ಪಾಕಿಸ್ತಾನಕ್ಕೆ ಬುದ್ಧಿ ಬರಲ್ಲ, ಮಾತುಕತೆ ವ್ಯರ್ಥ: ಬಿಜೆಪಿ
ನವದೆಹಲಿ, ಶುಕ್ರವಾರ, 16 ಜುಲೈ 2010( 16:09 IST )
ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಮಾತುಕತೆ 'ಆರಂಭವನ್ನೇ ಕಂಡಿಲ್ಲ' ಎಂದು ವ್ಯಂಗ್ಯವಾಡಿರುವ ಬಿಜೆಪಿ ಮುಖಂಡ ಹಾಗೂ ಮಾಜಿ ವಿದೇಶಾಂಗ ಸಚಿವ ಯಶವಂತ ಸಿನ್ಹಾ, ವಿದೇಶಾಂಗ ಸಚಿವ ಸ್ಥಾನಕ್ಕೆ ಶಾಹ್ ಮೆಹಮೂದ್ ಖುರೇಷಿ ಯೋಗ್ಯ ವ್ಯಕ್ತಿಯಲ್ಲ ಎಂದು ಛಾಟಿ ಬೀಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ಉಭಯ ರಾಷ್ಟ್ರಗಳ ನಡುವೆ ಮಾತುಕತೆ ಆರಂಭವಾಗಿಯೇ ಇಲ್ಲ; ಪಾಕಿಸ್ತಾನವು ಹಫೀಜ್ ಸಯೀದ್‌ನನ್ನು ಯಾವತ್ತೂ ಸೆರೆ ಹಿಡಿಯುವುದಿಲ್ಲ ಎಂದು ನಾನು ಸವಾಲು ಹಾಕುತ್ತೇನೆ. ಯಾಕೆಂದರೆ ಆತ ಐಎಸ್ಐಯ ಭಾಗ ಎಂದರು.
ಮುಂಬೈ ಭಯೋತ್ಪಾದನಾ ದಾಳಿ ರೂವಾರಿ ಹಫೀಜ್‌ನನ್ನು ಬಂಧಿಸುವಂತೆ ಭಾರತ ಒತ್ತಡ ಹೇರುತ್ತಿದ್ದರೂ, ಅದಕ್ಕೆ ನಿರಾಕರಿಸುತ್ತಾ ಬಂದಿರುವ ಪಾಕಿಸ್ತಾನದ ಜತೆಗಿನ ಮಾತುಕತೆ ಕುರಿತು ಅವರು ಪ್ರತಿಕ್ರಿಯಿಸುತ್ತಿದ್ದರು.
ಭಯೋತ್ಪಾದನೆ ವಿಚಾರದಲ್ಲಿ ಭಾರತವು ಮಿತಿಯೊಂದಿಗೆ ಮಾತಿಗಿಳಿಯುತ್ತದೆ ಎಂಬ ಪಾಕ್ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಟೀಕೆ ಮತ್ತು ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣರತ್ತಲೂ ಸಿನ್ಹಾ ಕಿಡಿ ಕಾರಿದ್ದಾರೆ.
ಖುರೇಷಿ ವಿದೇಶಾಂಗ ಸಚಿವ ಹುದ್ದೆಗೆ ಅನರ್ಹ ವ್ಯಕ್ತಿ. ಅವರು ರಾಯಭಾರ ಕಚೇರಿಯ ಎರಡನೇ ಹಂತದ ಕಾರ್ಯದರ್ಶಿ ಹುದ್ದೆಗೂ ಯೋಗ್ಯರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಿನ್ಹಾ, ಇದು ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆ. ಇದನ್ನು ಅವರು ಪಾಕಿಸ್ತಾನ ಪ್ರಧಾನಿ ಮತ್ತು ಅಧ್ಯಕ್ಷರ ಗಮನಕ್ಕೆ ತರದೇ ಮಾಡಲು ಸಾಧ್ಯವಿಲ್ಲ ಎಂದರು.
ಭಾರತದ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಹೇಳಿಕೆಗೆ ಕೃಷ್ಣ ಜತೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆ ಖುರೇಷಿ ಟೀಕಿಸಿದ್ದನ್ನು ಸಿನ್ಹಾ ಉಲ್ಲೇಖಿಸುತ್ತಾ ಮೇಲಿನಂತೆ ಹೇಳಿದರು.
ಇಷ್ಟಾದ ಮೇಲೂ ಮಾತುಕತೆಯನ್ನು ಮುಂದುವರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಮಾತುಕತೆಯಲ್ಲಿ ಪಾಕಿಸ್ತಾನ ಆಸಕ್ತಿ ಇರುವಂತೆ ಕಾಣಿಸುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಕೃಷ್ಣ ಮೌನಕ್ಕೆ ಬಿಜೆಪಿ ವಿಷಾದ... ಪಿಳ್ಳೈ ವಿರುದ್ಧ ಬಹಿರಂಗವಾಗಿ ಪತ್ರಿಕಾಗೋಷ್ಠಿಯಲ್ಲಿ ಕಟು ಟೀಕೆಗಳನ್ನು ಖುರೇಷಿ ಮಾಡಿದಾಗಲೂ ಸುಮ್ಮನಿದ್ದ ಸಚಿವ ಕೃಷ್ಣ ವಿರುದ್ಧ ಕಿಡಿ ಕಾರಿರುವ ಬಿಜೆಪಿ, ಅವರ ಮೌನಕ್ಕಾಗಿ ವಿಷಾದಿಸಿದೆ.
ಮುಂಬೈ ದಾಳಿಯ ಹಿಂದೆ ಪಾಕಿಸ್ತಾನದ ತನಿಖಾ ದಳ ಐಎಸ್ಐ ಮತ್ತು ಹಫೀಜ್ ಸಯೀದ್ ಕೈವಾಡವಿದೆ ಎಂದು ಅಮೆರಿಕಾದ ವಶದಲ್ಲಿರುವ ಲಷ್ಕರ್ ಇ ತೋಯ್ಬಾ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿ ಬಹಿರಂಗಪಡಿಸಿದ್ದಾನೆ, ಇದನ್ನು ಪಾಕಿಸ್ತಾನ ಗಂಭೀರವಾಗಿ ಪರಿಗಣಿಸಬೇಕು ಎಂದು ಪಿಳ್ಳೈ ಹೇಳಿದ್ದರು.
ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದ ಖುರೇಷಿ, ಭಾರತದ ಗೃಹ ಕಾರ್ಯದರ್ಶಿಯವರ ಹೇಳಿಕೆಯಿಂದ ಮಾತುಕತೆಗೆ ಯಾವ ರೀತಿಯ ಸಹಕಾರವಾಗಲಿದೆ ಎಂಬುದನ್ನು ನಾನು ತಿಳಿದುಕೊಳ್ಳಬೇಕಾಗಿದೆ. ಪಿಳ್ಳೈ ಹೇಳಿಕೆ ಅನುಚಿತ ಎಂದು ನಾವಿಬ್ಬರೂ ಸಚಿವರು (ಕೃಷ್ಣ ಮತ್ತು ಖುರೇಷಿ) ಅಭಿಪ್ರಾಯಪಟ್ಟಿದ್ದೇವೆ ಎಂದು ಹೇಳಿದ್ದರು. ಆದರೂ ಸಚಿವ ಕೃಷ್ಣ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿ ಕುಳಿತಿದ್ದರು.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್, ಪಾಕಿಸ್ತಾನದ ವಿದೇಶಾಂಗ ಸಚಿವರು ಭಾರತದ ಗೃಹ ಕಾರ್ಯದರ್ಶಿ ಮೇಲೆ ದಾಳಿ ನಡೆಸಿದ್ದಾರೆ; ಆದರೆ ಅವರನ್ನು ಭಾರತದ ವಿದೇಶಾಂಗ ಸಚಿವರು ಸಮರ್ಥಿಸಿಕೊಳ್ಳದೇ ಇರುವುದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತಿದ್ದೇನೆ ಎಂದಿದ್ದಾರೆ.