ಮುಂಬೈಯಲ್ಲೂ ಕನ್ನಡಿಗರಿದ್ದಾರೆ, ನೆನಪಿರಲಿ: ಠಾಕ್ರೆ ಎಚ್ಚರಿಕೆ
ಮುಂಬೈ, ಗುರುವಾರ, 15 ಜುಲೈ 2010( 11:17 IST )
ಬೆಳಗಾವಿಯಲ್ಲಿ ಮರಾಠಿ ಭಾಷಿಗರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಶಿವಸೇನಾ ವರಿಷ್ಠ ಬಾಳಾ ಠಾಕ್ರೆ, ಪ್ರತೀಕಾರವಾಗಿ ಮುಂಬೈಯಲ್ಲಿನ ಕನ್ನಡಿಗರ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.
ಬೆಳಗಾವಿ ಕುರಿತು ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ವಿವಾದಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಠಾಕ್ರೆ ಎಚ್ಚರಿಕೆ ರವಾನಿಸಿದ್ದಾರೆ. ಮರಾಠಿಗರ ಮೇಲೆ ನಿಮ್ಮ ರಾಜ್ಯದಲ್ಲಿ ದೌರ್ಜನ್ಯ ಮುಂದುವರಿಯುವುದೆಂದರೆ ಅದು ಕನ್ನಡಿಗರ ಮೇಲೆ ದಾಳಿಗೆ ಆಹ್ವಾನ ನೀಡಿದಂತೆ ಎಂದು ಹೇಳಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಮರಾಠಿ ಭಾಷಿಗರನ್ನು ಗುರಿ ಮಾಡಲಾಗುತ್ತಿದೆ. ಆದರೆ ಮಹಾರಾಷ್ಟ್ರ ಮತ್ತು ಮುಂಬೈಗಳಲ್ಲಿ ಉಡುಪಿ ಸೇರಿದಂತೆ ಕರ್ನಾಟಕದ ಹಲವು ಭಾಗಗಳ ಕನ್ನಡಿಗರು ನೆಲೆಸಿದ್ದಾರೆ ಎಂಬುದನ್ನು ಮರೆಯದಿರಲಿ. ನಾವು ಎಲ್ಲಾದರೂ ಅವರಂತೆ ಬೀದಿಗಿಳಿದಲ್ಲಿ, ಯಡಿಯೂರಪ್ಪ ತೀವ್ರ ಸಂಕಷ್ಟಕ್ಕೆ ಸಿಲುಕಬೇಕಾದೀತು ಎಂದು ಪಕ್ಷದ ಮುಖವಾಣಿ 'ಸಾಮ್ನಾ'ದಲ್ಲಿ ಠಾಕ್ರೆ ಎಚ್ಚರಿಸಿದ್ದಾರೆ.
ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಬಸ್ಸುಗಳು ಬರುತ್ತಿವೆ. ನಾನೆಲ್ಲಾದರೂ ತಾಳ್ಮೆಯನ್ನು ಕಳೆದುಕೊಂಡಲ್ಲಿ ಶಾಂತಿ ಪ್ರಿಯರಾಗಿರುವ ಮರಾಠಿ ಮಾನೂಗಳು ಸುಮ್ಮನಿರಲಾರರು ಎಂದು ಮುಖ್ಯಮಂತ್ರಿಯವರ ಹೆಸರನ್ನು ಉಲ್ಲೇಖಿಸಿ ಠಾಕ್ರೆ ಎರಡನೇ ಎಚ್ಚರಿಕೆಯನ್ನೂ ನೀಡಿದ್ದಾರೆ.
ಕರ್ನಾಟಕದ ಬೆಳಗಾವಿ, ಬೀದರ್, ಕಾರವಾರ ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿನ ಮರಾಠಿ ಭಾಷಿಗರ ಪ್ರಾಬಲ್ಯವಿರುವ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮಹಾರಾಷ್ಟ್ರ ಮಾಡಿದ್ದ ಮನವಿಯನ್ನು ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ಅಫಿದಾವಿತ್ ಸಲ್ಲಿಸಿದ ನಂತರ ಈ ಬೆಳವಣಿಗೆಗಳು ಕಾಣಿಸಿಕೊಂಡಿವೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾನ್ ಈಗಾಗಲೇ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ, ವಿವಾದಿತ ಪ್ರದೇಶಗಳಲ್ಲಿ ಕೇಂದ್ರಾಡಳಿತ ಹೇರುವಂತೆ ಒತ್ತಾಯಿಸಿದ್ದಾರೆ. ಇತ್ತ ಬೆಳಗಾವಿಯಲ್ಲೂ ಕೆಲವು ಮರಾಠಿಗರ ಪ್ರತಿಭಟನೆಗೆ ಎಂಇಎಸ್ ಮುಂತಾದ ಸಂಘಟನೆಗಳು ಬೆಂಬಲ ನೀಡುತ್ತಿವೆ.
ಇದರೊಂದಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವಿನ ವಿವಾದ ಭುಗಿಲೇಳುವ ಲಕ್ಷಣಗಳು ಕಾಣಿಸುತ್ತಿವೆ. ಈ ಪರಿಸ್ಥಿತಿಯ ಲಾಭವನ್ನು ಬಳಸಿಕೊಂಡು ರಾಜಕೀಯ ಮೈಲೇಜ್‌ಗೆ ಶಿವಸೇನೆ ಮತ್ತೊಮ್ಮೆ ಯತ್ನಿಸುತ್ತಿರುವುದು ಠಾಕ್ರೆ ಹೇಳಿಕೆಯಿಂದ ಸ್ಪಷ್ಟವಾಗಿದೆ.