ಡೇವಿಡ್ ಕೋಲ್ಮನ್ ಹೆಡ್ಲಿ ಮತ್ತು ತಹಾವುರ್ ಹುಸೈನ್ ರಾಣಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಬೇಕೆಂದು ದೆಹಲಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದ ರಾಷ್ಟ್ರೀಯ ತನಿಖಾ ದಳವು ಇದೀಗ ಅದನ್ನು ಹಿಂದಕ್ಕೆ ಪಡೆದಿದೆ.
ಭಾರತದಲ್ಲಿ ದಾಳಿಗಳನ್ನು ನಡೆಸಲು ಯೋಜನೆಗಳನ್ನು ರೂಪಿಸಿದ್ದ ಆರೋಪಿಗಳನ್ನು ವಿಚಾರಣೆ ನಡೆಸಲು ಅಮೆರಿಕಾ ಅವಕಾಶ ನೀಡಿರುವುದರಿಂದ ಅವರ ವಿರುದ್ಧದ ವಾರೆಂಟುಗಳನ್ನು ಹಿಂದಕ್ಕೆ ಪಡೆದುಕೊಳ್ಳುತ್ತಿರುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯಕ್ಕೆ ತಿಳಿಸಿದೆ.
ಅದೇ ಹೊತ್ತಿಗೆ ಭಾರತದ ಮೇಲೆ ದಾಳಿಗೆ ಸಂಚು ರೂಪಿಸಿದ ಪಾಕಿಸ್ತಾನ ಮೂಲದ ಝಾಕೀರ್ ರೆಹಮಾನ್ ಲಖ್ವಿ ಮತ್ತು ಹಫೀಜ್ ಸಯೀದ್, ಪಾಕ್ ಸೇನೆ ಇಬ್ಬರು ಅಧಿಕಾರಿಗಳು ಮತ್ತು ಇನ್ನಿಬ್ಬರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸುವಂತೆ ಎನ್ಐಎ ಹೊಸ ಮನವಿಯನ್ನು ಮಾಡಿಕೊಂಡಿದೆ.
ಭಾರತವು ಗಡೀಪಾರು ಒಪ್ಪಂದ ಹೊಂದಿರುವ ಅಮೆರಿಕಾದ ವಶದಲ್ಲಿ ಹೆಡ್ಲಿ ಮತ್ತು ರಾಣಾ ಇದ್ದು, ಅವರ ವಿಚಾರಣೆಗೆ ಈಗಾಗಲೇ ನಮಗೆ ಅವಕಾಶ ನೀಡಿರುವುದರಿಂದ ಅವರ ವಿರುದ್ಧದ ವಾರೆಂಟ್ ಹಿಂದಕ್ಕೆ ಪಡೆದುಕೊಳ್ಳುತ್ತಿದ್ದೇವೆ ಎಂದು ಎನ್ಐಎ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.
ಲಖ್ವಿ ಮತ್ತು ಸಯೀದ್ ಸೇರಿದಂತೆ ಇತರ ನಾಲ್ವರ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡುವ ಅಗತ್ಯವಿರುವುದರಿಂದ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಬೇಕಾಗಿದೆ ಎಂದು ನ್ಯಾಯಾಲಯದಲ್ಲಿ ಅದು ತಿಳಿಸಿದೆ.
2008ರ ಮುಂಬೈ ಭಯೋತ್ಪಾದನಾ ದಾಳಿಗೆ ಸಂಬಂಧಪಟ್ಟಂತೆ ಕಳೆದ ವರ್ಷದ ನವೆಂಬರ್ 11ರಂದು ದಾಖಲಾಗಿರುವ ಎಫ್ಐಆರ್‌ನಂತೆ ಲಖ್ವಿ, ಸಯೀದ್, ಪಾಕಿಸ್ತಾನ ಸೇನೆಯ ಮೇಜರ್ ಇಕ್ಬಾರ್ ಮತ್ತು ಮೇಜರ್ ಸಮೀರ್ ಆಲಿ ಹಾಗೂ ಸಜೀದ್ ಮಿರ್ ಮತ್ತು ಅಬ್ದುಲ್ ರೆಹಮಾನ್ ಬೇಕಾಗಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿಕೊಂಡಿದೆ.