ಕರ್ನಾಟಕದ ಒಟ್ಟು ಜನಸಂಖ್ಯೆಯ ಸರಿಸುಮಾರು ಅರ್ಧದಷ್ಟು ಬಡತನದಲ್ಲೇ ಜೀವನ ಸಾಗಿಸುತ್ತಿದ್ದಾರೆ, ಅಷ್ಟೇ ಏಕೆ ಇಡೀ ಭಾರತದ ಅರ್ಧಕ್ಕಿಂತಲೂ ಹೆಚ್ಚು ಮಂದಿ ಇದೇ ಸ್ಥಿತಿಯಲ್ಲಿದ್ದಾರೆ. ಇಂತಹ ಒಂದು ವರದಿಯನ್ನು ಬಿಡುಗಡೆ ಮಾಡಿರುವುದು ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ ವಿಭಾಗ.
ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ವಿಭಾಗಕ್ಕಾಗಿ (ಯುಎನ್‌ಡಿಪಿ) ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ತಯಾರಿಸಿದ ಬಹುಕ್ಷೇತ್ರೀಯ ಬಡತನ ಸೂಚ್ಯಂಕದಲ್ಲಿ (ಎಂಪಿಐ) ಈ ಎಲ್ಲಾ ವಿವರಣೆಗಳಿವೆ. ಇದನ್ನು ಮುಂಬರುವ ಯುಎನ್‌ಡಿಪಿಯ 20ನೇ ವಾರ್ಷಿಕ ವರದಿಯಲ್ಲಿ ಪ್ರಕಟಿಸಲಾಗುತ್ತದೆ.
ಕರ್ನಾಟಕದಲ್ಲಿ.... ಈ ಸಮೀಕ್ಷೆಗೆ ತೆಗೆದುಕೊಂಡಿರುವ 2007ರ ಅಂಕಿ-ಅಂಶಗಳ ಪ್ರಕಾರ ಕರ್ನಾಟಕದಲ್ಲಿ 5.86 ಕೋಟಿ ಜನಸಂಖ್ಯೆಯಿದ್ದು, ಇವರಲ್ಲಿ 2.7 ಕೋಟಿ ಮಂದಿ ಬಡತನದಲ್ಲೇ ಇದ್ದಾರೆ.
ಅಂದರೆ ಶ್ರೀಮಂತ ರಾಜ್ಯಗಳ ಪಟ್ಟಿಯಲ್ಲಿ ದೇಶದಲ್ಲೇ 12ನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಶೇ.46.1ರಷ್ಟು ಮಂದಿ ಬಡತನದಲ್ಲಿದ್ದಾರೆ. ಒಟ್ಟಾರೆ ದೇಶದ ಬಡತನಕ್ಕೆ ರಾಜ್ಯದ ಕೊಡುಗೆ ಶೇ.4.2. ರಾಜ್ಯದಲ್ಲಿ ಸುಮಾರು 3.16 ಕೋಟಿ ಮಂದಿ ಬಡತನ ರೇಖೆಗಿಂತ ಮೇಲಿದ್ದಾರೆ ಎಂದು ಈ ಸಮೀಕ್ಷೆ ಹೇಳುತ್ತಿದೆ.
ಮುಂಚೂಣಿಯಲ್ಲಿ ದೆಹಲಿ, ಕೇರಳ... ದೇಶದ ಒಟ್ಟು ರಾಜ್ಯಗಳನ್ನು ಗಣನೆಗೆ ತೆಗೆದುಕೊಂಡಾಗ ದೆಹಲಿ, ಕೇರಳ, ಗೋವಾ, ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ಗಳು ಆರ್ಥಿಕ ಪರಿಸ್ಥಿತಿಯಲ್ಲಿ ಅತ್ಯುತ್ತಮ ಎಂಬುದು ಬಹಿರಂಗವಾಗಿದೆ.
ಇಲ್ಲಿ ಮೊದಲ ಸ್ಥಾನದಲ್ಲಿ ಕೇರಳವಿದೆ. 3.5 ಕೋಟಿ ಜನಸಂಖ್ಯೆ ಹೊಂದಿರುವ ಈ ರಾಜ್ಯದಲ್ಲಿ ಶೇ.15.9ರಷ್ಟು ಮಾತ್ರ ಬಡವರಿದ್ದಾರೆ. ಎರಡನೇ ಮತ್ತು ಮೂರನೇ ಸ್ಥಾನ ಕ್ರಮವಾಗಿ ಗೋವಾ ಮತ್ತು ಪಂಜಾಬ್ ಪಾಲಾಗಿದೆ.
ನಂತರದ ಸ್ಥಾನಗಳಲ್ಲಿ ಹಿಮಾಚಲ ಪ್ರದೇಶ, ತಮಿಳುನಾಡು, ಉತ್ತರಾಂಚಲ, ಮಹಾರಾಷ್ಟ್ರ, ಹರ್ಯಾಣ, ಗುಜರಾತ್, ಜಮ್ಮು-ಕಾಶ್ಮೀರ ಮತ್ತು ಆಂಧ್ರಪ್ರದೇಶಗಳಿವೆ.
13ರಿಂದ 21ರ ನಡುವೆ ಭಾರತದ ಪೂರ್ವ ರಾಜ್ಯಗಳು, ಪಶ್ಚಿಮ ಬಂಗಾಳ, ಒರಿಸ್ಸಾ, ರಾಜಸ್ತಾನ, ಉತ್ತರ ಪ್ರದೇಶ, ಛತ್ತೀಸ್‌ಗಢ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಬಿಹಾರಗಳಿವೆ.
ಭಾರತದಲ್ಲಿ ಶೇ.55.4 ಬಡವರು... ಒಟ್ಟಾರೆ ಭಾರತದ 116.47 ಕೋಟಿ ಜನರಲ್ಲಿ ಶೇ.55.4 ಅಂದರೆ 64.53 ಕೋಟಿ ಮಂದಿ ಬಡತನ ರೇಖೆಯ ಕೆಳಗಿದ್ದಾರೆ. ಇವರು ದಿನಕ್ಕೆ 59 ರೂಪಾಯಿಗಳ ಸಂಪಾದನೆಯನ್ನೂ ಹೊಂದಿಲ್ಲ ಎಂದು ಈ ವರದಿ ಹೇಳುತ್ತಿದೆ.
ವಿಶ್ವದ 104 ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಪಾಕಿಸ್ತಾನ (36ನೇ ಸ್ಥಾನ) ಶೇ.51, ಬಾಂಗ್ಲಾದೇಶ (27ನೇ ಸ್ಥಾನ) ಶೇ.58, ನೇಪಾಳ (20ನೇ ಸ್ಥಾನ) ಶೇ.65 ಬಡತನ ಹೊಂದಿದ್ದರೆ, ಭಾರತವು ಶೇ.55ರಷ್ಟು ಬಡತನ ಹೊಂದಿದೆ.
ಈ ಪಟ್ಟಿಯಲ್ಲಿ ಅತಿ ಬಡತನ ಹೊಂದಿರುವ ದೇಶಗಳ ಸಾಲಿನಲ್ಲಿ ಎಂಟನೇ ಸ್ಥಾನದಲ್ಲಿರುವ ಗಿನಿ (Guinea) ಭಾರತದ ಅತಿ ಬಡತನ ಹೊಂದಿರುವ ರಾಜ್ಯ ಬಿಹಾರಕ್ಕೆ ಸಮಾನ. ಅದೇ ರೀತಿ ದೆಹಲಿಯು ಇರಾಕ್‌ಗೆ (45) ಸಮಾನವಾಗಿದೆ. ಒಟ್ಟಾರೆ ಭಾರತವು ಇಲ್ಲಿ 30ನೇ ಸ್ಥಾನ ಪಡೆದುಕೊಂಡಿದೆ.
ಶಿಕ್ಷಣ, ಆರೋಗ್ಯ, ಜೀವನದ ಗುಣಮಟ್ಟ, ಸರಕಾರಗಳು, ಸರಕಾರೇತರ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ನಾಗರಿಕ ಸಮಾಜ ಮುಂತಾದ ಅಂಶಗಳನ್ನು ಪರಿಗಣಿಸಿದ ನಂತರ ಈ ವರದಿಯನ್ನು ತಯಾರಿಸಲಾಗಿದೆ.