ಬಾಬ್ರಿ ಮಸೀದಿ ಧ್ವಂಸಕ್ಕೆ ಕಾರಣರಾದ ಕಲ್ಯಾಣ್ ಸಿಂಗ್ ಜತೆ ಸ್ನೇಹ ಮಾಡಿಕೊಂಡದ್ದಕ್ಕೆ ಮುಸ್ಲಿಂ ಸಮುದಾಯವು ನನ್ನನ್ನು ಕ್ಷಮಿಸಬೇಕು ಎಂದು ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಮನವಿ ಮಾಡಿಕೊಂಡಿದ್ದಾರೆ.
ಮತ್ತೆ ಮುಸ್ಲಿಮರನ್ನು ಓಲೈಸಿಕೊಂಡು ಉತ್ತರ ಪ್ರದೇಶ ಮುಖ್ಯಮಂತ್ರಿ ಗಾದಿಯ ಕನಸಿನಲ್ಲಿರುವ ಮುಲಾಯಂ, 'ಈ ಹಿಂದೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೇಂದ್ರದಲ್ಲಿ ಕೋಮುವಾದಿಗಳು ಅಧಿಕಾರಕ್ಕೆ ಬರಬಾರದೆಂದು ನಾನು ದುಷ್ಟ ಶಕ್ತಿಗಳ ಸಹಕಾರ ಪಡೆದುಕೊಂಡಿದ್ದೆ. ಆದರೆ ಇದು ಜಾತ್ಯತೀತ ಶಕ್ತಿಗಳಿಗೆ, ಅದರಲ್ಲೂ ಮುಸ್ಲಿಂ ಸಹೋದರರಿಗೆ ತೀರಾ ಗೊಂದಲವನ್ನುಂಟು ಮಾಡಿತ್ತು. ಅವರ ಭಾವನೆಗಳಿಗೆ ನೋವಾಗಿತ್ತು. ಹಾಗಾಗಿ ನಾನು ಮಾಡಿರುವುದು ತಪ್ಪು ಎಂದು ಒಪ್ಪಿಕೊಳ್ಳುತ್ತೇನೆ. ಇದಕ್ಕಾಗಿ ನನ್ನನ್ನು ಮುಸ್ಲಿಂ ಸಮುದಾಯವು ಕ್ಷಮಿಸಿ ಬಿಡಬೇಕು' ಎಂದಿದ್ದಾರೆ.
ಈ ಬಗ್ಗೆ ನಾನು ಈಗಾಗಲೇ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದೇನೆ. ಖಂಡಿತಾ ಮುಂದಿನ ದಿನಗಳಲ್ಲಿ ಬಾಬ್ರಿ ಮಸೀದಿ ಧ್ವಂಸಕ್ಕೆ ಕಾರಣರಾದವರ, ಹೊಣೆಗಾರರ ಬೆಂಬಲವನ್ನು ಯಾವುದೇ ಸಂದರ್ಭದಲ್ಲೂ ಪಡೆಯಲಾರೆ ಎಂದು ಮುಸ್ಲಿಮರಿಗೆ ಮುಲಾಯಂ ಭರವಸೆ ನೀಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಮುಸ್ಲಿಮರ ಮುನಿಸಿಗೊಳಗಾಗಿದ್ದ ಅವರು, ಮುಂದೆ ಅದಕ್ಕೆ ಅವಕಾಶ ನೀಡದೇ ಇರಲು ನಿರ್ಧರಿಸಿದ್ದಾರೆ. ಈ ಬಗ್ಗೆ ನಾನು ಮುಸ್ಲಿಂ ಸಹೋದರರಿಗೆ ಭರವಸೆ ನೀಡುತ್ತಿದ್ದೇನೆ. ಈ ಹಿಂದೆ ಮಾಡಿದ ತಪ್ಪುಗಳು ಖಂಡಿತಾ ಪುನರಾವರ್ತನೆಯಾಗುವುದಿಲ್ಲ. ಮುಸ್ಲಿಂ ಸಮುದಾಯದ ಪರ ಧ್ವನಿಯನ್ನು ನಾನು ಮುಂದುವರಿಸುತ್ತೇನೆ ಎಂದಿದ್ದಾರೆ.
ಕೋಮುವಾದಿ ಶಕ್ತಿಗಳ ವಿರುದ್ಧ ತಾನು ಹೋರಾಡಿರುವುದು ನನ್ನ ಸಾರ್ವಜನಿಕ ಜೀವನದಲ್ಲಿ ನಡೆದುಕೊಂಡು ಬಂದಿರುವ ಮಹತ್ವದ ವಿಚಾರ. ಆ ಶಕ್ತಿಗಳನ್ನು ಮಣಿಸುವ ಸಂದರ್ಭದಲ್ಲಿ ನಾನೇ ಮುಂದೆ ನಿಲ್ಲುತ್ತೇನೆ, ಅದು ನನ್ನ ಕರ್ತವ್ಯ. 1990ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿಯನ್ನು ಉಳಿಸಲು ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೆ ಎಂದು ಹೇಳಿದ್ದಾರೆ.
ಆದರೂ 1992ರ ಡಿಸೆಂಬರ್ ಆರರಂದು ಮಸೀದಿಯನ್ನು ಧ್ವಂಸಗೊಳಿಸಲಾಯಿತು. ಅದಕ್ಕೆ ಆಗಿನ ಮುಖ್ಯಮಂತ್ರಿಯೇ ಹೊಣೆ ಎಂದು ಬಿಜೆಪಿಯನ್ನು ತೊರೆದು ಸಮಾಜವಾದಿ ಪಕ್ಷಕ್ಕೆ ಸೇರಿದ್ದ ಕಲ್ಯಾಣ್ ಸಿಂಗ್‌ರನ್ನು ಉಲ್ಲೇಖಿಸಿ ಮುಲಾಯಂ ಜರೆದಿದ್ದಾರೆ.
ಕೆಲವು ತಿಂಗಳ ಹಿಂದಷ್ಟೇ ಮುಲಾಯಂ ಪಕ್ಷದಿಂದ ಕಲ್ಯಾಣ್ ಹೊರ ಬಂದಿದ್ದು, ಮತ್ತೆ ಬಿಜೆಪಿ ಸೇರುವ ಸಿದ್ಧತೆಯಲ್ಲಿದ್ದಾರೆ.