ಆಂಧ್ರಪ್ರದೇಶದಲ್ಲೀಗ ಯಾತ್ರೆಗಳದ್ದೇ ಸುದ್ದಿ. ಅತ್ತ ಮಾಜಿ ಮುಖ್ಯಮಂತ್ರಿ ವೈಎಸ್ಆರ್ ಪುತ್ರ ಜಗನ್ ಮೋಹನ್ ತನ್ನ ಒದಾರ್ಪು ಯಾತ್ರೆ ನಡೆಸುತ್ತಿದ್ದರೆ, ಇತ್ತ ಟಿಡಿಪಿ ಮುಖ್ಯಸ್ಥ ಮಹಾರಾಷ್ಟ್ರಕ್ಕೆ ಬಸ್ ಯಾತ್ರೆ ಮಾಡಲು ಹೋಗಿ ಬಂಧನಕ್ಕೊಳಗಾಗಿದ್ದಾರೆ.
ಮಹಾರಾಷ್ಟ್ರದ ಬಾಬಲಿ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಲು ಯತ್ನಿಸಿದ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಸೇರಿದಂತೆ ಒಟ್ಟು 70 ರಾಜಕಾರಣಿಗಳನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಎರಡು ರಾಜ್ಯಗಳ ನಡುವಿನ ಅಣೆಕಟ್ಟು ವಿವಾದಕ್ಕೆ ಸಂಬಂಧಪಟ್ಟಂತೆ ನಾಯ್ಡು ನೇತೃತ್ವದಲ್ಲಿ ಟಿಡಿಪಿ ಬಸ್ ಯಾತ್ರೆ ಹಮ್ಮಿಕೊಂಡಿತ್ತು.
ಈ ಅಣೆಕಟ್ಟು ನಿರ್ಮಾಣದ ವಿರುದ್ಧ ಆಂಧ್ರಪ್ರದೇಶ ಸರಕಾರವು ಸುಪ್ರೀಂ ಕೋರ್ಟ್‌ಗೆ ಹೋಗಿದೆ. ಆದರೂ ಮಹಾರಾಷ್ಟ್ರವು ತನಗೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ನೀರನ್ನು ಗೋದಾವರಿ ನದಿಯಿಂದ ಪಡೆಯುತ್ತಿದೆಯೇ ಎಂಬುದನ್ನು ಪರಿಶೀಲನೆ ನಡೆಸಲು ನಾಯ್ಡು ತಂಡವು ಹೊರಟಿತ್ತು.
ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಚಂದ್ರಬಾಬು ನಾಯ್ಡು ಭೇಟಿ ನ್ಯಾಯಾಂಗ ನಿಂದನೆಯಾಗುತ್ತದೆ. ಇದು ಅಕ್ರಮ ಮತ್ತು ಆ ಪ್ರದೇಶದಲ್ಲಿನ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆಯಿರುತ್ತದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಆರ್.ಆರ್. ಪಾಟೀಲ್ ನೀಡಿದ್ದ ಎಚ್ಚರಿಕೆಯನ್ನು ಗಣನೆಗೆ ತೆಗೆದುಕೊಳ್ಳದ ಟಿಡಿಪಿ ಬಸ್ ಯಾತ್ರೆ ಹಮ್ಮಿಕೊಂಡಿತ್ತು.
ತೆಲಂಗಾಣ ಪ್ರಾಂತ್ಯದಲ್ಲಿನ 12 ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 27ರಂದು ಉಪ ಚುನಾವಣೆ ನಡೆಯಲಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ತೆಲಂಗಾಣ ನೀರಿನ ಸಮಸ್ಯೆಯ ವಿರುದ್ಧ ಹೋರಾಡಲು ನಾಯ್ಡು ಹೊರಟಿದ್ದಾರೆ ಎಂದು ಬಸ್ ಯಾತ್ರೆಯನ್ನು ವಿಶ್ಲೇಷಿಸಲಾಗಿದೆ.
ಸುಮಾರು ನಾಲ್ಕು ಬಸ್ಸುಗಳಲ್ಲಿ ಟಿಡಿಪಿ ಶಾಸಕರು ಮತ್ತು ಲೋಕ ಸಟ್ಟಾ ನಾಯಕರು ಆಂಧ್ರಪ್ರದೇಶ-ಮಹಾರಾಷ್ಟ್ರ ಗಡಿಯಲ್ಲಿನ ಅಣೆಕಟ್ಟು ಪ್ರದೇಶಕ್ಕೆ ಹೊರಟಿದ್ದರು.
ಇದಕ್ಕೂ ಮೊದಲು ಆಂಧ್ರ ಮುಖ್ಯಮಂತ್ರಿ ಕೆ. ರೋಸಯ್ಯ, ಬಸ್ ಯಾತ್ರೆಯನ್ನು ರದ್ದುಗೊಳಿಸುವಂತೆ ನಾಯ್ಡು ಅವರಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಇದನ್ನು ಧಿಕ್ಕರಿಸಿದ್ದ ನಾಯ್ಡು, ಪಕ್ಕದ ರಾಜ್ಯ ನಮ್ಮ ರಾಜ್ಯದ ಮೇಲೆ ನಡೆಸುತ್ತಿರುವ ಆಕ್ರಮಣವನ್ನು ನೋಡುತ್ತಾ ಸುಮ್ಮನಿರಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದರು.