವರೆಗೆ ಮುಂದುವರಿಯಲಿದೆ.

ಸಿಮಿ ಸಂಘಟನೆಯು ದೇಶದಾದ್ಯಂತ ಹಲವಾರು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಾದ ಲಷ್ಕರ್ ಇ ತೋಯ್ಬಾ ಮತ್ತು ಜೈಶ್ ಇ ಮೊಹಮ್ಮದ್‌ಗಳ ಜತೆ ಸಂಬಂಧ ಹೊಂದಿರುವುದು ರುಜುವಾತಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ