ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಗಳನ್ನು ಹಣಕ್ಕಾಗಿ ಮಾರೋ ತಾಯಂದ್ರೂ ಇರ್ತಾರಾ? (Laxmi Devi | Sanjay | Jagdish | Marriage)
Bookmark and Share Feedback Print
 
ತಂದೆ ಎಂಬವನು ಪ್ರಾಣಿಯಂತೆ ವರ್ತಿಸಿದರೂ ಮಗಳನ್ನು ಚೊಕ್ಕವಾಗಿ ನೋಡಿಕೊಳ್ಳುವವನಿಗೆ ಮದುವೆ ಮಾಡಿಸಲು ಮುತುವರ್ಜಿ ವಹಿಸುವ ಜೀವವೇ ತಾಯಿ ಎಂದು ನಾವು ಸಮಾಜದಲ್ಲಿ ಗುರುತಿಸುತ್ತಿರುವುದಕ್ಕಿದು ವೈರುಧ್ಯ ಉದಾಹರಣೆ. ಕೇವಲ ಹಣಕ್ಕಾಗಿ ಎರಡೆರಡು ಮದುವೆ ಮಾಡಿಸಿದ ಆರೋಪ ಈ ಮಹಾತಾಯಿಯ ಮೇಲೆ ಬಂದಿದೆ.

21ರ ಹರೆಯದ ಆರತಿ ಎಂಬಾಕೆಯೇ ಬಲಿಪಶುವಾದವಳು. ವಿಧವೆ ತಾಯಿ ಲಕ್ಷ್ಮಿ ದೇವಿ ತನ್ನ ಮಗಳನ್ನು ಮೊದಲೊಂದು ಮದುವೆ ಮಾಡಿಸಿ, ವಿಚ್ಛೇದನವನ್ನೂ ಕೊಡಿಸಿದ ನಂತರ ಎರಡನೇ ಮದುವೆಗೆ ಸಿದ್ಧತೆ ನಡೆಸಿದಾಗ ಪ್ರತಿಭಟಿಸಿ ಪೊಲೀಸರ ಸಹಕಾರ ಪಡೆದುಕೊಳ್ಳಲಾಗದೆ ಎರಡನೇ ಗಂಡನಿಂದಲೂ ತಾಳಿ ಬಿಗಿಸಿಕೊಂಡು ಯಾತನೆ ಪಡುತ್ತಿದ್ದಾಳೆ.

ಇದು ನಡೆದಿರುವುದು ಸುಂದರ ಪ್ರೇಮದ ಮಹಲನ್ನು ಹೊಂದಿರುವ, ಮಹಿಳಾ ಮುಖ್ಯಮಂತ್ರಿಯ ಆಡಳಿತವಿರುವ ಉತ್ತರ ಪ್ರದೇಶದ ಆಗ್ರಾದಲ್ಲಿ.

ಆರತಿಗೊಬ್ಬ ಕೀರ್ತಿಯಿದ್ದ...
ಈ ಯುವತಿ ಆರತಿ ಮನೆಯ ಪಕ್ಕದಲ್ಲೇ ಇದ್ದ ಬಾಲ್ಯದ ಗೆಳೆಯ ಸಂಜಯ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಭಿನ್ನ ಜಾತಿಗಳಿಗೆ ಸೇರಿದವರಾಗಿದ್ದುದರಿಂದ ಆರತಿಯನ್ನು 2007ರ ಮಾರ್ಚ್ ಐದರಂದು ಆಕೆಯ ಇಚ್ಛೆಗೆ ವಿರುದ್ಧವಾಗಿ ಲಕ್ಷ್ಮಿ ಮದುವೆ ಮಾಡಿಸಿದ್ದಳು.

ತನ್ನ ಮಗಳನ್ನು ಈ ರೀತಿ ಮದುವೆ ಮಾಡಿಸುವುದಕ್ಕೆ ಆಕೆ ಜಗದೀಶ್ ಕುಟುಂಬದಿಂದ ಹಣ ಪಡೆದಿದ್ದಳು ಎನ್ನುವುದು ಆರೋಪ. ಇದು ಸ್ವಲ್ಪವೇ ಸಮಯದಲ್ಲಿ ಹೊಸ ತಿರುವನ್ನು ಪಡೆದುಕೊಂಡದ್ದು ಆರತಿ ತವರು ಮನೆಗೆ ಮರಳಿದಾಗ. ಗಂಡ ನನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾನೆ ಎಂದು ಮದುವೆಯಾದ ತಿಂಗಳಲ್ಲೇ ಮನೆಗೆ ವಾಪಸ್ಸಾಗಿದ್ದಳು.

ಗಂಡ ತನ್ನ ಜತೆ ಕ್ರೂರವಾಗಿ ನಡೆದುಕೊಳ್ಳುತ್ತಿದ್ದ, ಹೊತ್ತಲ್ಲದ ಹೊತ್ತಿನಲ್ಲಿ ಹೊಡೆಯುತ್ತಿದ್ದ ಎಂದೆಲ್ಲಾ ಆರತಿ ಆಗ ಹೇಳಿಕೊಂಡಿದ್ದಳು. ಇಷ್ಟಾಗುತ್ತಿದ್ದಂತೆ ಸಂಬಂಧವನ್ನು ಸರಿಪಡಿಸುವ ಗೋಜಿಗೆ ಹೋಗದ ತಾಯಿ ಲಕ್ಷ್ಮಿ, ಜಗದೀಶನಿಂದ ಆರತಿಯನ್ನು ನ್ಯಾಯಾಯಲಕ್ಕೆ ಹೋಗಿ ಅಧಿಕೃತವಾಗಿ ಬೇರ್ಪಡಿಸಿದಳು.

ಆರತಿಗೆ ತಾಯಿಯ ಮತ್ತೊಂದು ಮುಖ ಬಯಲಾದದ್ದು ತನ್ನನ್ನು ಮತ್ತೆ 'ಮಾರಾಟ'ಕ್ಕೆ ಇಟ್ಟಾಗ. ಇಲ್ಲೇ ಫಿರೋಜಾಬಾದ್ ಜಿಲ್ಲೆಯ ಸೋಬಿಪುರ ಜಿಲ್ಲೆಯ ಮತ್ತೊಂದು ಹುಡುಗನನ್ನು ಹುಡುಕಿ, ಆತನಿಂದ 20,000 ರೂಪಾಯಿ ಹಣವನ್ನು ಪಡೆದು ಮದುವೆ ಮಾಡಲು ಲಕ್ಷ್ಮಿ ಸಿದ್ಧತೆ ನಡೆಸಿದ್ದಳು.

ಇದರಿಂದ ಬೇಸರಗೊಂಡ ಆರತಿ, ತನ್ನ ಹಳೆ ಬಾಯ್ ಫ್ರೆಂಡ್ ಸಂಜಯ್ ಸಹಕಾರ ಪಡೆದುಕೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿಐಜಿ ಮತ್ತು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಳು. ಸ್ವತಃ ತಾಯಿಯೇ ನನ್ನನ್ನು ಮಾರಲು ಯತ್ನಿಸುತ್ತಿದ್ದಾಳೆ ಮತ್ತು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾಳೆ ಎಂದು ಯುವತಿ ಆರೋಪಿಸಿದ್ದಳು.

ಪೊಲೀಸರ ಕ್ರಮಗಳು ಹೇಗಿರುತ್ತವೆ ಎಂಬ ಸಾಮಾನ್ಯ ಕಲ್ಪನೆಯಂತೆ ಇದೂ ನಡೆದು ಹೋಯಿತು. ತಾಯಿಯ ಇಚ್ಛೆಯಂತೆ ಆರತಿಗೆ ಜೂನ್ 24ರಂದು ಎರಡನೇ ಮದುವೆ ನಡೆಸಲಾಯಿತು. ಯುವತಿಯ ಪ್ರತಿಭಟನೆಯನ್ನು ಕೇಳುವವರು ಯಾರೂ ಇರಲಿಲ್ಲ.

ಆದರೆ ಇದೀಗ ಸಂಜಯ್ ಬಹಿರಂಗವಾಗಿ ತಿರುಗಿ ಬಿದ್ದಿದ್ದಾನೆ. ಆರತಿಯನ್ನು ರಕ್ಷಿಸಬೇಕು, ಆಕೆಯ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿಸಲಾಗಿದೆ ಎಂದೆಲ್ಲಾ ಪತ್ರಿಕೆಗಳ ಮುಂದೆ ಅಲವತ್ತುಕೊಂಡಿದ್ದಾನೆ.

ಸುದ್ದಿ ಮಾಧ್ಯಮಗಳಲ್ಲಿ ವರದಿಗಳು ಬರುತ್ತಿದ್ದಂತೆ ಮಹಿಳಾ ಮತ್ತು ಮಾನವ ಹಕ್ಕುಗಳ ಆಯೋಗಗಳೂ ಎಚ್ಚೆತ್ತಿವೆ. ಆರತಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿವೆ. ಇತ್ತ ಸಂಜಯ್ ತನ್ನ ಆರತಿಯ ಚಿತ್ರವನ್ನು ಹಿಡಿದುಕೊಂಡು ನಿರೀಕ್ಷೆಯಲ್ಲಿ ದಿನ ದೂಡುತ್ತಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ