ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರತಿಪಕ್ಷಗಳ ಧರಣಿ, ಗವರ್ನರ್ 'ಕೈ'ಚಳಕ; ಬಿಜೆಪಿ ತಿರುಮಂತ್ರ? (BJP | Karnataka | H R Bhardwaj | Congress)
Bookmark and Share Feedback Print
 
ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಸತತ ಮೂರನೇ ದಿನವೂ ಕರ್ನಾಟಕದ ಪ್ರತಿಪಕ್ಷಗಳು ವಿಧಾನಸಭೆಯಲ್ಲಿ ಧರಣಿ ಮುಂದುವರಿಸಿರುವ ಹೊತ್ತಿನಲ್ಲೇ ಅತ್ತ ರಾಜ್ಯಪಾಲರು ಕೇಂದ್ರದ ನಾಯಕರ ಕಿವಿಯೂದುತ್ತಿರುವುದು ಆಡಳಿತ ಪಕ್ಷ ಬಿಜೆಪಿಗೆ ತೀವ್ರ ತಲೆನೋವು ತಂದಿದೆ.

ಈ ಕುರಿತು ಬಿಜೆಪಿ ನಾಯಕರು ದೆಹಲಿಯಲ್ಲಿ ಚರ್ಚೆ ನಡೆಸಿದ್ದು, ತಿರುಮಂತ್ರ ಹಾಕುವ ಕುರಿತು ಯೋಜನೆ ರೂಪಿಸಿದ್ದಾರೆ ಎಂದು ವರದಿಗಳು ಹೇಳಿವೆ.

ನಿನ್ನೆಯಷ್ಟೇ ರಾಷ್ಟ್ರಪತಿಯವರನ್ನು ಭೇಟಿಯಾಗಿ ಬಳ್ಳಾರಿ ಗಣಿ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕೆಂದು ಆಗ್ರಹಿಸಿದ್ದ ರಾಜ್ಯಪಾಲ ಎಚ್.ಆರ್. ಭಾರದ್ವಾಜ್, ಇಂದು ಗೃಹ ಸಚಿವ ಪಿ. ಚಿದಂಬರಂ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟಿರುವ ರಾಜ್ಯಪಾಲರು ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳ ಕುರಿತು ವಿವರಣೆ ನೀಡುವ ಸಲುವಾಗಿ ರಾಜಧಾನಿಗೆ ಐದು ದಿನಗಳ ಪ್ರವಾಸ ಕೈಗೊಂಡಿದ್ದರು. ಅದೇ ನಿಟ್ಟಿನಲ್ಲಿ ಇಂದು ಪ್ರಧಾನಿ ಜತೆ ಸುಮಾರು ಅರ್ಧ ತಾಸು ಮಾತುಕತೆ ನಡೆಸಿದರು.

ಅದಕ್ಕೂ ಮೊದಲು ಚಿದಂಬರಂ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು. ಕೇಂದ್ರದ ಪ್ರತಿ ನಾಯಕರನ್ನೂ ಪ್ರತ್ಯೇಕವಾಗಿ ಭೇಟಿ ಮಾಡಿ ರಾಜ್ಯ ಸರಕಾರದ ವಿರುದ್ಧ ದೂರುಗಳನ್ನು ರಾಜ್ಯಪಾಲರು ನೀಡಿದ್ದಾರೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ಬಳ್ಳಾರಿ ಗಣಿ ರೆಡ್ಡಿ ಸಚಿವರುಗಳನ್ನು ಸಂಪುಟದಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೈ ಬಿಡಬೇಕೆಂದು ಕೇಂದ್ರ ಸರಕಾರ ಒತ್ತಡ ಹೇರಬೇಕು ಎನ್ನುವ ಏಕೈಕ ಅಜೆಂಡಾ ಇಟ್ಟುಕೊಂಡು ಅವರು ನಾಯಕರನ್ನು ಭೇಟಿ ಮಾಡುತ್ತಿದ್ದಾರೆ.

ಬಿಜೆಪಿಯಿಂದ ಕಾರ್ಯತಂತ್ರ...
ಪ್ರತಿಪಕ್ಷಗಳು ಮತ್ತು ರಾಜ್ಯಪಾಲರ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿ ನಾಯಕರು ಅವುಗಳ ವಿರುದ್ಧ ಕಾರ್ಯತಂತ್ರ ರೂಪಿಸಲು ಇಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರ ನಿವಾಸದಲ್ಲಿ ಸಭೆ ನಡೆಸಿದರು.

ಎಲ್.ಕೆ. ಅಡ್ವಾಣಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಅನಂತ್ ಕುಮಾರ್, ಎಂ. ವೆಂಕಯ್ಯ ನಾಯ್ಡು, ರಾಜನಾಥ್ ಸಿಂಗ್, ಮುರಳಿ ಮನೋಹರ ಜೋಷಿ ಸೇರಿದಂತೆ ಇನ್ನಿತರ ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯ ನಂತರ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್, ಚುನಾವಣೆಯಲ್ಲಿ ಜನರ ವಿಶ್ವಾಸವನ್ನು ಕಳೆದುಕೊಂಡಿರುವ ಕಾಂಗ್ರೆಸ್ ಇದೀಗ ಯಡಿಯೂರಪ್ಪನವರ ಜನಪ್ರಿಯ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಆದರೆ ಇದು ಯಶಸ್ವಿಯಾಗದು. ಅದರ ಕುರಿತು ಬಿಜೆಪಿಯ ಕೇಂದ್ರೀಯ ನಾಯಕತ್ವವು ಇಂದು ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದೆ ಎಂದರು.

ಪ್ರವಾಸೋದ್ಯಮ ಸಚಿವ ಜಿ. ಜನಾರ್ದನ ರೆಡ್ಡಿ ಮತ್ತು ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿಯವರನ್ನು ಹೆಸರಿಸದೆ, ಬಳ್ಳಾರಿ ಸಚಿವರುಗಳನ್ನು ಸಂಪುಟದಿಂದ ಕೈ ಬಿಡುವಂತೆ ಮತ್ತು ಅಕ್ರಮ ಗಣಿಗಾರಿಕೆಯನ್ನು ಸಿಬಿಐಗೆ ವಹಿಸುವಂತೆ ಸಲಹೆ ನೀಡಿದ್ದ ರಾಜ್ಯಪಾಲರ ಹೇಳಿಕೆಗೆ ಪ್ರತಿಕ್ರಿಯಿಸಿದ ಅನಂತ್ ಕುಮಾರ್, ರಾಜ್ಯಪಾಲರು ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಸಂವಿಧಾನವು ಅವರಿಗೆ ನೀಡಿರುವ ಅಧಿಕಾರ ವ್ಯಾಪ್ತಿಯನ್ನು ಉಲ್ಲಂಘಿಸುತ್ತಿದ್ದಾರೆ ಎಂದರು.

ರಾಜ್ಯಪಾಲರಾದವರು ಯಾವುದೇ ರಾಜಕೀಯ ಪಕ್ಷದವರಂತೆ ವರ್ತಿಸಬಾರದು. ಆದರೆ ಅವರು ಕಾಂಗ್ರೆಸ್ ಏಜೆಂಟ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಆದರೆ ರಾಷ್ಟ್ರಪತಿಯವರು ಇದನ್ನು ಗಮನಕ್ಕೆ ತೆಗೆದುಕೊಂಡು ರಾಜ್ಯಪಾಲರಿಗೆ ಸೂಕ್ತ ಸಲಹೆಯನ್ನು ನೀಡುತ್ತಾರೆ ಎಂಬ ವಿಶ್ವಾಸ ನಮ್ಮದು ಎಂದು ಕುಮಾರ್ ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ