ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಲಿ ಗಂಡ, ಬಾಬಾ ಮಂತ್ರವಾದಿ; ಕೆಲಸ ತಲೆಹಿಡುಕರದ್ದು!
(Rehana Katharia | Hazrat Ikram Ali | Sophiya | Yusuf Katharia)
ತನ್ನ ಮೊದಲನೇ ಗಂಡನಿಂದ ಹುಟ್ಟಿದ್ದ ಮಗಳನ್ನು ಹಾದರಕ್ಕೆ ತಳ್ಳಲು ಮತ್ತು ಅನುಭವಿಸಲು ಹಾಗೂ ಮಗನನ್ನು ಬಲಿ ಕೊಡಲು ಯತ್ನಿಸುತ್ತಿರುವ ಗಂಡ ಮತ್ತು ಮಂತ್ರವಾದಿ ಬಾಬಾ ವಿರುದ್ಧ ಮಹಿಳೆಯೊಬ್ಬಳು ಕೆರಳಿ ನಿಂತಿರುವ ಪ್ರಕರಣವಿದು.
ಮೇಲ್ನೋಟಕ್ಕೆ ಇಲ್ಲಿ ಕಾಣುವ ಕಾರಣ ಆಸ್ತಿ. ಆದರೂ ಮಲಮಗಳನ್ನೇ ಸೆರಗು ಹಾಸಲು ಹೇಳುವಾತ ಮತ್ತು ಮಂತ್ರವಾದಿ ಬಾಬಾನ ಬಗ್ಗೆ ಸಾಕಷ್ಟು ಸಂಶಯಗಳು ಮೂಡಿದ್ದು, ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.
ಇದು ಮುಂಬೈಯ ಕಾಂದಿವಿಲಿಯಲ್ಲಿ ನಡೆದಿರುವ ಘಟನೆ. ಇಲ್ಲಿ ದೂರು ನೀಡಿರುವ ತಾಯಿ ರೆಹಾನಾ ಕಠಾರಿಯಾ (33) ಮಗಳು ಸೋಫಿಯಾ (15) ಮತ್ತು ಬಾಲಕ ರಫೀಕ್ (3) ಎಂಬವರೇ ಬಲಿಪಶುಗಳು.
ರೆಹಾನಾ ನೀಡಿರುವ ದೂರಿನ ಪ್ರಕಾರ ಇಲ್ಲಿ ಸೂತ್ರಧಾರಿ ಎರಡನೇ ಗಂಡ ಯೂಸುಫ್ ಕಠಾರಿಯಾ (51). ಈತ ಲಂಡನ್‌ನಲ್ಲಿ ಉದ್ಯಮಿ. ಗಂಡ ಮತ್ತು ಗುಜರಾತ್‌ನ ಬರೋಡಾದ ಮಂತ್ರವಾದಿ ಹಜ್ರತ್ ಇಕ್ರಮ್ ಆಲಿ ಸೇರಿಕೊಂಡು ನನ್ನ ಇಬ್ಬರು ಮಕ್ಕಳನ್ನು ಮುಗಿಸಲು ಸಂಚು ರೂಪಿಸಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ.
ಮಾಧ್ಯಮಗಳು ಆಲಿಯನ್ನು ಸಂಪರ್ಕಿಸಿದ ಸಂದರ್ಭದಲ್ಲಿ 'ಯೂಸುಫ್ ತನ್ನ ಗೆಳೆಯ' ಎಂಬುದನ್ನು ಒಪ್ಪಿಕೊಂಡಿದ್ದಾನೆ. ಆದರೆ ತಾನು ರೆಹಾನಾ ಅಥವಾ ಆಕೆಯ ಮಕ್ಕಳಿಗೆ ಕಿರುಕುಳ ನೀಡಿರುವುದಾಗಲಿ ಅಥವಾ ಮಗುವನ್ನು ಬಲಿ ಕೊಡಬೇಕೆಂದು ಒತ್ತಾಯಿಸಿರುವುದಾಗಲೀ ಮಾಡಿಲ್ಲ ಎಂದಿದ್ದಾನೆ.
ಈ ದುರುಳರ ಬಗ್ಗೆ ಬಲಿಪಶು ರೆಹಾನಾ ಕಠಾರಿಯಾ ಏನು ಹೇಳುತ್ತಿದ್ದಾಳೆ ಎಂಬುದನ್ನು ಆಕೆಯ ಮಾತಿನಲ್ಲೇ ಕೇಳಿ.
ಆಲಿಯೇ ದೇವರಂತೆ... ತಾನು ದೇವರೆಂದು ಹೇಳಿಕೊಳ್ಳುತ್ತಿರುವ ಆಲಿ, ತನ್ನ ಮಗಳು ಸೋಫಿಯಾಳ ಜತೆ ದೈಹಿಕ ಸಂಬಂಧ ಹೊಂದಲು ಯತ್ನಿಸುತ್ತಿದ್ದಾನೆ. ಅಲ್ಲದೆ ನನ್ನ ಎರಡನೇ ಗಂಡ ಯೂಸುಫ್ ಜತೆಗೂ ಮಗಳು ಸಂಬಂಧ ಹೊಂದಬೇಕು ಎಂದು ಒತ್ತಾಯ ಮಾಡುತ್ತಿದ್ದಾನೆ.
ನನಗೂ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಷ್ಟೇ ಅಲ್ಲದೆ ಮಗ ರಫೀಕ್‌ನನ್ನು ಮಂತ್ರವಾದಿ ಕ್ರಿಯೆಗಳಿಗಾಗಿ ಬಲಿ ಕೊಡಬೇಕು ಎಂದು ಯೂಸುಫ್ ಮತ್ತು ಅತ್ತೆ ಅಮೀಮಾ (70) ಕಳೆದ ಮೂರು ವರ್ಷಗಳಿಂದ ಬಲವಂತ ಮಾಡುತ್ತಿದ್ದಾರೆ.
ಎಲ್ಲವೂ ಆಸ್ತಿಗಾಗಿ... ನನ್ನ ಮೊದಲ ಗಂಡನಿಂದ ಹುಟ್ಟಿದ ಮಗಳು ಸೋಫಿಯಾಳಿಗೆ ಎರಡನೇ ಗಂಡ ಯೂಸುಫ್ ಭ್ರಾಂತಿ ಹುಟ್ಟಿಸಿದ್ದಾನೆ. ಮಗ ರಫೀಕ್‌ನನ್ನು ಕೊಲ್ಲಬೇಕು ಎನ್ನುವುದು ಆತನ ಉದ್ದೇಶ. ಇವೆಲ್ಲದರ ಹಿಂದಿರುವ ಕಾರಣ ನನ್ನ ಆಸ್ತಿ. ಅದಕ್ಕಾಗಿ ನನ್ನ ಗಂಡ ಗುಜರಾತಿನ ಮಂತ್ರವಾದಿಯನ್ನು ಬಳಸಿಕೊಳ್ಳುತ್ತಿದ್ದಾನೆ.
ಈ ರೀತಿ ಪದೇ ಪದೇ ಕಿರುಕುಳ ನೀಡುತ್ತಿದ್ದುದರಿಂದ ನನ್ನ ಇಬ್ಬರೂ ಮಕ್ಕಳನ್ನು ಕಟ್ಟಿಕೊಂಡು ಅವರಿಂದ ದೂರವಾಗಿ ಇಲ್ಲಿ ನೆಲೆಸಿದ್ದೇನೆ. ಆದರೂ ಅವರು ನನ್ನನ್ನು ಹಿಂಬಾಲಿಸಿಕೊಂಡು ಬಂದು ಎರಡೆರಡು ಬಾರಿ ಬೆದರಿಕೆ ಹಾಕಿದ್ದಾರೆ. ಮಗನನ್ನು ಬಿಟ್ಟು ಬಿಡಬೇಕು ಮತ್ತು 10 ಲಕ್ಷ ರೂಪಾಯಿಗಳನ್ನು ನಮಗೆ ನೀಡಬೇಕೆಂದು ಆಲಿ ಕಡೆಯವರು ಹೇಳುತ್ತಿದ್ದಾರೆ.
ಪೊಲೀಸರು ಏನು ಹೇಳುತ್ತಾರೆ? ರೆಹಾನಾ ನಮಗೆ ದೂರು ನೀಡಿದ್ದಾಳೆ. ನಾವು ತನಿಖೆ ನಡೆಸಿ ಸತ್ಯಾಂಶ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಆಲಿಯನ್ನು ಬಂಧಿಸಲು ನಮ್ಮ ತಂಡವೀಗ ಬರೋಡಾಕ್ಕೆ ಹೋಗಿದೆ ಎಂದು ಎಸಿಪಿ ಮೂಸಾ ಶೇಖ್ ತಿಳಿಸಿದ್ದಾರೆ.
ಇಬ್ಬರು ಪ್ರಮುಖ ಆರೋಪಿಗಳಾದ ಯೂಸುಫ್ ಮತ್ತು ಆತನ ತಾಯಿ ಅಮೀಮಾ ಲಂಡನ್‌ನಲ್ಲಿದ್ದಾರೆ. ಹಾಗಾಗಿ ಅವರು ವಾಪಸ್ ಬರುವ ಹೊತ್ತಿನಲ್ಲಿ ಬಂಧಿಸುವಂತೆ ಭಾರತದ ಎಲ್ಲಾ ವಿಮಾನ ನಿಲ್ದಾಣಗಳ ಪೊಲೀಸರಿಗೂ ಸೂಚನೆ ನೀಡಲಾಗಿದೆ. ಅವರ ವಿರುದ್ಧ ವರದಕ್ಷಿಣೆ ಮತ್ತು ಕಿರುಕುಳ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.