ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೇಡಂ ಬಳಿ 'ಕೈ' ದಂಡು; ಯಡ್ಡಿ ಪಡೆ ವಿರುದ್ಧ ದೂರು (Sonia Gandhi | RV Deshpande | Sidharamaih | Congress)
Bookmark and Share Feedback Print
 
ಕರ್ನಾಟಕದ ಬಿ.ಎಸ್. ಯಡಿಯೂರಪ್ಪನವರ ಬಿಜೆಪಿ ಸರಕಾರದ ವಿರುದ್ಧ ರಾಜ್ಯಪಾಲರ ದೆಹಲಿ ದಂಡಯಾತ್ರೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ನಾಯಕರು ಶುರು ಹಚ್ಚಿಕೊಂಡಿದ್ದಾರೆ. ಅದರ ಮೊದಲ ಅಂಗವಾಗಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಭೇಟಿಯಾಗಿದ್ದಾರೆ.

ಇಂದು ಬೆಳಿಗ್ಗೆ 11 ಗಂಟೆ ಹೊತ್ತಿಗೆ ದೆಹಲಿಯ ಜನಪಥ್ ರಸ್ತೆಯಲ್ಲಿನ ಸೋನಿಯಾ ಅಧಿಕೃತ ನಿವಾಸಕ್ಕೆ ತೆರಳಿದ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ವಿವರಿಸಿದರು.

ಇಬ್ಬರೂ ನಾಯಕರು ಸುಮಾರು ಒಂದೂವರೆ ಗಂಟೆಗಳ ಕಾಲ ಸೋನಿಯಾ ಜತೆ ಸಮಾಲೋಚನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಗುಲಾಂ ನಬೀ ಆಜಾದ್ ಕೂಡ ಉಪಸ್ಥಿತರಿದ್ದರು.

ಅಕ್ರಮ ಗಣಿಗಾರಿಕೆ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ರಾಜ್ಯ ಸರಕಾರ ನಿರಾಕರಿಸುತ್ತಿರುವುದು, ಸದನದಲ್ಲಿ ನಡೆಯುತ್ತಿರುವ ಅಹೋರಾತ್ರಿ ಮುಷ್ಕರ, ಬಳ್ಳಾರಿಗೆ ಕಾಂಗ್ರೆಸ್ ಕೈಗೊಳ್ಳಲಿರುವ ಪಾದಯಾತ್ರೆ, ಪಕ್ಷದ ಬಲವರ್ದನೆಗಾಗಿ ಕೈಗೊಂಡಿರುವ ಕ್ರಮಗಳು ಸೇರಿದಂತೆ ರಾಜ್ಯ ರಾಜಕೀಯದ ಹತ್ತು ಹಲವು ವಿಚಾರಗಳನ್ನು ಈ ಸಂದರ್ಭದಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ರಾಜಧಾನಿಗೆ ತೆರಳಿರುವ ರಾಜ್ಯದ ಕಾಂಗ್ರೆಸ್ ನಾಯಕರು ನಾಳೆ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ.

ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ತನ್ನ ಐದು ದಿನಗಳ ದೆಹಲಿ ಪ್ರವಾಸವನ್ನು ಮುಗಿಸಿ ನಿನ್ನೆಯಷ್ಟೇ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಅವರು ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಗೃಹಸಚಿವ ಪಿ. ಚಿದಂಬರಂ ಹಾಗೂ ಪ್ರಧಾನಿ ಸಿಂಗ್ ಸೇರಿದಂತೆ ಹಲವು ಕೇಂದ್ರದ ಮುಖಂಡರನ್ನು ಭೇಟಿಯಾಗಿ, ರಾಜ್ಯದ ರಾಜಕೀಯ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದ್ದರು.

ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತಿರುವ ಬಳ್ಳಾರಿ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕೆಂದು ಒತ್ತಡ ಹೇರಿದರೂ, ಮುಖ್ಯಮಂತ್ರಿ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಹಾಗಾಗಿ ಸಂವಿಧಾನದಲ್ಲಿರುವ ವಿಧಿಗಳನ್ನು ಬಳಸಿಕೊಂಡು ಕಳಂಕಿತ ಸಚಿವರನ್ನು ಕೈ ಬಿಡುವಂತೆ ಮಾಡುವ ಕುರಿತು ರಾಜ್ಯಪಾಲರು ಚರ್ಚೆ ನಡೆಸಿದ್ದರು ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ