ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾಜಿ ರಾಷ್ಟ್ರಪತಿ ಕಲಾಂರ 'ಚಿಂತನಾ ಚಾವಡಿ' ಧ್ವಂಸ (Thinking hut | president | APJ Abdul Kalam | Rashtrapati Bhavan)
Bookmark and Share Feedback Print
 
ಬ್ರಿಟೀಷ್ ವಾಸ್ತುಶಿಲ್ಪಿ ಎಡ್ವಿನ್‌ ಲ್ಯಾಂಡ್‌ಸೀರ್‌ ಲುಟಿನ್ಸ್‌ ಕಲ್ಪನೆಯ ಕೂಸು ರಾಷ್ಟ್ರಪತಿ ಭವನದ ಮೂಲ ವಿನ್ಯಾಸವನ್ನೇ ಉಳಿಸಿಕೊಳ್ಳುವ ಯತ್ನದಲ್ಲಿರುವ ಕೇಂದ್ರ ಸರಕಾರವು, ಮೊಘಲ್ ಉದ್ಯಾನವನದಲ್ಲಿ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ನಿರ್ಮಿಸಿದ್ದ 'ಚಿಂತನಾ ಚಾವಡಿ'ಯನ್ನು ಧ್ವಂಸಗೊಳಿಸಿದೆ.

ಕಲಾಂ ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ಮಣಿಪುರಿ ಶೈಲಿಯ ಈ ಗುಡಿಸಲನ್ನು (Thinking hut) ಮೊಘಲ್ ಗಾರ್ಡನ್‌ನಲ್ಲಿ ನಿರ್ಮಿಸಲಾಗಿತ್ತು. ಈ 'ಚಿಂತನಾ ಚಾವಡಿ'ಯಲ್ಲಿ ಕಲಾಂ ಮುಂಜಾನೆ ಮತ್ತು ಮುಸ್ಸಂಜೆ ಹೊತ್ತನ್ನು ಕಳೆಯುತ್ತಿದ್ದರು.

ಇದನ್ನು 'ಥಿಂಕಿಂಗ್ ಹಟ್' ಎಂದೇ ಪ್ರೀತಿಯಿಂದ ಕರೆಯುತ್ತಿದ್ದ ಮಾಜಿ ರಾಷ್ಟ್ರಪತಿ, ಇಲ್ಲೇ ಇರುವ ಸೋಫಾಗಳಲ್ಲಿ ಕುಳಿತು ತಾನು ಎರಡು ಪುಸ್ತಕಗಳನ್ನು ಬರೆದಿರುವುದಾಗಿ ಹೇಳಿಕೊಂಡಿದ್ದರು.

ಕಲಾಂ ಅವರ ಕ್ರಿಯಾಶೀಲತೆಯ ಜೀವಾಳವಾಗಿದ್ದ ಈ ಗುಡಿಸಲಿಗೆ ಕುತ್ತು ಬಂದಿರುವುದು ಬದಲಾದ ವಿದ್ಯಮಾನಗಳಿಂದ. ಎಡ್ವಿನ್ ನಿರ್ಮಾಣದ ಈ ಸುಂದರ ಕಟ್ಟಡದ ವಿನ್ಯಾಸವನ್ನು ಈ ಹಿಂದಿನ ವೈಭವಕ್ಕೆ ಮರಳಿಸುವ ನಿಟ್ಟಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಮಿತಿ ಈ ನಿರ್ಧಾರಕ್ಕೆ ಬಂದಿದೆ.

ಈ ಸಮಿತಿ ಮಾಡಿರುವ ಸಲಹೆ ಪ್ರಕಾರ ಕಲಾಂ ಅವರ ಕನಸಿನ ಕೂಸು 'ಚಿಂತನಾ ಚಾವಡಿ' ಮಾತ್ರವಲ್ಲದೆ, ಮೊಘಲ್ ಉದ್ಯಾನವನದಲ್ಲಿನ ಆಧುನಿಕ ಸಂಗೀತ ಕಾರಂಜಿಯನ್ನೂ ತೆಗೆಯಲು ನಿರ್ಧರಿಸಲಾಗಿದೆ. ವಿಶ್ವ ವಿಖ್ಯಾತ ಪಾರಂಪರಿಕ ಕಟ್ಟಡದ ಪ್ರಾಮುಖ್ಯತೆಗೆ ಮತ್ತು ಘನತೆಗೆ ಇದರಿಂದ ಧಕ್ಕೆಯಾಗುತ್ತದೆ ಎಂಬ ನಿಟ್ಟಿನಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಇದು ಹಿಂದಿನ ವೈಸರಾಯ್ ಬಂಗಲೆ....
ನವದೆಹಲಿಯ ರೈಸಿನಾ ಹಿಲ್ ಮೇಲೆ ರಾಷ್ಟ್ರಪತಿ ಭವನ ಎಲ್ಲರ ಗಮನ ಸೆಳೆಯುತ್ತಿರುವುದು ಹೌದು, ಆದರೆ ಇದು ರಾಷ್ಟ್ರಪತಿಗೆ ನಿರ್ಮಾಣ ಮಾಡಿರುವುದಲ್ಲ, ಬದಲಿಗೆ ಬ್ರಿಟೀಷ್ ವೈಸರಾಯ್‌ಗಾಗಿ ಕಟ್ಟಲಾಗಿದ್ದು.

ಬ್ರಿಟೀಷ್ ವಾಸ್ತುಶಿಲ್ಪಿ ಎಡ್ವಿನ್ ಲುಟಿನ್ಸ್ ಕಲ್ಪನೆಯಂತೆ ಈ ಭಾರೀ ಬಂಗಲೆಯನ್ನು ಕಟ್ಟಲಾಗಿತ್ತು. ಇದರ ನಿರ್ಮಾಣವಾಗಿರುವುದು 80 ವರ್ಷಗಳ ಹಿಂದೆ. 340 ಕೋಣೆಗಳಿರುವ ರಾಷ್ಟ್ರಪತಿಯವರ ಅಧಿಕೃತ ನಿವಾಸಕ್ಕೆ ಆಗ ತಗುಲಿದ ವೆಚ್ಚ ಕೇವಲ 1.4 ಕೋಟಿ ರೂಪಾಯಿಗಳು.

1911ರಲ್ಲಿ ಬ್ರಿಟೀಷ್ ವೈಸರಾಯ್‌ಗಳು ಭಾರತದ ರಾಜಧಾನಿಯನ್ನು ಕೊಲ್ಕತ್ತಾದಿಂದ ದೆಹಲಿಗೆ ವರ್ಗಾಯಿಸುವ ಸಂದರ್ಭದಲ್ಲಿ ವೈಸರಾಯ್‌ಗೆ ಭವ್ಯ ಬಂಗಲೆ ನಿರ್ಮಿಸಬೇಕೆಂಬ ಉದ್ದೇಶದಿಂದ ದೇಶವೇ ಹೆಮ್ಮೆ ಪಡುವ ಮಹಲು ಕಟ್ಟಲಾಗಿತ್ತು. ಇದರ ನಿರ್ಮಾಣಕ್ಕೆ 17 ವರ್ಷಗಳ ಕಾಲ ಸಾವಿರಾರು ಕಾರ್ಮಿಕರು ಶ್ರಮಿಸಿದ್ದರು.

ಇಂತಹ ಅತ್ಯದ್ಭುತ ಭವನಕ್ಕೆ ಮೊದಲು ಪ್ರವೇಶಿಸಿದ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್. 1950ರ ಜನವರಿ 26ರಂದು ಪ್ರಸಾದ್ ಇದಕ್ಕೆ ಕಾಲಿಟ್ಟಿದ್ದರು. ಅದಕ್ಕೂ ಮೊದಲು ಭಾರತದ ಗವರ್ನರ್ ಜನರಲ್ ಚಕ್ರವರ್ತಿ ರಾಜಗೋಪಾಲಾಚಾರಿಯವರು ವೈಸರಾಯ್ ಹೌಸ್‌ನಲ್ಲಿ ಅಧಿಕಾರ ಚಲಾಯಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ